ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡಿ:ಅಂಕುಶ ಢೋಲೆ

ಭಾಲ್ಕಿ :ಸೆ.12: ಇಂದಿನ ಪೈಪೋಟಿ ಯುಗದಲ್ಲಿ ಸ್ತ್ರೀಯರು ಸ್ವಾವಲಂಬಿ ಜೀವನ ಸಾಗಿಸಬೇಕಾದರೆ ಪಾಲಕರು ಮಹಿಳಾ ಶಿಕ್ಷಣಕ್ಕೆ ಪ್ರಥಮಾದ್ಯತೆ ನೀಡಬೇಕು ಎಂದು ಎಸ್‍ವ್ಹಿ ಸಂಸ್ಥೆಯ ಆಡಳಿತಾಧಿಕಾರಿ ಅಂಕುಶ ಢೋಲೆ ಹೇಳಿದರು.
ಇಲ್ಲಿನ ಅಕ್ಕಮಹಾದೇವಿ ಕನ್ಯೆ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಮತ್ತು 2025-26ನೇ ಸಾಲಿನ ಪಿಯು ಪ್ರಥಮ ವರ್ಷದ ಮಕ್ಕಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಎಸ್.ವ್ಹಿ.ಸಂಸ್ಥೆಯ ಅಧ್ಯಕ್ಷರಾದ ಈಶ್ವರ ಖಂಡ್ರೆ ಅವರ ಮಾರ್ಗದರ್ಶನದಲ್ಲಿ ಅಕ್ಕಮಹಾದೇವಿ ಕನ್ಯೆ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಾಮೀಣ ಭಾಗದ ರೈತಾಪಿ ಕುಟುಂಬದ ವಿದ್ಯಾರ್ಥಿನಿಯರಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಸಂಸ್ಕಾರಭರಿತ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.
ನಿ.ಪ್ರಾಚಾರ್ಯ ಅಶೋಕ ರಾಜೋಳೆ ಮಾತನಾಡಿ,ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಶ್ರೇಷ್ಠವಾಗಿದೆ.ಮಕ್ಕಳು ದುಶ್ಚಟ-ದುರ್ಗುಣಗಳಿಂದ ಅಂತರ ಕಾಪಾಡಿ ಆದರ್ಶ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ಪಪೂ ಕಾಲೇಜು ಪ್ರಾಚಾರ್ಯ ಸುಖದೇವ ಬಿರಾದಾರ ಮಾತನಾಡಿ,ಪಿಯು ಶಿಕ್ಷಣ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದೆ ಎಂದರು.
ಸಿ.ಬಿ. ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಸಂತೋಷ ತೀರ್ಥೇ ಮಾತನಾಡಿ,ಮಕ್ಕಳು ಉನ್ನತ ಗುರಿಯೊಂದಿಗೆ ಉನ್ನತ ಶಿಕ್ಷಣ ಪಡೆದು ಹೆತ್ತವರಿಗೆ ಕೀರ್ತಿ ತರಬೆಕು ಎಂದು ಹೇಳಿದರು.
ಪ್ರಾಚಾರ್ಯ ಭೀಮರಾವ ಗಿರಿ ಪ್ರಾಸ್ತಾವಿಕ ಮಾತನಾಡಿ,ಸಂಸ್ಥೆ ಅಧ್ಯಕ್ಷರೂಆದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಕಾರ್ಯದರ್ಶಿ ಸಂಸದ ಸಾಗರ ಖಂಡ್ರೆ ಅವರ ಶೈಕ್ಷಣಿಕ ಕಾಳಜಿಯಿಂದ ಪ್ರತಿ ವರ್ಷ ನಮ್ಮ ಕಾಲೇಜಿನ ಪಿಯು ಫಲಿತಾಂಶ ಕ-ಕ ಭಾಗದಲ್ಲಿಯೇ ಅತ್ಯುತ್ತಮವಾಗಿರುತ್ತದೆ ಎಂದು ತಿಳಿಸಿದರು.
ಪ್ರತಿಭಾ ಪುರಸ್ಕಾರ:ಕಳೆದ ಸಾಲಿನಲ್ಲಿ ಗರಿಷ್ಠ ಅಂಕ ಪಡೆದ ಪಿಯು ದ್ವಿತೀಯ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಐಟಿಐ ಕಾಲೇಜು ಪ್ರಿನ್ಸಿಪಾಲ್ ಸಂಗಪ್ಪ ಹುಲಸುರೆ,ಲಕ್ಷ್ಮಿಬಾಯಿ ಖಂಡ್ರೆ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯ ಸಂತೋಷ ಮಿರಜಕರ್ ಸೇರಿದಂತೆ ಕಾಲೇಜು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕು.ಸ್ವಾತಿ ಗಣಪತಿ ಸ್ವಾಗತಿಸಿದರು. ಪ್ರೊ.ಲಾವಣ್ಯ ಶಿವಸ್ವಾಮಿ ನಿರೂಪಿಸಿದರು.ಕು.ಪೂಜಾ ಕರಬಸಯ್ಯ ವಂದಿಸಿದರು.


`ಹೆಣ್ಮಕ್ಕಳ ಸರ್ವಾಂಗೀಣ ವಿಕಾಸಕ್ಕಾಗಿ ಡಾ.ಚನ್ನಬಸವ ಪಟ್ಟದ್ದೇವರು ಮತ್ತು ಮಾಜಿ ಮಂತ್ರಿ ಡಾ.ಭೀಮಣ್ಣ ಖಂಡ್ರೆಯವರು ಭಾಲ್ಕಿಯಲ್ಲಿ ಅಕ್ಕಮಹಾದೇವಿ ಕನ್ಯೆ ಪದವಿ ಪೂರ್ವ ಕಾಲೇಜು ಪ್ರಾರಂಭಿಸಿರುವುದರಿಂದ ಇಂದು ಮಹಿಳೆಯರು ಶಿಕ್ಷಣ ಪಡೆದು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ.’-ಅಂಕುಶ ಢೋಲೆ ಆಡಳಿತಾಧಿಕಾರಿ ಎಸ್.ವ್ಹಿ.ಸಂಸ್ಥೆ ಭಾಲ್ಕಿ.