Home ಜಿಲ್ಲೆ ಕಲಬುರಗಿ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದ ಗೊರೂರು

ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದ ಗೊರೂರು

ಕಲಬುರಗಿ : ತಮ್ಮ ವಿದ್ವತ್ಪೂರ್ಣ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದ ಪ್ರಮುಖ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರಾಗಿದ್ದಾರೆ. ಆರ್.ಕೆ.ನಾರಾಯಣ್ ಅವರು ಓದುಗರಿಗೆ ಮಾಲ್ಗುಡಿಯನ್ನು ಪರಿಚಯಿಸುವುದಕ್ಕೆ ಮುನ್ನವೇ ತಮ್ಮ ಕೃತಿಗಳ ಮೂಲಕ ಗ್ರಾಮವನ್ನು ಪರಿಚಯಿಸಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ್ ಹೇಳಿದರು.
ನಗರದ ಖಾದ್ರಿ ಚೌಕ್ ನಲ್ಲಿನ ‘ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ಗೊರುರು ರಾಮಸ್ವಾಮಿ ಅಯ್ಯಂಗಾರ್ ರ 122ನೇ ಜನುಮ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಗೊರುರು ‘ಸೀತಾತನಯ’ ಎಂಬ ಕಾವ್ಯನಾಮದಿಂದ ಸಾಹಿತ್ಯ ಕೃಷಿ ಮಾಡಿದ್ದಾರೆ. ಸ್ವಾತಂತ್ರ್ಯ ಚಳುವಳಿ, ಮೈಸೂರಿನಲ್ಲಿ ಪ್ರಜಾ ಸರ್ಕಾರಕ್ಕಾಗಿ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಭಾಗವಹಿಸಿ, ಹೋರಾಡಿದ್ದಾರೆ. ಹರಿಜನೋದ್ಧಾರ ಮತ್ತು ಗ್ರಾಮೊದ್ಧಾರಕ್ಕಾಗಿ ಶ್ರಮಿಸಿದ ಅವರೊಬ್ಬ ಮಹಾನ ವ್ಯಕ್ತಿಯಾಗಿದ್ದಾರೆ ಎಂದರು. ಅಯ್ಯಂಗಾರ್ ಅವರ ಸಾಹಿತ್ಯ ಸೃಷ್ಟಿ ಸಮೃದ್ಧವಾದುದು. ಪ್ರಬಂಧ, ಕಥೆ, ಕಾದಂಬರಿ, ಪ್ರವಾಸ ಕಥನ, ವಿಮರ್ಶೆ, ಜೀವನ ಚಿತ್ರ, ಭಾಷಾಂತರ – ಹೀಗೆ ಅನೇಕ ಪ್ರಕಾರಗಳಿಗೆ ಅವರ ಕೊಡುಗೆ ಸಂದಿದೆ. ಆದರೂ ಗೊರೂರರ ಸಿದ್ಧಿ, ಪ್ರಸಿದ್ಧಿಗಳಿಗೆ ಮುಖ್ಯವಾದ ಆಧಾರ, ಅವರ ಪ್ರಬಂಧಗಳು.
ಪುನರ್ಜನ್ಮ,ಮೆರವಣಿಗೆ, ಊರ್ವಶಿ, ಕನ್ಯಾಕುಮಾರಿ ಮತ್ತು ಇತರ ಕತೆಗಳು, ರಾಜನರ್ತಕಿ, ಭೂತಯ್ಯನ ಮಗ ಅಯ್ಯು, ಕೋರ್ಟಿನಲ್ಲಿ ಗೆದ್ದ ಎತ್ತು, ಮಲೆನಾಡಿನವರು, ಭಕ್ತಿಯೋಗ,
ಭಗವಾನ್ ಕೌಟಿಲ್ಯ,
ಹೊಸಗನ್ನಡ ಪ್ರಬಂಧ ಸಂಕಲನ ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ತಿಳಿಸಿದರು. ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್,ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ,
1982ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1995ರಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಕಥಾಲೇಖಕ ಪ್ರಶಸ್ತಿ,ದೇವರಾಜ ಬಹದ್ದೂರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಹಾಗೂ ಗೌರವಕ್ಕೆ ಭಾಜನರಾಗಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್. ಬಿರಾದಾರ, ಮುಖಂಡ ಓಂಕಾರ ವಠಾರ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.