ಸಮತೋಲನ ಆಹಾರದಿಂದ ಉತ್ತಮ ಆರೋಗ್ಯ

ಬೀದರ್: ಸೆ.28:ಸಮತೋಲನ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಕಾಯ್ದುಕೊಳ್ಳಬಹುದು ಎಂದು ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥೆ ಡಾ. ಕೆ. ಭವಾನಿ ಹೇಳಿದರು.
ನಗರದ ಬಸವಗಿರಿಯಲ್ಲಿ ನಡೆಯುತ್ತಿರುವ ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವದಲ್ಲಿ ಶನಿವಾರ ‘ಆಹಾರವ ಕಿರಿದು ಮಾಡಿರಣ್ಣಾ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಆಹಾರದ ಕುರಿತ ಬಸವಾದಿ ಶರಣರ ಸಲಹೆಗಳನ್ನು ಅನುಸರಿಸಿದರೆ ಆಸ್ಪತ್ರೆಗಳಿಂದ ದೂರ ಇರಬಹುದು ಎಂದು ತಿಳಿಸಿದರು.
ಬಸವಣ್ಣ, ಅಕ್ಕಮಹಾದೇವಿ ಮೊದಲಾದ ಶರಣರ ವಚನಗಳು ಆಹಾರದ ಮಹತ್ವ ಸಾರುತ್ತವೆ. ಮೈ ಹಾಗೂ ಮನಸ್ಸಿಗೆ ಹಿತವೆನಿಸುವ ಸಾತ್ವಿಕ ಆಹಾರ ಸೇವಿಸಬೇಕೆಂದು ಶರಣರು ಹೇಳಿದ್ದಾರೆ ಎಂದರು.
ಮಿತ ಆಹಾರವೇ ಯೋಗವೆಂದು ಅಕ್ಕಮಹಾದೇವಿ ಹೇಳಿದ್ದಾರೆ. ಸರಳ ಆಹಾರ ದೇಹವನ್ನು ಬಲಗೊಳಿಸಿದರೆ, ಅತಿಯಾದ ಆಹಾರ ಸೇವನೆ, ರುಚಿಯಾದ ಆಹಾರಗಳು ಆರೋಗ್ಯ ಕೆಡಿಸುತ್ತವೆ ಎಂದು ತಿಳಿಸಿದರು.
ಹೊಟ್ಟೆಯಲ್ಲಿ ಶೇ 50 ರಷ್ಟು ಆಹಾರ, ಶೇ 30 ರಷ್ಟು ನೀರು ಹಾಗೂ ಶೇ 20 ರಷ್ಟು ಖಾಲಿ ಇಡುವುದು ಆರೋಗ್ಯದ ಗುಟ್ಟು ಎಂದು ಹೇಳಿದರು.
ಹಸಿವಾದಾಗ ಮಾತ್ರ ಉಣ್ಣಬೇಕು. ಪೆÇೀಷಕಾಂಶ ಅಧಿಕವಿರುವ ಸಿರಿಧಾನ್ಯ ಬಳಸಬೇಕು. ನಿತ್ಯ ರಾಗಿ ಗಂಜಿ ಕುಡಿಯುವುದರಿಂದ ಎಲುಬು-ಕೀಲು ಸಂಬಂಧಿ ತೊಂದರೆಗಳಿಂದ ದೂರವಿರಬಹುದು ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಪರುಷಕಟ್ಟೆಯ ಚನ್ನಬಸವಣ್ಣ ಮಾತನಾಡಿ, ಮಿತ ವಾಕ್ಕು, ಮಿತ ಭೋಜನ ಹಾಗೂ ಮಿತ ನಿದ್ರೆಗಳು ಆರೋಗ್ಯದ ಸೂತ್ರಗಳಾಗಿವೆ. ಇವು ಯೋಗ ಸಾಧನೆಗೆ ಪೂರಕವಾಗಿವೆ ಎಂದು ನುಡಿದರು.
