
ಕೆಜಿಎಫ್,ಸೆ.೧೫:ತಾಲೂಕಿನ ಗಡಿ ಭಾಗದ ಪೂಗಾನಹಳ್ಳಿ ಗ್ರಾಮದಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಗ್ರಾಮಸ್ಥರು ಸಂಭ್ರಮ, ಭಕ್ತಿ ಹಾಗೂ ಸಡಗರದಿಂದ ಆಚರಿಸಿದರು. ಗ್ರಾಮದ ಯುವಕರು ಹಾಗೂ ಸಾರ್ವಜನಿಕರ ಸಹಕಾರದಿಂದ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ, ಅರ್ಚನೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.
ಹಬ್ಬದ ಅಂಗವಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ವಿವಿಧ ರೀತಿಯ ಅಲಂಕಾರಗಳೊಂದಿಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು.ಯುವಕರು ಉತ್ಸಾಹದಿಂದ ಹಬ್ಬದ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದು, ಜನಪ್ರತಿನಿಧಿಗಳು, ಗ್ರಾಮ ಮುಖಂಡರು, ಮಹಿಳೆಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡು ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಸುಭಿಕ್ಷೆ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಕೆಜಿಎಫ್ ತಾಲೂಕಿನ ಗಡಿ ಭಾಗದ ಪೂಗಾನಹಳ್ಳಿ ಗ್ರಾಮ ಮಾತ್ರವಲ್ಲದೆ, ತಾಲೂಕಿನ ಹಲವು ಗ್ರಾಮಗಳ ಗಲ್ಲಿ?ಗಲ್ಲಿಗಳಲ್ಲೂ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸಲಾಯಿತು.
ಮನೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನಿಗೆ ವಿವಿಧ ಬಗೆಯ ಹೂವುಗಳು ಮತ್ತು ಅಲಂಕಾರಗಳಿಂದ ಶೃಂಗರಿಸಿ, ಭಕ್ತರು ಪೂಜೆ ಸಲ್ಲಿಸಿದರು.
ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಯುವಕರ ಒಗ್ಗಟ್ಟು, ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಹಾಗೂ ಸಾರ್ವಜನಿಕರ ಸಹಕಾರ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದಿತು. ಹಲವು ಕಡೆಗಳಲ್ಲಿ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ವಿಘ್ನ ವಿನಾಶಕ ಗಣಪತಿ ಎಲ್ಲರಿಗೂ ಆರೋಗ್ಯ, ಶಾಂತಿ, ಸಂತೋಷ ಹಾಗೂ ಸಮೃದ್ಧಿಯನ್ನು ಕರುಣಿಸಲಿ ಎಂಬುದು ಗ್ರಾಮಸ್ಥರ ಪ್ರಾರ್ಥನೆಯಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುನಿಲ್ ಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಪುರುಷೋತ್ತಮ್, ಯುವ ಮುಖಂಡ ಧನುಷ್ ಸೇರಿದಂತೆ ಗ್ರಾಮದ ಮುಖಂಡರು ಯುವಕರರು ಮಹಿಳೆಯರು ಉಪಸ್ಥಿತರಿದ್ದು ವಿಶೇಷ ಪೂಜೆ ಸಲ್ಲಿಸಿದರು.
























