
ವಿಜಯಪುರ, ಡಿ. 12:ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂದು ಆಗ್ರಹಿಸಿ ಹೋರಾಟ ಸಮಿತಿ ಕೈಗೊಂಡ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಗುರುವಾರ 85ನೇ ದಿನಕ್ಕೆ ಕಾಲಿಟ್ಟಿದೆ.
ಸರಕಾರಿ ವೈದ್ಯಕೀಯ ಕಾಲೇಜು ಸಮಿತಿಯ ಸದಸ್ಯ ಬೋಗೇಶ ಸೋಲಾಪುರ ಅವರು ಗುರುವಾರ ದೆಹಲಿಯಲ್ಲಿ ಜನಸ್ವಸ್ಥಂ ಅಭಿಯಾನದಿಂದ ನಡೆಯುತ್ತಿರುವ “ರಾಷ್ಟ್ರೀಯ ಆರೋಗ್ಯ ಹಕ್ಕುಗಳ ಸಮಾವೇಶದಲ್ಲಿ” ವಿಜಯಪುರ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜಿಗಾಗಿ ಕಳೆದ 85 ದಿನಗಳಿಂದ ಯಾವ ಯಾವ ರೀತಿಯಲ್ಲಿ ಚಳವಳಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂಬುದರ ಕುರಿತು ವಿಶೇಷ ವರದಿ ಮಂಡಿಸಿದ್ದಾರೆ.
ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ವಿಜಯಪುರ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಸಂಪೂರ್ಣ ಸರ್ಕಾರ ಜವಾಬ್ದಾರಿ ತೆಗೆದುಕೊಂಡು ನಿರ್ಮಿಸಬೇಕು. ಖಾಸಗಿ ಸಹಭಾಗಿತ್ವ ಕೈ ಬಿಡಬೇಕು ಚಳಿಗಾಲ ಅಧಿವೇಶನದಲ್ಲಿ ಧ್ವನಿ ಎತ್ತಿದ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ, ಶಾಸಕ ಯಶವಂತರಾಯ ಗೌಡ ಪಾಟೀಲ,ವಾಯುವ್ಯ ಪದವಿದರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಅವರು ಧ್ವನಿ ಎತ್ತಿದ್ದು ಅವರಿಗೆ ಧನ್ಯವಾದಗಳನ್ನು ಸಲ್ಲಿಸಲೇಬೇಕು ಎಂದರು. ಇದರ ಜೊತೆಗೆ ಈ ಅಧಿವೇಶನ ಮುಗಿಯುವುದರೊಳಗೆ ಸರ್ಕಾರಿ ವೈದ್ಯಕೀಯ ಕಾಲೇಜು ವಿಜಯಪುರ ಜಿಲ್ಲೆಯಲ್ಲಿ ನಿರ್ಮಿಸುವುದರ ಕುರಿತು ಸ್ಪಷ್ಟ ನಿರ್ಧಾರವನ್ನು ಸರ್ಕಾರ ಘೋಷಣೆ ಮಾಡಬೇಕೆಂದು ಹೋರಾಟ ಸಮಿತಿಯಿಂದ ಸರ್ಕಾರಕ್ಕೆ ಆಗ್ರಹಿಸಲಾಗುತ್ತದೆ ಎಂದರು.
ಹೋರಾಟ ಸಮಿತಿಯ ಸದಸ್ಯರುಗಳಾದ ಭಗವಾನ್ ರೆಡ್ಡಿ, ಅರವಿಂದ ಕುಲಕರ್ಣಿ,ಅಕ್ರಂ ಮಾಶ್ಯಾಳಕರ, ಲಲಿತಾ ಬಿಜ್ಜರಗಿ, ಮಲ್ಲಿಕಾರ್ಜುನ ಹೆಚ್. ಟಿ., ಭರತಕುಮಾರ ಹೆಚ್ ಟಿ., ಗಿರೀಶ ಕಲಘಟಗಿ, ಮಲ್ಲಿಕಾರ್ಜುನ ಬಟಗಿ, ಗೀತಾ ಹೆಚ್. ಬಾಬುರಾವ್ ಬೀರಕಬ್ಬಿ, ಶ್ರೀಕಾಂತ ಕೊಂಡಗೂಳಿ, ಸಲೀಂ ಹೊಕ್ರಾಣಿ, ಮಹದೇವಪ್ಪ ತೇಲಿ, ಸಿದ್ದನಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

























