
ಬೆಂಗಳೂರು, ಜ. ೨೨: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಕಾನೂನನ್ನು ತಕ್ಷಣವೇ ರದ್ದುಪಡಿಸಬೇಕು. ಬಡವರ, ಕೃಷಿ ಕಾರ್ಮಿಕರ ಗ್ರಾಮೀಣ ಆಸ್ತಿಗೆ ಅವಕಾಶ ಕಲ್ಪಿಸುವ ನಿರುದ್ಯೋಗಿ ಭತ್ಯೆ ಒದಗಿಸುವ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಮರು ಸ್ಥಾಪಿಸಬೇಕೆಂದು ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರ ಭಾಷಣದ ಮೂಲಕ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ವಿಧಾನ ಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದಲ್ಲಿ ಮನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿರುವುದಕ್ಕೆ ರಾಜ್ಯ ಸರ್ಕಾರ ಆಕ್ರೋಶ ವ್ಯಕ್ತಪಡಿಸಿ,
ಇದರಿಂದಾಗಿ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು ಸಣ್ಣ ರೈತರ, ಮಹಿಳೆಯರ ಉದ್ಯೋಗದ ಮತ್ತು ನಿರುದ್ಯೋಗ ಭತ್ತೆ ಹಕ್ಕನ್ನು ಕಸಿದುಕೊಂಡಿದೆ. ಅಲ್ಲದೆ ಗ್ರಾಮೀಣ ಭಾರತದ ಅಭಿವೃದ್ಧಿ ಪರ್ವದ ಯೋಜನೆಯಾಗಿದ್ದ ಮನರೇಗಾ ಕಾಯ್ದೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸುವ ಮೂಲಕ ದೇಶದ ಗ್ರಾಮೀಣ ಬದುಕನ್ನು ದುರ್ಬಲಗೊಳಿಸಿದೆ ಎಂದು ಕಿಡಿ ಕಾರಿದೆ.
ಮನರೇಗಾ ಕಾಯ್ದೆಯು ಖಾತ್ರಿ ಮಾಡಿದ್ದ ಉದ್ಯೋಗದ ಖಾತ್ರಿಯನ್ನು ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿ ಮಾಡುವ ಮೂಲಕ ಕಿತ್ತುಕೊಂಡಿದೆ. ಮನರೇಗಾ ಕಾಯ್ದೆಯ ಸೆಕ್ಷನ್ ೩ ರ ಪ್ರಕಾರ ಯಾವುದೇ ಪಂಚಾಯಿತಿಯಲ್ಲಿ ಉದ್ಯೋಗ ನೀಡಬೇಕೆಂದು ಅರ್ಜಿ ಹಾಕಿದ ಪ್ರತಿಯೊಬ್ಬರಿಗೂ ಉದ್ಯೋಗ ನೀಡಬೇಕೆಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಕಾರ್ಪೊರೇಟ್ ಬಂಡವಾಳಶಾಹಿಗಳ ಹಿತಾಸಕ್ತಿ ಕಾಪಾಡಲು ವಿಬಿ ಜಿ ರಾಮ್ ಜಿ ಯೋಜನೆಯನ್ನು ರೂಪಿಸಿ ಗ್ರಾಮೀಣ ಜನರ ಹಿತಾಸಕ್ತಿಯನ್ನು ಕೇಂದ್ರ ಸರ್ಕಾರ ಗಾಳಿಗೆ ತೂರಿದೆ ಎಂದು ರಾಜ್ಯ ಸರ್ಕಾರ ರಾಜ್ಯಪಾಲರ ಭಾಷಣದಲ್ಲಿ ಹೇಳಿದೆ.
ಮನರೇಗಾ ಯೋಜನೆಯಲ್ಲಿದ್ದ ಗಾಂಧೀಜಿಯವರ ಪ್ರಧಾನ ಆಶಯವಾದ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಹೊಸ ಕಾಯ್ದೆಯು ದುರ್ಬಲಗೊಳಿಸಿದೆ. ರಾಷ್ಟ್ರದ ಪ್ರಜಾ ಸತ್ತೆಗೆ ಮೂಲಭೂತ ಅಡಿಪಾಯ ಒದಗಿಸುವ ಪಂಚಾಯತ ರಾಜ್ ಸಂಸ್ಥೆಗಳು ಅಧಿಕಾರ ವಿಕೇಂದ್ರೀಕರಣದ ಸಂಕೇತಗಳಾಗಿವೆ. ಈ ವಿಕೇಂದ್ರೀಕೃತ ವ್ಯವಸ್ಥೆಯ ಅಡಿಪಾಯವನ್ನೇ ಕೆಂದ್ರ ಸರ್ಕಾರ ಬುಡಮೇಲು ಮಾಡಿ ಕೇಂದ್ರೀಕೃತ ವ್ಯವಸ್ಥೆಗೆ ಬುನಾದಿ ಹಾಕಿದೆ ಎಂದರು.
