ಸಂಸ್ಕಾರಯುತ, ಮೌಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡಿ: ಡಾ. ಬಿ.ಎಂ. ಪಾಟೀಲ ಗುರೂಜಿ

ವಿಜಯಪುರ ಮೇ,21: ಇಂದಿನ ಆಧುನಿಕ ಯುಗದಲ್ಲಿ, ಮಾನವೀಯ ಮೌಲ್ಯಗಳು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಮಕ್ಕಳಿಗೆ, ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕೊಟ್ಟರೆ ಅವರ ಸರ್ವತೋಮುಖ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದು ಬೆಂಗಳೂರಿನ ಆರ್ಟ್ ಆಫ್ ಲೀವಿಂಗ್‍ನ ಡಾ. ಬಿ. ಎಂ. ಪಾಟೀಲ ಗುರೂಜಿ ಹೇಳಿದರು.
ಮಂಗಳವಾರ ನಗರದ ಪ್ರತಿಷ್ಠಿತ ಚಿನ್ಮಯಿ ಶಾಲೆಯಲ್ಲಿ ಜರುಗಿದ ಬೇಸಿಗೆ ಶಿಬಿರದ ಮುಕ್ತಾಯ ಹಾಗೂ ಮಕ್ಕಳ ಪ್ರತಿಭೆ ಅನಾವರಣ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಇಂದಿನ ಮಕ್ಕಳು ನಾಳಿನ ನಾಗರಿಕರು, ಅವರಿಗೆ ಬಾಲ್ಯದಿಂದಲೇ ಶಿಕ್ಷಣದ ಜೊತೆಗೆ ಯೋಗ, ಧ್ಯಾನ, ಪ್ರಾಣಾಯಾಮ ಮಾಡಿಸಿ ಅವರ ಮಾನಸಿಕ, ದೈಹಿಕ ಸಾಮಥ್ರ್ಯವನ್ನು ವೃದ್ದಿಸಬೇಕೆಂದರು.
ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಇಂದಿನ ಮಕ್ಕಳಿಗೆ ಕಲಿಕೆಯ ಜೊತೆಗೆ ಪಠ್ಯಕ್ರಮದಲ್ಲಿ ಕೃಷಿಯ ಬಗ್ಗೆ, ಸಾವಯವ ಕೃಷಿ, ಜನರ ಅರೋಗ್ಯ ಕುರಿತು ಶಿಕ್ಷಣ ನೀಡಬೇಕೆಂದರು.
ಚಿನ್ಮಯಿ ಶಾಲೆಯ ಸಂಸ್ಥಾಪಕಿ ಡಾ. ಪ್ರತಿಭಾ ಪಾಟೀಲ ಮಾತನಾಡಿ, ತಮ್ಮ ಶಾಲೆಯಲ್ಲಿ ಮಕ್ಕಳಿಗೆ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಪಣೆ ನೀಡಲಾಗುತ್ತಿದೆ. ಜೊತೆಗೆ ಪಠ್ಯ ಮತ್ತು ಪಠ್ಯೇತರ, ಕ್ರೀಡೆ, ಕಲಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಶಿಕ್ಷಣ ನೀಡಲಾಗುತ್ತಿದೆ ಹಾಗೂ ಸರ್ವರಿಗೂ ಅನುಕೂಲವಾಗುವಂತೆ ಸುಲಭವಾಗಿ ಅರ್ಥವಾಗುವ ಹಾಗೆ ಗುಣಮಟ್ಟದ ಶಿಕ್ಷಣ, ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮಾಡಿಸುವುದು, ಗುಂಪು ಚರ್ಚೆ, ಭಾಷಣಕಲೆ ಹಾಗೂ ವಿವಿಧ ಕೌಶಲ್ಯಯುತ ಶಿಕ್ಷಣ ನೀಡಲು ಒತ್ತು ನೀಡಲಾಗುತ್ತಿದೆ ಎಂದರು.
ಚಿನ್ಮಯಿ ಪಾಟೀಲ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಅತ್ತಾಲಟ್ಟಿ, ತೊರವಿ ಹಾಗೂ ನಗರದ ವಿದ್ಯಾರ್ಥಿಗಳು, ಪಾಲಕರು, ಶಾಲೆಯ ಶಿಕ್ಷಕ, ಶಿಕ್ಷಕಿಯರು ಭಾಗವಹಿಸಿದ್ದರು.