ಸಂಜೆವಾಣಿ ವಾರ್ತೆ,
ವಿಜಯಪುರ,ಅ.೨೮:ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕು ಎಂದು ಒತ್ತಾಯಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಹೋರಾಟ ಸಮಿತಿ ಕೈಗೊಂಡ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಮಂಗಳವಾರ ೪೧ನೇ ದಿನಕ್ಕೆ ಕಾಲಿಟ್ಟಿದೆ.
ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಅಧ್ಯಕ್ಷ ಅಕ್ಷಯ ಅಜಮನಿಯವರು ಮಾತನಾಡಿ, ವಿಜಯಪುರ ಅತಿ ಹಿಂದುಳಿದ ಜಿಲ್ಲೆಯಾಗಿದ್ದು ಬಡವರು ಮತ್ತು ಹಿಂದುಳಿದ ಮಕ್ಕಳು ಉನ್ನತ ಶಿಕ್ಷಣ ಪಡೆಯುವುದು ತುಂಬಾ ಕಷ್ಟವಾಗುತ್ತಿದೆ. ಶಿಕ್ಷಣ ದುಬಾರಿಯಾಗಿರುವುದರಿಂದ ಉನ್ನತ ಶಿಕ್ಷಣ ಪಡೆಯಲಾಗುತ್ತಿಲ್ಲ. ಅದಕ್ಕಾಗಿ ಸರಕಾರ ವೈದ್ಯಕೀಯ ಕಾಲೇಜನ್ನು ಖಾಸಗಿಯವರಿಗೆ ಒಪ್ಪಿಸದೆ ಸಂಪೂರ್ಣ ಜವಾಬ್ದಾರಿಯನ್ನು ಸರಕಾರ ವಹಿಸಿಕೊಂಡು ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.
ನಗರ ಸಮೃದ್ದಿ ಯುವಕ ಯುವತಿಯರ ಯೂನಿಯನ್ ವಿಜಯಪುರ, ನಗರ ಗೃಹ ಕಾರ್ಮಿಕರ ಯೂನಿಯನ್‌ನವರು ಈ ಧರಣಿಯಲ್ಲಿ ಭಾಗವಹಿಸಿದ್ದರು
ಇಂದಿನ ಧರಣಿ ಸತ್ಯಾಗ್ರಹಕ್ಕೆ ಮರಾಠ ಸಮಾಜದ ಮುಖಂಡರು,ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಜಯಕುಮಾರ ಘಾಟಗೆಯವರು ಬೆಂಬಲಿಸಿ ಈ ಹೋರಾಟ ಬಹಳ ಮುಖ್ಯವಾಗಿದೆ. ನಾವು ಯಾವುದೇ ಕಾರಣಕ್ಕೂ ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಬಿಡುವದಿಲ್ಲ. ನಮ್ಮ ಜಿಲ್ಲೆಯ ಜನ ರೊಚ್ಚಿಗೆದ್ದರೆ ಯಾವ ಸರ್ಕಾರವು ಉಳಿಯಲ.್ಲ ಇಂದು ಈ ಹೋರಾಟಕ್ಕೆ ಸ್ಪಂದಿಸದೇ ಇರಬಹುದು. ಆದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಯುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಹೇಳಿದರು.
