
ಕಲಬುರಗಿ:ನ.11: ಕವಿ, ಕಾದಂಬರಿಕಾರ, ವಾಗ್ಮಿ, ವಿಮರ್ಶಕ, ಶಿಕ್ಷಣ ತಜ್ಞ, ಪ್ರಾಂಶುಪಾಲ, ಉಪ ಕುಲಪತಿ, ಸಾಂಸ್ಕøತಿಕ ರಾಯಭಾರಿ, ಕನ್ನಡಪರ ಚಳುವಳಿಗಾರರಾಗಿ ಹೀಗೆ ಹಲವು ವಿಧಗಳಲ್ಲಿ ಕನ್ನಡಕ್ಕಾಗಿ ಸೇವೆ ಸಲ್ಲಿಸಿ, ಕನ್ನಡವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಶ್ರಮಿಸಿದ ಡಾ.ವಿ.ಕೃ.ಗೋಕಾಕ್‍ರ ಕೊಡುಗೆ ಅಮೋಘವಾಗಿದೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಡಬರಾಬಾದ ಕ್ರಾಸ್ ಸಮೀಪವಿರುವ ಅಲ್ಲಂಪ್ರಭು ನಗರದಲ್ಲಿರುವ ‘ನೀಲಕಂಠೇಶ್ವರ ಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗುತ್ತಿರುವ ರಾಜ್ಯೋತ್ಸವ ಮಾಸಾಚರಣೆಯ ಸರಣಿ ಉಪನ್ಯಾಸ-11ರಲ್ಲಿ ‘ಕನ್ನಡಕ್ಕೆ ಗೋಕಾಕರ ಕೊಡುಗೆ’ ಎಂಬ ಉಪನ್ಯಾಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಆತನಾಡುತ್ತಿದ್ದರು.
‘ವಿನಾಯಕ’ ಎಂಬ ಕಾವ್ಯನಾಮದಿಂದ ಇವರನ್ನು ಗುರುತಿಸಲಾಗುತ್ತದೆ. ಗೋಕಾಕರ ಸಾಹಿತ್ಯ ಕೃಷಿಗೆ ಬೇಂದ್ರೆಯವರ ಮಾರ್ಗದರ್ಶನ, ಪ್ರೋತ್ಸಾಹ ದೊರೆತಿದೆ. ವಿವಿಧ ದೇಶಗಳಿಗೆ ಭಾರತದ ರಾಯಭಾರಿಯಾಗಿ ತೆರಳಿ ನಮ್ಮ ನಾಡು, ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕನ್ನಡಕ್ಕೆ ಐದನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಿದ್ದಾರೆ ‘ನವ್ಯ’ತೆಗೆ ಬುನಾದಿ ಹಾಕಿದ್ದಾರೆ. ‘ಭಾರತ ಸಿಂಧು ರಶ್ಮಿ’, ‘ದ್ಯಾವಾ ಪ್ರಥ್ವಿ’ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಗೋಕಾಕರು, ನಾಡು, ನುಡಿ, ಜಲ, ಭಾಷೆಗಾಗಿ ನಿರಂತರವಾಗಿ ಹೋರಾಟ ಮಾಡಿದ್ದಾರೆ. ಗೋಕಾಕರು ತಮ್ಮ ಪಾಂಡಿತ್ಯದಿಂದಾಗಿ ಜನಸಾಮಾನ್ಯರು ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡಲು ಪ್ರೇರಣೆ ನೀಡಿದ್ದಾರೆ ಎಂದರು.
ಕನ್ನಡದ ಸಾರ್ವಭೌಮತೆಯ ಬಗ್ಗೆ ವರದಿ ಹೊಂದಿದ್ದ ‘ಗೋಕಾಕ ವರದಿ’ ಜಾರಿಗಾಗಿ ನಮ್ಮ ನಾಡಿನಲ್ಲಿ ಜರುಗಿದ ಕನ್ನಡ ಚಳುವಳಿ ಒಂದು ಐತಿಹಾಸಿಕ ದಾಖಲೆಯಾಗಿದೆ. ಏಕೆಂದರೆ ಕರ್ನಾಟಕದಲ್ಲಿ ಇಂತಹ ಬೃಹತ ಪ್ರಮಾಣದ ಚಳುವಳಿ ಹಿಂದೆಂದೂ ಜರಗಿರಲಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಚಿಂತಕ ಡಾ.ರಾಜಶೇಖರ ಪಾಟೀಲ್, ಸಮಾಜ ಸೇವಕ ಅಸ್ಲಾಂ ಶೇಖ್, ಶಾಲೆಯ ಮುಖ್ಯ ಶಿಕ್ಷಕಿ ಆಶಾರಾಣಿ ಮುಗಳಿ, ಶಿಕ್ಷಕಿಯರಾದ ರಾಜೇಶ್ವರಿ ಕಟ್ಟಿಮನಿ, ನಿರ್ಮಲಾ ಮಾಲಿಪಾಟೀಲ್, ನಿಂಗಮ್ಮ ದೊರೆ, ಸವಿತಾ ಬಿಸ್ಕೊಂಡ್, ರೇಣುಕಾ ಅದ್ವಾನಿ, ಐಶ್ವರ್ಯ ಬಇರಾದಾರ, ಅರ್ಚನಾ ಕಲಶೆಟ್ಟಿ ಹಾಗೂ ವಿದ್ಯಾರ್ಥಿಗಳು ಇದ್ದರು.























