ಚಿಕ್ಕಬಳ್ಳಾಪುರ : ಆ.೨೬-ಸರ್ಕಾರಿ ನೌಕರರು ತಮ್ಮ ವೃತ್ತಿಯಿಂದ ವಯೋನಿವೃತ್ತಿ ಪಡೆದ ನಂತರ ಒತ್ತಡಮುಕ್ತ ಜೀವನ ನಡೆಸಬೇಕಾದರೆ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಮುಖ್ಯವಾಗುತ್ತದೆ ಈ ಕಾರಣದಿಂದ ಅಂತಹವರು ತಮ್ಮ ಜೀವನದಲ್ಲಿ ಯೋಗ ಮತ್ತು ಧ್ಯಾನವನ್ನು ಅಳವಡಿಸಿಕೊಳ್ಳಬೇಕು ಎಂದು ಡಾ.ಪ್ರಕಾಶ್ ಸಲಹೆ ನೀಡಿದರು.
ಅವರು ನಗರದ ಕಂದಾಯ ಇಲಾಖೆ ನೌಕರರ ಭವನದಲ್ಲಿ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಪ್ರತಿ ತಿಂಗಳು ಏರ್ಪಡಿಸುವ ಮಾಹೆಗುಮ್ಮೆ ಆರೋಗ್ಯ ಸಲಹೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಿರಿಯ ನಾಗರೀಕರಲ್ಲಿ ವಯಸ್ಸಾದಂತೆ ಆರೋಗ್ಯ ಕ್ಷೀಣಿಸುತ್ತದೆ.ಮಧುಮೇಹ, ಅಧಿಕರಕ್ತದೊತ್ತಡ, ಹೃದ್ರೋಗದಂತಹ ದೀರ್ಘಕಾಲದ ಖಾಯಿಲೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ.ದೈಹಿಕ ಸಮಸ್ಯೆಗಳ ಜತೆಗೆ ,ಮಾನಸಿಕ ಸಮಸ್ಯೆಗಳಾದ ಖಿನ್ನತೆ, ಬುದ್ಧಿಮಾಂಧ್ಯತೆ,ಆತಂಕ,ನಿದ್ರಾಹೀನತೆಗಳು ಇತ್ಯಾದಿಗಳು ಒಂಟಿತನದಿಂದ ಉಂಟಾಗುತ್ತವೆ.ಇವುಗಳಿಂದ ಪಾರಾಗಬೇಕಾದರೆ ಯೋಗ ಧ್ಯಾನ ಜಪ ತಪ,ಗೆಳೆಯರೊಂದಿಗೆ ಬೆರೆಯುವುದು, ಏನಾದರೊಂದು ಕೆಲಸ ಕಾರ್ಯಗಳಲ್ಲಿ ಕ್ರೀಯಾಶೀಲರಾಗುವುದು ಅಗತ್ಯ ಎಂದರು.
ನಿವೃತ್ತ ನೌಕರರು ಮೂರು ತಿಂಗಳಿಗೊಮ್ಮೆ ಕ್ರಮವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ಔಷದೋಪಚಾರ ಪಡೆಯುವುದು ಮುಖ್ಯ.ದೇಹ ಆರೋಗ್ಯವಾಗಿರುವಂತೆ ಕಂಡರೂ ಕೂಡ ತಪಾಸಣೆಗೆ ಒಳಗಾಗುವುದು ಅಗತ್ಯ.ಔಷದಗಳೇ ಎಲ್ಲಕ್ಕೂ ಅಂತಿಮವಲ್ಲ, ದೈಹಿಕವಾದ ಚಟವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದೂ ಕೂಡ ಮುಖ್ಯ ಎಂದರು.
ನಗರೀಕರಣ ಮತ್ತು ಆಧುನಿಕ ಜೀವನ ಶೈಲಿಯಿಂದಾಗಿ ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಒಡೆದುಹೋಗಿರುವುದು ಕೂಡ ಹಿರಿಯನಾಗರೀಕರು ಒಂಟಿತನ ಅನುಭವಿಸಲು ಕಾರಣವಾಗಿವೆ.ಇದಾಗಬಾರದು ಎನ್ನುವುದಾದರೆ ಮಕ್ಕಳು ತಂದೆತಾಯಿಯನ್ನು ಗೌರವಭಾವದಿಂದ ಕಾಣಬೇಕು ಎಂದರು.
ನಿವೃತ್ತ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಕೃಷ್ಣ ಮಾತನಾಡಿ ತಪ್ಪುಗಳನ್ನು ತಿದ್ದಿಹೇಳುವ ಹಿರಿಯ ನಾಗರೀಕರು ಮನೆಯಲ್ಲಿರಬೇಕು.ಇತ್ತೀಚಿನ ದಿನಗಳಲ್ಲಿ ಹಿರಿಯರ ಮಾರ್ಗದರ್ಶನ ಇಲ್ಲದ ಕಾರಣ ವೈವಾಹಿಕ ಹಾಗೂ ಆಸ್ತಿ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತಿವೆ.ಸಣ್ಣಪುಟ್ಟ ವಿಚಾರಗಳಿಗೂ ಕೋರ್ಟು ಕಛೇರಿ ಅಂತ ಅಲೆಯುವುದು ಸಾಮಾನ್ಯವಾಗಿದೆ.ಸದ್ಯ ನಮ್ಮ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಇಲ್ಲದಿರುವುದು ಸಮಾಧಾನದ ಸಂಗತಿಯಾಗಿದೆ ಎಂದರು.
ಇತ್ತೀಚೆಗಷ್ಟೇ ಗೋಕುಲಾಷ್ಟಮಿಯನ್ನು ಅತ್ಯಂತ ಶ್ರದ್ಧಾ ಭಕ್ತಿ ಸಂಭ್ರಮಗಳಿಂದ ನಾನು ಆಚರಿಸಿಕೊಂಡಿದ್ದೇನೆ ಕಾರಣ ಅಂದು ನನ್ನ ಹುಟ್ಟಿದ ದಿನ ಈ ಕಾರಣದಿಂದ ಪ್ರೀತಿ ಸೌಹಾರ್ದತೆಯ ಸಂಕೇತವಾಗಿ ಎಲ್ಲರಿಗೂ ಒಬ್ಬಟ್ಟಿನ ಸಿಹಿ ಒಣ ಬಡಿಸುತ್ತಿದ್ದೇನೆ ಇದು ನನಗೆ ತುಂಬಾ ಸಂತೋಷ ತಂದಿದೆ ಎಂದರು.
ಸಂಘದ ಉಪಾಧ್ಯಕ್ಷರು ಮಾತನಾಡಿ ಮುಂದಿನ ದಿನಗಳಲ್ಲಿ ಅಮೃತ ಸರ್ಕಾರಿ ನೌಕರರಿಗೆ ಆರಕ್ಷಕ ಇಲಾಖೆಯಿಂದ ಹಾಗೂ ವಕೀಲರಿಂದ ಸಲಹೆ ಕಾರ್ಯಕ್ರಮ ಏರ್ಪಡಿಸಿದರೆ ತುಂಬಾ ಅನುಕೂಲ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ನೌಕರರ ಎಲ್ಲಾ ಪ್ರಶ್ನೆಗಳಿಗೆ ಸಾವಧಾನವಾಗಿ ಉತ್ತರ ನೀಡಿದ ವೈದ್ಯ ಡಾ.ಪ್ರಕಾಶ್ ಅವರನ್ನು ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ತಿರುಮಲಪ್ಪ ಒಳಗೊಂಡಂತೆ ಮತ್ತಿತರರು ಹಾಜರಿದ್ದರು.




























