ಬೆಟ್ಟದಹಳ್ಳಿ ಗವಿಮಠದಲ್ಲಿ ಜಂಗಮ ಪೀಠರೋಹಣ ಸುವರ್ಣ ಮಹೋತ್ಸವ

ಚೇಳೂರು, ಮೇ ೨೪- ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಬೆಟ್ಟದಹಳ್ಳಿ ಗವಿಮಠದಲ್ಲಿ ಸಹಸ್ತ್ರಾರು ಭಕ್ತರ ಸಮ್ಮುಖದಲ್ಲಿ ನಿರಂಜನ ಜಂಗಮಪೀಠರೋಹಣ ಸುವರ್ಣ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.


ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ ಅವರು ಶ್ರೀಮಠದಲ್ಲಿ ಪೀಠಾರೋಹಣ ವಾಗಿ ಮೇ ೨೨ ಕ್ಕೆ ೫೦ ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಮಠದ ಸದ್ಭಕ್ತರು ಶ್ರೀಗಳ ಪಾದಗಳಿಗೆ ಪುಷ್ಪ ನಮನ ಸಲ್ಲಿಸಿ ಆಶೀರ್ವಚನ ಪಡೆದರು.


ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಗಡಿ ರುದ್ರಮುನೇಶ್ವರ ಮಠದ ಶ್ರೀ ಚಂದ್ರಶೇಖರಸ್ವಾಮೀಜಿ ಮಾತನಾಡಿ, ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಮಹಾ ಸ್ವಾಮೀಜಿಯವರು ಪೀಠಾರೋಹಣವಾಗಿ ಇಂದಿಗೆ ೫೦ ಸಂವತ್ಸರಗಳು ತುಂಬಿದೆ. ಶ್ರೀಗಳು ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಹೆಚ್ಚು ಒತ್ತು ನೀಡಿದ್ದು ಮಠದ ಸದ್ಭಕ್ತರಿಗೆ ಆಶೀರ್ವಚನ ನೀಡುತ್ತಾ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ.

ಶ್ರೀ ಶಿವಕುಮಾರ ಸ್ವಾಮೀಜಿ ಯವರ ಆದೇಶದಂತೆ ೫೦ ವರ್ಷಗಳ ಹಿಂದೆ ಬೆಟ್ಟದಹಳ್ಳಿ ಮಠಕ್ಕೆ ಬಂದು ತಪಸ್ಸು ಮಾಡಿ ಪೀಠಾಧಿಪತಿಗಳಾಗಿ ಲೋಕ ಕಲ್ಯಾಣಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಜೀವನವನ್ನು ಸಮಾಜದ ಒಳಿತಿಗಾಗಿ ಮೀಸಲಿಟ್ಟಿದ್ದಾರೆ ಎಂದು ತಿಳಿಸಿದರು.


ಶ್ರೀ ಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ನಿರಂಜನ ಜಂಗಮ ಪೀಠಾರೋಹಣ ೫೦ ರ ಸುವರ್ಣ ಮಹೋತ್ಸವ ನೆಪ ಮಾತ್ರವಾಗಿದ್ದು ಲೋಕ ಕಲ್ಯಾಣಾರ್ಥವಾಗಿ ಈ ಕಾರ್ಯಕ್ರಮವು ನೆರವೇರಿದೆ. ಸಮಾಜದ ಒಳಿತಿಗಾಗಿ ಅನೇಕ ಮಠಾಧೀಶರು ಇಲ್ಲಿ ಭಾಗವಹಿಸಿ ಮಠದ ಸದ್ಭಕ್ತರಿಗೆ ಸತತ ಎಂಟು ದಿನಗಳ ಕಾಲ ಆಶೀರ್ವಚನ ನೀಡಿದ್ದು ಇದರಿಂದ ಲೋಕ ಕಲ್ಯಾಣವಾಗುತ್ತದೆ. ಸಮಾಜದ ಒಳಿತಿಗೆ ದಾರಿ ದೀಪವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಹಲವು ಸ್ವಾಮೀಜಿಗಳು ಸೇರಿದಂತೆ ಭಕ್ತರು ಭಾಗವಹಿಸಿದ್ದರು.