
ಆಳಂದ: ಪಟ್ಟಣದ ಆರ್ಯ ಸಮಾಜ ಮಂದಿರದಲ್ಲಿ ಕಳೆದ ಒಂದು ತಿಂಗಳಿನಿಂದ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ವೇದ ಯಜ್ಞವು ಇಂದು ಅಮಾವಾಸ್ಯೆಯ ಪವಿತ್ರ ದಿನದಂದು ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ಭವ್ಯ ಸಮಾರೋಪ ಮುಕ್ತಾಯ ಕಂಡಿತು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸೋಲಾಪುರದ ಖ್ಯಾತ ಪಂಡಿತ ರಾಜವೀರ ಶಾಸ್ತ್ರಿ ಅವರು ವಹಿಸಿದ್ದರು. ಅವರು ವೇದ ಮಂತ್ರಗಳ ಮಹತ್ವ ಹಾಗೂ ಮಾನವ ಜೀವನದಲ್ಲಿ ಯಜ್ಞದ ಆವಶ್ಯಕತೆಯನ್ನು ಸದ್ಭಕ್ತರಿಗೆ ಬೋಧಿಸಿದರು. ಮುಖ್ಯ ಪುರೋಹಿತರಾದ ರವೀಂದ್ರ ಚವ್ಹಾಣ್ ಅವರ ನೇತೃತ್ವದಲ್ಲಿ ವಿಶ್ವ ಕಲ್ಯಾಣ ಮತ್ತು ಲೋಕ ಶಾಂತಿಗಾಗಿ ಯಜ್ಞದ ಕೊನೆಯ ದಿನದ ವಿಶೇಷ ‘ಪೂರ್ಣಾಹುತಿ’ಯನ್ನು ನೆರವೇರಿಸಲಾಯಿತು.
ಮಾಜಿ ಶಾಸಕ ಸುಭಾಷ ಗುತ್ತೇದಾರ,ಆರ್ಯ ಸಮಾಜದ ಪ್ರಧಾನರಾದ ದಯಾನಂದ ಕಠಾರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಪ್ರಮುಖ ಮುಖಂಡರಾದ ವಿನೋದ ಸುರೆ, ಅಶ್ವಿನ್ ಚಿಂಚುರೆ, ಚಿದಾನಂದ ಬುಧಾರಪ್ಪ, ಪ್ರಭಾಕರ್ ಘನಾತೆ, ಶಶಿ ಭಂಡಾರೆ ಸಚಿನ್ ಬಂಡಗರ ಹಾಗೂ ದಿನೇಶ್ ನವಲೆ ಸೇರಿದಂತೆ ನೂರಾರು ಸದ್ಭಕ್ತರು ಉಪಸ್ಥಿತರಿದ್ದು ಆಹುತಿಗಳನ್ನು ಅರ್ಪಿಸಿದರು. ಯಜ್ಞದ ಮುಕ್ತಾಯದ ನಂತರ ನೆರೆದಿದ್ದ ಸಹಸ್ರಾರು ಭಕ್ತಾದಿಗಳಿಗೆ ಮಹಾಪ್ರಸಾದವನ್ನು ವಿತರಿಸಲಾಯಿತು.























