
ಕಲಬುರಗಿ:ಜ.24: ವಿದ್ಯಾರ್ಥಿನಿಯರು ಓದುವ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೂ ಅಷ್ಟೇ ಮಹತ್ವ ನೀಡಬೇಕು. ಕ್ರೀಡಾ ಚಟುವಟಿಕೆ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರಯತ್ನವೇ ಗೆಲುವೆಂದು ಭಾವಿಸಿ ಎಂದು ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರರಾದ ಶ್ರೀಮತಿ. ವರ್ಷಾ ರಾಜೀವ ಜಾನೆ ಮಹಿಳಾ ಕ್ರೀಡಾಪಟುಗಳಿಗೆ ಸಲಹೆ ನೀಡಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರ ಸಂಘ ಸಂವಿಧಾನ ದಿನಾಚರಣೆ ಅಂಗವಾಗಿ ದೈಹಿಕ ಶಿಕ್ಷಣ ವಿಭಾಗದ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಸಂವಿಧಾನ ಪ್ರೀಮಿಯರ್ ಲೀಗ್-2026 ಮಹಿಳಾ ತಂಡಗಳ ಕ್ರಿಕೆಟ್ ಪಂದ್ಯಾವಳಿಯನ್ನು ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮಹಿಳಾ ವಿಭಾಗದ ಇಂಡಿಯನ್ ಕ್ರಿಕೆಟ್, ಐಪಿಎಲ್ ಮ್ಯಾಚುಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಪುರುಷರಿಗಿಂತ ಮಹಿಳೆಯರ ಕ್ರಿಕೆಟ್ ಪಂದ್ಯಗಳು ರೋಚಕವಾಗಿ ನಡೆಯುತ್ತಿವೆ. ಅವರ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ಕೂಡ ಸಿಗುತ್ತಿದೆ. ವಿದ್ಯಾರ್ಥಿನಿಯರಿಗಾಗಿ ಕ್ರಿಕೆಟ್ ಪಂದ್ಯ ಆಯೋಜಿಸಿರುವ ಅತಿಥಿ ಉಪನ್ಯಾಸಕರ ಸಂಘಕ್ಕೆ ಅಭಿನಂದನೆ ತಿಳಿಸಿದ ಅವರು ಮಹಿಳೆಯರಿಗೆ ಇದೊಂದು ಸುವರ್ಣಾವಕಾಸ. ತಂಡಗಳು ಉತ್ತಮ ಪ್ರದರ್ಶನ ನೀಡಿ ಶ್ರೇಯಸ್ಸು ನಿಮಗೆ ಸಿಗಲೆಂದು ಶುಭ ಆರೈಸಿದರು.
ಕಲಬುರಗಿ ಮಹಾನಗರ ಪಾಲಿಕೆ ಉಪ ಮಹಾಪೌರರಾದ ಶ್ರೀಮತಿ. ತೃಪ್ತಿ ಶ್ರೀನಿವಾಸ ಲಾಖೆ ಮಾತನಾಡಿ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಿರುವ ಮಹಿಳಾ ವಿದ್ಯಾರ್ಥಿಗಳಲ್ಲಿ ಉತ್ಸಾಹ ಮತ್ತು ಖುಷಿ ಮುಖದಲ್ಲಿ ಎದ್ದು ಕಾಣುತ್ತಿದೆ. ಮಾನಸಿಕ ಹುಮ್ಮಸ್ಸು, ಶಕ್ತಿ ಮತ್ತು ಸಾಮಥ್ರ್ಯದಿಂದ ಪ್ರದರ್ಶನ ನೀಡಿದರೆ ನಿಮಗೆ ಗೆಲುವು ಖಚಿತ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿರುವುದು ನಮಗೆ ಖುಷಿ ತಂದಿದೆ ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ವಿತ್ತಾಧಿಕಾರಿ ಶ್ರೀಮತಿ ಜಯಾಂಬಿಕ ಮಾತನಾಡಿ ಜೀವನದ ಉನ್ನತಿಗೆ ಆರೋಗ್ಯವೇ ಸಂಪತ್ತು. ಮಾನಸಿಕ ಆರೋಗ್ಯ ಮತ್ತು ದೈಹಿಕ ಸದೃಢತೆ ಬೆಳೆಸಿಕೊಂಡರೆ ಕ್ರೀಡಾ ಕ್ಷೇತ್ರಗಳಲ್ಲಿ ಯಶಸ್ಸು ಕಾಣಬಹುದು. ಕ್ರಿಕೆಟ್ ಪಂದ್ಯದಲ್ಲಿ ಸೋಲು ಗೆಲುವು ಮುಖ್ಯವಲ್ಲ. ಉತ್ತಮ ಪ್ರದರ್ಶನವೇ ಗೆಲುವು ಎಂಬ ಭಾವನೆ ಬೆಳೆಸಿಕೊಳ್ಳಿ ಎಂದರು.
ಕಲಬುರಗಿ 93.5 ರೆಡ್ ಎಫ್.ಎಂ. ಚಾನೆಲ್‍ನ ಆರ್‍ಜೆ ಶ್ರೀಮತಿ ವಾಣಿಶ್ರೀ ಮಾತನಾಡಿ ಮಹಿಳೆಯರು ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳು, ನಿರ್ದೇಶಕ ತತ್ವಗಳು, ಮಹಿಳಾ ಅವಕಾಶಗಳನ್ನು ತಿಳಿದುಕೊಳ್ಳಬೇಕು. ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ. ಮಹಿಳೆಯರು ಸದಾ ಅವರನ್ನು ಪೂಜಿಸಬೇಕು. ಮಹಿಳೆಯರಿಗೆ ಗೌರವ, ಮನ್ನಣೆ, ಹಕ್ಕುಗಳು ಮತ್ತು ಸೌಲಭ್ಯಗಳು ದೊರಕಿರುವುದು ಸಂವಿಧಾನದಿಂದ ಮಾತ್ರ ಎಂದರು.
