
ಬಾಗಲಕೋಟ,ಜೂ.೧೧: ದೇಶದ ಆರ್ಥಿಕತೆಯಲ್ಲಿ ತೋಟಗಾರಿಕೆಯಿಂದ ಹೆಚ್ಚಿನ ಜಿಡಿಪಿ ಬರುತ್ತಿದ್ದು, ಹೂ ಮತ್ತು ಔಷಧಿ ಸಸ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಹೇಳಿದರು.
ತೋಟಗಾರಿಕೆ ವಿವಿಯ ಉದ್ಯಾನಗಿರಿಯ ಮುಖ್ಯ ಪ್ರೇಕ್ಷಾಗೃಹದಲ್ಲಿ ಮಂಗಳವಾರ ಜರುಗಿದ ೧೪ನೇ ಘಟಿಕೋತ್ಸವದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ಪ್ರಧಾನ ಮಾಡಿ ಮಾತನಾಡಿದ ಅವರು ಭಾರತ ಇಂದು ಸೂಕ್ಷö್ಮ ಹಾಗೂ ಸುಂದರವಾದ ಹೂಗಳ ಉತ್ಪಾದನೆಗೆ ಜಾಗತಿಕ ಮನ್ನಣೆ ಪಡೆಯುತ್ತಿದೆ. ಕಾರಣ ರೈತರು ಇಂತಹ ಹೂಗಳ ಉತ್ಪಾದನೆ ಮಾಡಿ ಆರ್ಥಿಕವಾಗಿ ಪ್ರಗತಿಹೊಂದಬೇಕು. ಇಂದು ಸೌಂದರ್ಯವರ್ಧಕ ಹಾಗೂ ಸುಹಾಸಿತ ಉತ್ಪನ್ನಗಳಿಗೆ ಹೆಚ್ಚಿಗೆ ಬೇಡಿಕೆ ಇದ್ದು, ರೈತರು ಕೃಷಿ ಜೊತೆಗೆ ತೋಟಗಾರಿಕಾ ಬೆಳೆಗಳಲ್ಲಿ ಇವುಗಳಿಗೂ ಆದ್ಯತೆ ನೀಡಬೇಕು ಎಂದರು.
ಗ್ರಾಮೀಣ ಭಾಗದ ರೈತರಿಗೆ ತಂತ್ರಜ್ಞಾನ ಮಾಹಿತಿ ಇರುವದಿಲ್ಲ. ಕಾರಣ ವಿಜ್ಞಾನಿಗಳು ರೈತರಿಗೆ ಅಂತಹ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿ ಅವರ ಉತ್ಪಾದನೆ ಹೆಚ್ಚಿಸುವ ಕಾರ್ಯವಾಗಬೇಕು. ಇಂದು ಘಟಿಕೋತ್ಸವದಲ್ಲಿ ಡಾಕ್ಟರೇಟ್ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಮಹಿಳೆಯರೇ ಹೆಚ್ಚಿನ ಬಂಗಾರ ಪದಕಗಳನ್ನು ಪಡೆದುಕೊಂಡಿರುವುದು ಸಂತಸದ ವಿಷಯವಾಗಿದೆ. ಅಲ್ಲದೇ ಸರಕಾರ ಮಹಿಳೆಯರಿಗೆ ನೀಡಿದ ಮೀಸಲಾತಿಯನ್ನು ಸದುಪಯೋಗವಾದ ಕ್ಷಣ ಇದಾಗಿದೆ.
ಘಟಿಕೋತ್ಸವದ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಹೈದರಾಬಾದನ ಅರೆ-ಶುಷ್ಕ ಉಷ್ಣವಲಯದ ಅಂತರರಾಷ್ಟಿçÃಯ ಬೆಳೆಗಳ ಸಂಶೋಧನ ಸಂಸ್ಥೆಯ ಮಹಾ ನಿರ್ದೇಶಕ ಡಾ.ಹಿಮಾಂಶು ಪಾಠಕ್ ಮಾತನಾಡಿ ತೋಟಗಾರಿಕೆಯು ಆರ್ಥಿಕ ಅಭಿವೃದ್ದಿಯ ಇಂಜಿನ್ ಆಗಿದ್ದು, ಬೆಳೆ ವೈವಿದ್ಯತೆಯನ್ನು ಸಕ್ರಿಯಗೊಳಿಸಿ ಕೃಷಿ-ಕೈಗಾರಿಕೆಗಳನ್ನು ಬೆಂಬಲಿಸಿ ಗ್ರಾಮೀಣ ಉದ್ಯಮಿಗಳನ್ನು ಸಬಲೀಕರಣಗೊಳಿಸುತ್ತದೆ. ಸುಸ್ಥಿರ ಕೃಷಿ ಪಾತ್ರದಲ್ಲಿ ತೋಟಗಾರಿಕೆಯು ಜಾಗತಿಕವಾಗಿ ಪ್ರಾಮುಖ್ಯತೆ ಪಡೆಯುತ್ತಿದ್ದು, ಭಾರತವು ಹಣ್ಣು ಮತ್ತು ತರಕಾರಿಗಳ ೨ನೇ ಅತಿದೊಡ್ಡ ಉತ್ಪಾದಕ ರಾಷ್ಟçವಾಗಿದೆ. ಕೃಷಿ ರಪ್ತಿನಲ್ಲಿ ಏಳನೇ ಸ್ಥಾನ ಪಡೆದಿದೆ. ತೋಟಗಾರಿಕೆಯಲ್ಲಿ ಹಸಿರು ಮನೆ ಪದ್ದತಿಯು ವೇಗವಾಗಿ ಬೆಳೆಯುತ್ತಿದೆ. ಇದರ ಮಾರುಕಟ್ಟೆ ಗಾತ್ರವು ೨೦೨೪ರಲ್ಲಿ ೩೩.೪ ಬಿಲಿಯನ್ ಡಾಲರ್‌ದಿಂದ ೨೦೩೩ರ ವೇಳೆಗೆ ೬೯.೭ ಬಿಲಿಯನ್ ಡಾಲರ್‌ಗೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದರು.
