
ಕಲಬುರಗಿ:ಜೂ.೪:ಕಳೆದ ಎರಡು ದಶಕಗಳಿಂದ ವಾಡಿ ಪಟ್ಟಣದ ಬಡ ರೈತ-ಕಾರ್ಮಿಕರ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಹಕ್ಕೊತ್ತಾಯ ಮಂಡಿಸಿ, ಎಐಡಿಎಸ್‌ಓ ಮತ್ತು ಎಐಡಿವೈಒ ನೇತೃತ್ವದಲ್ಲಿ ನಡೆದ ನಿರಂತರ ಹಾಗೂ ರಾಜಿರಹಿತ ಹೋರಾಟಕ್ಕೆ ಕೊನೆಗೂ ಅಭೂತಪೂರ್ವ ಜಯ ಸಿಕ್ಕಿದೆ. ವಾಡಿ ಪಟ್ಟಣಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜನ್ನು ಮಂಜೂರು ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಐತಿಹಾಸಿಕ ಯಶಸ್ಸಿನ ಹಿನ್ನೆಲೆಯಲ್ಲಿ ಇಂದು ವಾಡಿ ಪಟ್ಟಣದಲ್ಲಿ ಎಐಡಿಎಸ್‌ಒ ಹಾಗೂ ಎಐಡಿವೈಒ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಯುವಜನರು ಮತ್ತು ಸಾರ್ವಜನಿಕರು ಒಗ್ಗೂಡಿ ಬೃಹತ್ “ಹೋರಾಟದ ವಿಜಯೋತ್ಸವ” ಆಚರಿಸಿದರು.
ಈ ಸಂದರ್ಭದಲ್ಲಿ ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ದೇವದುರ್ಗ ಮಾತನಾಡಿ, “ವಾಡಿ ಪಟ್ಟಣಕ್ಕೆ ಈ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಪಿಯು ಕಾಲೇಜು ಪ್ರಾರಂಭಿಸುವAತೆ ಆದೇಶ ಹೊರಡಿಸಿರುವುದನ್ನು ಎಐಡಿಎಸ್‌ಓ ಮತ್ತು ಎಐಡಿವೈಒ ಸಂಘಟನೆಯು ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ. ಇದು ಈ ಭಾಗದ ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರು ಕಳೆದ ೨೦ ವರ್ಷಗಳಿಂದ ಕಾಲೇಜು ಸ್ಥಾಪನೆಗಾಗಿ ರಾಜಿ ಇಲ್ಲದೆ ನಡೆಸಿದ ನಿರಂತರ ಜನಪರ ಹೋರಾಟಕ್ಕೆ ಸಂದ ನ್ಯಾಯಬದ್ಧ ಜಯವಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಅವರು, “ಇಲ್ಲಿನ ಬಡ ಕಾರ್ಮಿಕರ ಹಾಗೂ ರೈತರ ಮಕ್ಕಳು ಸೂಕ್ತ ಕಾಲೇಜು ವ್ಯವಸ್ಥೆ ಇಲ್ಲದೆ ದೂರದ ಊರುಗಳಿಗೆ ಅಲೆಯಬೇಕಾಗಿತ್ತು. ಆರ್ಥಿಕ ಸಂಕಷ್ಟದಿAದಾಗಿ ಎಷ್ಟೋ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ವಿದ್ಯಾರ್ಥಿ-ಯುವಜನರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ, ಶಾಸಕರ ಮನೆ ಮುಂದೆ ಧರಣಿ ನಡೆಸಿದ್ದರು. ಹಿಂದೆ ಶಿಕ್ಷಣ ಮಂತ್ರಿಯಾಗಿದ್ದ ವಿಶ್ವೇಶ್ವರಯ್ಯ ಕಾಗೇರಿ, ಪ್ರಸ್ತುತ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ , ಶಶಿಲ್ ನಮೋಶಿ, ಯಡಿಯೂರಪ್ಪ, ಪ್ರಿಯಾಂಕ್ ಖರ್ಗೆ, ವಾಲ್ಮೀಕ ನಾಯಕ, ಸೇರಿದಂತೆ ಹಿಂದಿನ ಎಲ್ಲಾ ಶಿಕ್ಷಣ ಸಚಿವರಿಗೆ, ಜನಪ್ರತಿನಿಧಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಅಷ್ಟೇ ಅಲ್ಲದೆ, ೧೦ ಸಾವಿರಕ್ಕೂ ಅಧಿಕ ಸಹಿಗಳನ್ನು ಸಂಗ್ರಹಿಸಿ ಅಧಿಕಾರಿಗಳಿಗೆ ಒಪ್ಪಿಸಲಾಗಿತ್ತು. ಈ ಎಲ್ಲಾ ಸುದೀರ್ಘ ಹೋರಾಟಗಳ ಪ್ರತಿಫಲವಾಗಿ ಇಂದು ವಾಡಿ ಪಟ್ಟಣಕ್ಕೆ ಕಾಲೇಜು ಮಂಜೂರಾಗಿದೆ. ‘ಹೋರಾಟದಲ್ಲಿ ಶಕ್ತಿಯಿದೆ’ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಇದೇ ಹರ್ಷ ಮತ್ತು ಒಗ್ಗಟ್ಟಿನೊಂದಿಗೆ ಸಾರ್ವಜನಿಕ ಶಿಕ್ಷಣವನ್ನು ಉಳಿಸಲು ಹಾಗೂ ಶಿಕ್ಷಣದ ವ್ಯಾಪಾರೀಕರಣದ ವಿರುದ್ಧ ಮುಂಬರುವ ದಿನಗಳಲ್ಲೂ ಹೋರಾಡಲು ನಾವೆಲ್ಲರೂ ಸನ್ನದ್ಧರಾಗಬೇಕು” ಎಂದು ಕರೆ ನೀಡಿದರು.
ಇದೇ ವೇಳೆ ಕಾರ್ಮಿಕ ಮುಖಂಡರಾದ ಶರಣು ಹೇರೂರು ಮಾತನಾಡಿ, “ಸರ್ಕಾರಿ ಕಾಲೇಜು ಮಂಜೂರಾಗಿರುವುದು ಅತ್ಯಂತ ಸಂತೋಷದ ವಿಷಯ. ಆದರೆ ಸರ್ಕಾರ ಕೇವಲ ಆದೇಶಕ್ಕೆ ಸೀಮಿತವಾಗದೆ, ಪ್ರಸ್ತುತ ವರ್ಷದಿಂದಲೇ ತರಗತಿಗಳನ್ನು ಆರಂಭಿಸಬೇಕು. ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಭಾಗದಲ್ಲಿ ತಕ್ಷಣವೇ ಕಾಲೇಜಿಗೆ ಅರ್ಹ ಹಾಗೂ ಉತ್ತಮ ಉಪನ್ಯಾಸಕರನ್ನು ನೇಮಿಸಬೇಕು. ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವುದರೊಂದಿಗೆ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸಬೇಕು. ಈ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರ್ಕಾರಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಐಡಿಎಸ್‌ಓ ಜಿಲ್ಲಾ ಉಪಾಧ್ಯಕ್ಷರಾದ ಗೋವಿಂದ ಯಳವರ, ಎಐಡಿವೈಓ ವಾಡಿ ಉಪಾಧ್ಯಕ್ಷರಾದ ರಾಜು ವಡೆಯರ್, ಸದಸ್ಯರಾದ ದತ್ತಾತ್ರೇಯ ಹುಡೆಕರ್, ಪಟ್ಟದ ನಾಗರಿಕರಾದ ಅಲ್ಲಾಭಕಾಶ್, ಚಂದ್ರಕಾAತ್ ಪಗಲಪುರ್, ಶ್ರೀಶೈಲ್ ಕಡಗೂರು, ವಿಠ್ಠಲ್ ರಾಟೋಡ್, ಸಿದ್ದಯ್ಯ ಶಾಸ್ತ್ರಿ, ಆರ್ ಎನ್ ಆನಂದ ಹಾಗೂ ನೂರಾರು ಜನ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

