ಮನರೇಗಾ ಕಾಯ್ದೆಯಲ್ಲಿ ಕಾಮಗಾರಿಗಳನ್ನು ಗ್ರಾಮ ಸಭೆಗಳಲ್ಲೆ ತೀರ್ಮಾನ ಮಾಡಿ ಅನುಷ್ಠಾನ ಮಾಡಲಾಗುತ್ತಿತ್ತು. ಆದರೆ ಈ ಹೊಸ ಕಾಯ್ದೆಯಲ್ಲಿ ಗ್ರಾಮ ಸಭೆಗಳಿಗಿದ್ದ ಅಧಿಕಾರವನ್ನು ಕೇಂದ್ರ ಸರ್ಕಾರದ ಮಾನದಂಡಗಳ ಮೂಲಕ ನಿರ್ಬಂಧಿಸಲಾಗಿದೆ. ಈ ಕ್ರಮ ಪ್ರಜಾಸತ್ತೆಗೆ ವಿರೋಧಿ ಮಾತ್ರ ಅಲ್ಲ, ರಾಷ್ಟ್ರದ ಹಿತಾಸಕ್ತಿಯನ್ನು ವಿನಾಶದ ಅಂಚಿಗೆ ದೂಡುವ ಪ್ರಗತಿ ವಿರೋಧಿ ಕ್ರಮವಾಗಿದೆ ಎಂದು ಕಿಡಿಕಾರಿದರು.
ನರೇಗಾ ಯೋಜನೆಯಿಂದ ಗುಳೇ ಹೋಗುವ ಸಮಸ್ಯೆ ಕಡಿಮೆಯಾಗಿತ್ತು. ಆದರೆ ಈ ಹೊಸ ಕಾಯ್ದೆಯಲ್ಲಿ ಕೇಂದ್ರ ಸರ್ಕಾರದಿಂದಲೇ ನಿರ್ಧಾರಗಳನ್ನು ಹೇರಲಾಗುತ್ತದೆ. ದೆಹಲಿಯಲ್ಲಿ ಅಧಿಕಾರಿಗಳ ಪರಿಷತ್ತನ್ನು ರಚಿಸಿ ಈ ಅಧಿಕಾರಿಗಳ ಪರಿಷತ್ತು ಯಾವ ಪಂಚಾಯತಿಗಳಲ್ಲಿ ಈ ಯೋಜನೆಗಳನ್ನು ಜಾರಿಗೆ ತರಬೇಕೆಂಬುದನ್ನು ನಿರ್ಣಯಿಸುತ್ತದೆ. ಹಾಗಾಗಿ ಉದ್ಯೋಗ ಅರಸಿ ದೊಡ್ಡ ಪಟ್ಟಣಗಳಿಗೆ ಗುಳೆ ಹೋಗುವ ವ್ಯವಸ್ಥೆಯನ್ನು ಮರು ಸ್ಥಾಪಿಸುವ ವಿಬಿ ಜಿ ರಾಮ್ ಜಿ ಯೋಜನೆಗೆ ರಾಜ್ಯಪಾಲರು ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಹೊಸ ಕಾಯ್ದೆಯನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಎಲ್ಲ ರಾಜ್ಯಗಳ ಅಭಿಪ್ರಾಯ ಪಡೆಯಬೇಕಾಗಿತ್ತು. ಏಕೆಂದರೆ ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯಗಳ ಪಾಲು ಇರುವುದರಿಂದ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸದೆ ಏಕಾ ಏಕಿ ಕೇಂದ್ರ ಸರ್ಕಾರ ಹೊಸ ಕಾಯ್ದೆಯನ್ನು ಜಾರಿಗೆ ತಂದಿರುವುದು ಸಂವಿಧಾನ ಬಾಹೀರ ಎಂದು ಆರೋಪಿಸಿದರು.
ವಿಬಿ ಜಿ ರಾಮ್ ಜಿ ಕಾಯ್ದೆಯಲ್ಲಿ ಮಹಾತ್ಮಾ ಗಾಂಧೀಜಿಯವರ ಹೆಸರನ್ನು ತೆಗೆದು ಹಾಕಲಾಗಿದೆ. ಕೇಂದ್ರ ಸರ್ಕಾರದ ನೀತಿಗಳಿಂದ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ರಾಜ್ಯ ಸರ್ಕಾರಗಳು ಹೊಸ ಕಾಯ್ದೆಯ ಅನುಸಾರ ಶೇ. ೪೦ ರಷ್ಟು ಅನುದಾನ ನೀಡಬೇಕಾಗುತ್ತದೆ. ರಾಜ್ಯಕ್ಕೆ ಅನುದಾನ ನೀಡದಿದ್ದರೆ ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಯೋಜನೆಗೆ ಅನುದಾನಗಳನ್ನು ನೀಡುವುದಿಲ್ಲ. ಹೀಗಾಗಿ ಯೋಜನೆಯು ನಿಧಾನವಾಗಿ ಅವಸಾನ ಅಂಚಿಗೆ ಕೊಂಡೊಯ್ಯಲಿದೆ ಎಂದರು.
ಈ ಎಲ್ಲ ಕಾರಣಗಳಿಂದಾಗಿ ಈ ಯೋಜನೆಯನ್ನು ರದ್ದುಪಡಿಸಿ ಮನರೇಗಾ ಯೋಜನೆಯನ್ನು ಮರುಸ್ಥಾಪಿಸಬೇಕೆಂದು ರಾಜ್ಯಪಾಲರು ಒತ್ತಾಯಿಸಿದರು.




