ಭಾರತದ ತೋಟಗಾರಿಕೆ ಆಂದೋಲನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ರಾಷ್ಟಿçÃಯ ತೋಟಗಾರಿಕೆ ಮಿಷನ್ ನಂತಹ ಕೇಂದ್ರಿಕೃತ ಉಪಕ್ರಮಗಳ ಮೂಲಕ ರಾಜ್ಯವು ವೈವಿದ್ಯಮಯ ಮತ್ತು ಸಂಮೃದ್ದಿ ತೋಟಗಾರಿಕೆ ವಲಯವನ್ನು ಬೆಳೆಸಿದೆ. ಅಡಿಕೆ, ಕಾಫಿ, ತೆಂಗಿನಕಾಯಿ, ಅರಿಶಿಣ, ಏಲಕ್ಕಿ, ಶುಂಠಿ ಮತ್ತು ಕಾಳು ಮೆಣಸಿನಂತಹ ಹೆಚ್ಚಿನ ಮೌಲ್ಯದ ತೋಟಗಾರಿಕೆ ಬೆಳೆಗಳನ್ನು ಉತ್ಪಾದಿಸುತ್ತದೆ. ಮಾರ್ಚ ೨೦೨೫ರ ಹೊತ್ತಿಗೆ ಕರ್ನಾಟಕ ತೋಟಗಾರಿಕಾ ಪ್ರದೇಶವು ೨.೬೩ ಮಿಲಿಯನ್ ಹೆಕ್ಟೇರ್‌ಗಳನ್ನು ವ್ಯಾಪಿಸಿದೆ. ಧಾರವಾಡ, ಬೆಳಗಾವಿ, ಕೋಲಾರ, ವಿಜಯಪುರ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಮಾವು, ದ್ರಾಕ್ಷಿ, ಮಸಾಲೆ ಪದಾರ್ಥ ಮತ್ತು ತರಕಾರಿಗಳಿಗೆ ಹೆಸರುವಾಸಿಯಾಗಿದೆ ಎಂದರು.
೨೦೦೮ರಲ್ಲಿ ಸ್ಥಾಪನೆಯಾದ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ತೋಟಗಾರಿಕೆ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ರಾಷ್ಟಿçÃಯ ನಾಯಕನಾಗಿ ಹೊರಹೊಮ್ಮಿದೆ. ಕೇವಲ ೧೬ ವರ್ಷಗಳಲ್ಲಿ ವಿಶ್ವವಿದ್ಯಾಲಯವು ಪ್ರಭಾವಶಾಲಿ ಶೈಕ್ಷಣಿಕ ಮತ್ತು ಸಂಶೋಧನಾ ಬಂಡವಾಳವನ್ನು ವಿಸ್ತರಿಸಿದೆ. ಪದವಿ ಪಡೆದ ವಿದ್ಯಾರ್ಥಿಗಳು ಭವಿಷ್ಯ ಭಾರತದ ಹಸಿರುಗೊಳಿಸುವ ಜ್ಯೋತಿಧಾರಕರಾಗಿದ್ದಾರೆ. ಜಗತ್ತಿಗೆ ನಿಮ್ಮ ಶಕ್ತಿ, ನಿಮ್ಮ ಆಲೋಚನೆಗಳು ಮತ್ತು ನಿಮ್ಮ ಸಹಾನುಭೂತಿ ಅವಶ್ಯವಾಗಿವೆ. ನಿಮ್ಮ ಜ್ಞಾನವನ್ನು ವೈಯಕ್ತಿಕ ಯಶಸ್ಸಿಗೆ ಮಾತ್ರವಲ್ಲದೇ ರೈತರನ್ನು ಉನ್ನತೀಕರಿಸಲು, ಆಹಾರ ವ್ಯವಸ್ಥೆಗಳನ್ನು ಬಲಪಡಿಸಲು ಮತ್ತು ಪರಿಸರವನ್ನು ಪೋಷಿಸಲು ಮತ್ತು ಕಾಪಾಡಲು ಬಳಸಿಕೊಳ್ಳಬೇಕು ಎಂದರು.
ಪ್ರಾರಂಭದಲ್ಲಿ ತೋಟಗಾರಿಕೆ ವಿವಿಯ ಕುಲಪತಿ ಡಾ.ವಿಷ್ಣುವರ್ಧನ ಎಲ್ಲರನ್ನು ಸ್ವಾಗತಿಸಿ ಪ್ರಗತಿ ವರದಿಯನ್ನು ಹೇಳಿದರು. ಕಾರ್ಯಕ್ರಮದಲ್ಲಿ ತೋವಿವಿಯ ಕುಲಸಚಿತ ಮಹಾದೇವ ಮುರಗಿ, ಶಿಕ್ಷಣ ನಿರ್ದೇಶಕ ಡಾ.ಎನ್.ಕೆ.ಹೆಗಡೆ ಸೇರಿದಂತೆ ತೋವಿವಿಯ ಆಡಳಿತ ಮಂಡಳಿಯ ನಿರ್ದೇಶಕರಾದ ಶಾಸಕ ಭೀಮಸೇನ ಚಿಮ್ಮನಕಟ್ಟಿ, ವಿಧಾನ ಪರಿಷತ್ ಶಾಸಕ ಹನಮಂತ ನಿರಾಣಿ, ಮಾಜಿ ಎಮ್.ಎಲ್.ಸಿ ಅರುಣ ಶಹಾಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.