ಬದುಕಲು ಉಣ್ಣಬೇಕೆ ವಿನಃ ಉಣ್ಣಲು ಬದುಕುಬಾರದು. ಹೊಟ್ಟೆಬಾಕರು ಏನನ್ನೂ ಸಾಧಿಸಲಾರರು. ಹಗುರವಾಗಿ, ಹಗುರವಾದ ಅನ್ನ ಉಂಡರೆ ಶರೀರವು ಆರೋಗ್ಯಪೂರ್ಣವಾಗಿ, ಆಕಾಶದಲ್ಲಿ ಹಾರಾಡುವಂತಾಗುತ್ತದೆ. ಲಿಂಗಾಂಗ ಸಾಮರಸ್ಯಕ್ಕೂ ಅದು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ವಿಜಯಲಕ್ಷ್ಮಿ ಕೌಟಗೆ ಮಾತನಾಡಿ, ಆರೋಗ್ಯ ಅತ್ಯಂತ ಬೆಲೆ ಬಾಳುವ ವಸ್ತು. ಆರೋಗ್ಯವೇ ಭಾಗ್ಯ. ಆರೋಗ್ಯ ಕೆಟ್ಟ ಮೇಲೆ ಪರಿತಪಿಸುವುದಕ್ಕಿಂತ ಮೊದಲೇ ಎಚ್ಚರವಾಗಿರಬೇಕು. ಪೂರಕವಾದ ಆಹಾರ ಸೇವಿಸಬೇಕು ಎಂದು ಹೇಳಿದರು.
ಸ್ವದೇಶಿ ವಸ್ತು ಹಾಗೂ ರೈತರು ಬೆಳೆದ ಧಾನ್ಯಗಳನ್ನು ಉಪಯೋಗಿಸಬೇಕು. ಇದರಿಂದ ಆರೋಗ್ಯವೂ, ದೇಶವೂ ಸಮೃದ್ಧವಾಗುತ್ತದೆ. ಸಕ್ಕರೆ, ಮೈದಾದಂಥ ಆಹಾರ ಬಳಸಬಾರದು ಎಂದು ತಿಳಿಸಿದರು.
ವಚನ ಪಠಣ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ. ಭುವನೇಶ್ವರಿ ಪ್ರಶಾಂತ ಮಠಪತಿ ಮಾತನಾಡಿ, ಜಡತ್ವ, ಅಜೀರ್ಣತೆಗಳಿಂದ ಮುಕ್ತರಾಗಿರಬೇಕಾದರೆ ಊಟದಲ್ಲಿ ಜಾಗ್ರತೆ ವಹಿಸಬೇಕು ಎಂದು ಹೇಳಿದರು.
ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಹಾವಶೆಟ್ಟಿ ಪಾಟೀಲ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಭಕ್ತರಾಜ ಖಂಡ್ರೆ, ಜಯಶ್ರೀ ಪ್ರಕಾಶ ಮಠಪತಿ, ಪ್ರತಾಪನಗರದ ನಮ್ರತಾ ಪಾಟೀಲ, ನೀಲಮ್ಮನ ಬಳಗದ ಶೈಲಶ್ರೀ ಮಹಾದೇವ ಖಳೂರೆ, ಸಾಹಿತಿ ರಮೇಶ ಮಠಪತಿ ಇದ್ದರು.
ಬಸವದೀಪ್ತಿ ಗೋರನಾಳೆ ಹಾಗೂ ಶ್ಯಾಮಲಾ ಎಲಿ ವಚನ ಗಾಯನ ಮಾಡಿದರು. ಬಸವ ಚಿಕಲಿಂಗೆ ನಿರೂಪಿಸಿದರು. ಸೌಜನ್ಯ ವಿವೇಕಾನಂದ ಮಠಪತಿ ಸ್ವಾಗತಿಸಿ, ಭಕ್ತಿ ದಾಸೋಹಗೈದರು.