ಲಡಾಯಿ ಪ್ರಕಾಶನದ ಮುಖ್ಯಸ್ಥರಾದ ಹಾಗೂ ಬಸವರಾಜ್ ಸುಳಿಭಾವಿಯವರು ಬೆಂಬಲಿಸಿ ಮಾತನಾಡಿದರು. ಸರಕಾರ ಜನತೆಯ ಮೂಲಭೂತ ಅವಶ್ಯಕತೆಗಳನ್ನು ಪೂರೈಸಬೇಕು. ಜನರ ಆರೋಗ್ಯವೇ ಕಾಪಾಡಲು ಮುಂದಾಗದ ಸರಕಾರ ಮಾಡುತ್ತಿರುವುದಾದರೂ ಏನು? ವಿಜಯಪುರ ಜನತೆ ಎಚ್ಚೆತುಕೊಂಡಿದೆ. ಈಗ ಈ ಸರಕಾರವು ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ಧೋರಣೆ ಕೈಬಿಡಬೇಕು. ಈ ರಾಜ್ಯದ ಜನ ಖಾಸಗೀಕರಣದ ವಿರುದ್ಧ ಚಳುವಳಿ ರೂಪಿಸಬೇಕಾಗಿದೆ. ಮಾಡುವುದಾದರೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಿ ಇಲ್ಲದಿದ್ದರೆ ಖಾಸಗಿ ಬೇಡವೆ ಬೇಡ. ಮುಂದಿನ ದಿನಮಾನಗಳಲ್ಲಿ ರಾಜ್ಯದ ನೂರಾರು ಸಂಘಟನೆಗಳು ವಿಜಯಪುರ ಚಲೋ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಎಂ ಉಮಾದೇವಿಯವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಗಳಿಗೆ ಶಿಕ್ಷಣ, ಆರೋಗ್ಯ, ಮೂಲಭೂತ ಸಮಸ್ಯೆಗಳನ್ನು ಪೂರೈಸಬೇಕಾದ ಸರ್ಕಾರಗಳು ಸೋತುಹೋಗಿವೆ. ಇವರ ಕೈಯಿಂದ ಆಗದೆ ಇರುವದನ್ನು ಖಾಸಗಿಯವರಿಗೆ ಮಾರಾಟ ಮಾಡಿಕೊಳ್ಳುತ್ತಿರುವುದು ದುರಂತದ ಸಂಗತಿ. ಈಗಿನ ಸರ್ಕಾರ ಮೊದಲು ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿ ಆದೇಶ ಮಾಡಿತ್ತು. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಖಾಸಗಿಕರಣ ಮಾಡಿಕೊಳ್ಳಲು ಬಯಸಿದ್ದು ನೋವಿನ ಸಂಗತಿ. ಜಿಲ್ಲೆಯ ಹೋರಾಟಗಾರರು ಪಟ್ಟುಬಿಡದೆ ಈ ಹೋರಾಟ ಮುಂದುವರೆಸಿಕೊAಡು ಬರುತ್ತಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಹೋರಾಟ ತೀವ್ರಗೊಳ್ಳಲಿದೆ ಎಂದು ನುಡಿದರು.
ಗದಗ ಜಿಲ್ಲೆಯ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಮತ್ತು ಬಿಳಿಯಲಿಯವರು ಮಾತನಾಡಿ, ಆರೋಗ್ಯದ ವಿಷಯದಲ್ಲಿ ರಾಜಕೀಯ ಮಾಡಬೇಡಿ. ಕೂಡಲೇ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದರು..
ಕಾಂಗ್ರೆಸ್ ಕಿಸಾನ ಸಭಾದ ರಾಜ್ಯ ಉಪಾಧ್ಯಕ್ಷÀ ಡಿ.ಎಚ್ ಕಲಾಲ ಅವರು ಬೆಂಬಲ ವ್ಯಕ್ತಪಡಿಸಿ, ಕೇಂದ್ರದ ನೀತಿ ಆಯೋಗದಲ್ಲಿ ಈ ವಿಷಯವಾಗಿ ಚರ್ಚೆ ಮಾಡುವೆ. ಅದಷ್ಟು ಬೇಗನೆ ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗಲು ಮುಂದಾಗಬೇಕು. ನಿಯೋಗದಲ್ಲಿ ನಿಮ್ಮೊಂದಿಗೆ ನಾನು ಬರುವೆ. ಒಟ್ಟಾರೆಯಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಆಗಲೇಬೇಕು ಎಂದು ಒತ್ತಾಯಿಸಿದರು. ಹೋರಾಟ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.
























