
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.30: ತುಂಗಭದ್ರಾ ಜಲಾಶಯದಿಂದ ಈ ವರ್ಷ ರೈತರಿಗೆ ನೀರು ಒದಗಿಸುವ ವಿಷಯದಲ್ಲಿ ರೈತರು ಆತಂಕದಲ್ಲಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಸರಗಕಾರಕ್ಕೆ ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಆಗ್ರಹಿಸಿದ್ದಾರೆ.
ಈ ಕುರಿತು ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು. ಇತ್ತೀಚೆಗೆ ಡ್ಯಾಂ ತಜ್ಞ ಕನ್ನಯ್ಯ ಲಾಲ್ ಅವರು ಈ ವರ್ಷ ಶೇ 70 ರಷ್ಟು ಮಾತ್ರ ನೀರು ಸಂಗ್ರಹ ಮಾಡಬಹುದು ಎಂದು ಹೇಳಿದ್ದಾರೆ. ಇದರಿಂದ ತುಂಗಭದ್ರ ಅಚ್ಚುಕಟ್ಟು ಪ್ರದೇಶದ ರೈತರು ಈ ವರ್ಷ ತುಂಗಭದ್ರ ಕಾಲುವೆಗಳಿಗೆ ಬಿಡುವ ನೀರಿನ ಅವಧಿ ಬಗ್ಗೆ ಆತಂಕದಲ್ಲಿದ್ದಾರೆ. ಎರಡನೇ ಬೆಳೆಗೆ ನೀರು ಸಿಗುತ್ತ, ಮೆಣಸಿನಕಾಯಿ ಬೆಳೆ ಬೆಳೆಯಲು ಆಗುತ್ತ ಎಂಬ ಪ್ರಶ್ನೆಯಲ್ಲಿದ್ದಾರೆ ಅದಕ್ಕಾಗಿ ಸ್ಪಷ್ಟನೆ ನೀಡಿ.
ಇತರೇ ನೀರಾವರಿ ತಜ್ಞರ ಪ್ರಕಾರ ಜಲಾಶಯದಲ್ಲಿ
25 ಟಿಎಂಸಿ ನೀರು ಸಂಗ್ರಹವಾದ ತಕ್ಷಣ ಕಾಲುವೆಗಳಿಗೆ ನೀರು ಬಿಟ್ಟರೆ ಎರಡನೇ ಬೆಳೆಯನ್ನು ಬೆಳೆಯಲು ಸಹಕಾರಿಯಾಗುತ್ತೆ ಈ ಬಗ್ಗೆ ಸಭೆ ಕರೆದು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ ಎಂದರು.
ಅಂದು ಜಲಾಶಯದ 19 ನೇ ಗೇಟ್ ಮುರಿದಾಗ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಈ ಗೇಟ್ ಸೇರಿದಂತೆ ಜಲಾಶಯದ ಎಲ್ಲಾ ಗೇಟ್ ಗಳನ್ನು ದುರಸ್ಥಿ ಮಾಡಲಿದೆಂದು ಹೇಳಿದ್ದರು. ಆದರೆ ಆ ಕಾರ್ಯ ಆಗಲಿಲ್ಲ. 19 ನೇ ಗೇಟ್ ಸಹ ಹೊಸದಾಗಿ ಅಳವಡಿಸಲು ಸಾಧ್ಯವಿಲ್ಲ.
ಇದಕ್ಕೆ ಟೆಂಡರ್ ಕರೆದಿದೆಂದು ಹೇಳುತ್ತಿದ್ದೀರಿ. ಅದು ಈಗ ಆಗದ ಕೆಲಸ ಅದಕ್ಕಾಗಿ ಕೂಡಲೇ ನೀರು ಬಿಡುವ ಬಗ್ಗೆ ತಿಳಿಸಬೇಕು ಎಂದರು.
ಈಗಾಗಲೇ ಮೆಣಸಿನಕಾಯಿ, ಭತ್ತದ ಬೆಲೆ ಕುಸಿದು ರೈತರು ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಎರಡನೇ ಬೆಳೆ ಇಲ್ಲ ಎಂದರೆ ಮತ್ತೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.
ಎಲ್ಲಾ ರೈತ ಸಂಘಟನೆಗಳನ್ನು ಒಂದು ಗೂಡಿಸಿ ಈ ಬಗ್ಗೆ ಸರ್ಕಾರದ ವಿರುದ್ದ ಹೋರಾಟ ರೂಪಿಸಲಿದೆಂದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಮುಖಂಡರುಗಳಾದ ಕೊಂಚಿಗೇರಿ ಮಲ್ಲಪ್ಪ, ಸಿದ್ದಯ್ಯ ಸ್ವಾಮಿ, ಗೋವಿಂದಪ್ಪ, ಭೀಮನಗೌಡ, ಬಸವರಾಜಪ್ಪ, ಉಮೇಶ್ ಗೌಡ, ಜಾಲಿಹಾಳ್ ಶ್ರೀಧರಗೌಡ ಮೊದಲಾದವರು ಇದ್ದರು.