
ಯಾದಗಿರಿ: ವಿಶ್ವಕರ್ಮ ಸಮಾಜದ ಆರಾಧ್ಯ ದೈವ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವವನ್ನು ಸೆಪ್ಟೆಂಬರ್ ೧೭ರಂದು ಗುರುವಾರ ನಗರದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಯಾದಗಿರಿ ತಾಲೂಕು ಅಧ್ಯಕ್ಷ ಬನ್ನಪ್ಪ ಕಾಳಬೆಳಗುಂದಿ ತಿಳಿಸಿದರು.
ಈ ಕುರಿತು ಮಂಗಳವಾರ ಹೇಳಿಕೆ ನೀಡಿರುವ ಅವರು, ಸೆಪ್ಟೆಂಬರ್ ೧೭ರಂದು ಮಧ್ಯಾಹ್ನ ೧೨ ಗಂಟೆಗೆ ನಗರದ ಲುಂಬಿನಿವನ ರಸ್ತೆಯಲ್ಲಿರುವ ವಿಶ್ವಕರ್ಮ ವೃತ್ತದಿಂದ ಶ್ರೀ ವಿಶ್ವಕರ್ಮರ ಭಾವಚಿತ್ರದೊಂದಿಗೆ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯು ಶಾಸ್ತ್ರೀ ವೃತ್ತ, ನೇತಾಜಿ ಸುಭಾಷ್ ವೃತ್ತದ ಮೂಲಕ ಸಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ದಿ. ವಿಶ್ವನಾಥ್ ರೆಡ್ಡಿ ಮುದ್ನಾಳ್ ಸಭಾಂಗಣ ತಲುಪಲಿದೆ ಎಂದರು.
ನAತರ ನಡೆಯುವ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರು, ನಾಯಕರು, ರಾಜಕೀಯ ಗಣ್ಯರು ಹಾಗೂ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಜಯಂತ್ಯೋತ್ಸವದ ಅಂಗವಾಗಿ ಶ್ರೀ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆಯನ್ನು ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠಾಧೀಶರು ಹಾಗೂ ಯಾದಗಿರಿಯ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ರವೀಂದ್ರ ಮಹಾಸ್ವಾಮಿಗಳು ನೆರವೇರಿಸಲಿದ್ದಾರೆ.
ಕಾರ್ಯಕ್ರಮವನ್ನು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಉದ್ಘಾಟಿಸಲಿದ್ದು, ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳು ಹಾಗೂ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಬನ್ನಪ್ಪ ಕಾಳಬೆಳಗುಂದಿ ತಿಳಿಸಿದರು.
ಜಿಲ್ಲೆಯ ವಿಶ್ವಕರ್ಮ ಸಮಾಜದ ಎಲ್ಲ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು
