ಅತಿಥಿ ಪಉನ್ಯಾಸಕರ ಸಂಘದ ಅಧ್ಯಕ್ಷ ಡಾ. ಅರುಣಕುಮಾರ ಕುರನೆ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಒಂದು ವೇದಿಕೆ ನಿರ್ಮಿಸುವ ಮೂಲಕ ಅವರ ಪ್ರತಿಭೆಗೆ ಮುಕ್ತ ಅವಕಾಶ ಮಾಡುವ ಉದ್ದೇಶದಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಪರಸ್ಪರ ಪರಿಚಯ, ಸ್ನೇಹ ಬಾಂಧವ್ಯ, ಮುಕ್ತ ಅಭಿವ್ಯಕ್ತಿಗೆ ಈ ಪಂದ್ಯಾವಳಿ ಸಾಕ್ಷಿಯಾಗಿದೆ. ಕ್ರೀಡೆ ಸೇರಿದಂತೆ, ರಾಷ್ಟ್ರೀಯ ವಿಚಾರ ಸಂಕಿರಣ, ಸಮ್ಮೇಳನ ಮತ್ತು ಉಪನ್ಯಾಸಗಳ ಆಯೋಜನೆ ಉದ್ದೇಶವಿದೆ ಎಂದರು. ರೇಷ್ಮಿ ಏಜುಕೇಷನಲ್ ಅಂಡ್ ಚಾರಿಟೇಬಲ್ ಟ್ರಸ್ಟ್‍ನ ಶ್ರೀಮತಿ ಗೀತಾ ರೇಷ್ಮಿ ಹಾಗೂ ಸೇಡಂ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣದ ನಿರ್ದೇಶಕ ಡಾ. ಜಗನ್ನಾಥ ಪಟ್ಟಣಕರ್ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಅಶೋಕ ದೊಡ್ಮನಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಮಹಿಳಾ ಕ್ರಿಕೆಟ್ ತಂಡಗಳು, ದೈಹಿಕ ಶಿಕ್ಷಣ ವಿಭಾಗದ ಬೋಧಕೇತರ ಸಿಬ್ಬಂದಿಗಳು ಮತ್ತಿತರರಿದ್ದರು. ಹಣವೀರಗೌಡ ಕಾರ್ಯಕ್ರಮ ನಿರ್ವಹಿಸಿದರು.
ಪ್ರಸ್ತುತ ಮಹಿಳೆಯರಲ್ಲಿ ಆರೋಗ್ಯ ಕಾಳಜಿ ಬಹಳ ಮುಖ್ಯ. ಮಹಿಳಾ ಆರೋಗ್ಯದಿಂದ ಕುಟುಂಭದ ಆರೋಗ್ಯವಿದೆ. ಕುಟುಂಭ ಮತ್ತು ಆರೋಗ್ಯ ಸಮತೋಲನದಿಂದ ಸಮಾಜ ಸ್ವಾಸ್ಥವಾಗಿರುತ್ತದೆ. ಕ್ರೀಡೆಯಿಂದ ಸ್ವಾಸ್ಥ್ಯ ಆರೋಗ್ಯ ಮತ್ತು ಕುಟುಂಭ ಬೆಳೆಯುತ್ತದೆ. ಇದರಿಂದ ಸದೃಢ ಸಮಾಜ ನಿರ್ಮಿಸಬಹುದು. ಪಂದ್ಯಗಳಲ್ಲಿ ಆತ್ಮವಿಶ್ವಾಸ, ಸ್ವಾಸ್ಥ್ಯ ಮನಸ್ಸಿನಂದ ಭಾಗವಹಿಸಿ. ಸಂವಿಧಾನ ಕ್ರಿಕೆಟ್ ಟೂರ್ನಮೆಂಟ್ ಪ್ರತಿವರ್ಷ ಮುಂದುವರಿಯಲಿ. – ಶ್ರೀಮತಿ ವಾಣಿಶ್ರೀ
ಆರ್. ಜೆ,. 93.5 ರೆಡ್ ಎಫ್.ಎಂ, ಕಲಬುರಗಿ.
ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಲ್ಲಿ ಪ್ರತಿಭೆಯಿದೆ. ಶಿಕ್ಷಣದ ಜೊತೆಗೆ ಕ್ರೀಡೆಗಳ ಬಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಇಂಡಿಯಾ ವಲ್ರ್ಡ ಕಪ್‍ನಲ್ಲಿ ಕಲಬುರಗಿ ವಿದ್ಯಾರ್ಥಿನಿ ಶ್ರೇಯಾಂಕ ಪಾಟೀಲ್ ಮಾಡಿರುವ ಸಾಧನೆ ಈ ಭಾಗದ ಉತ್ಸಾಹಿ ವಿದ್ಯಾರ್ಥಿನಿಯರಿಗೆ ಪ್ರೇರಣೆ. ಅವರ ರೋಚಕ ಆಟ ಮತ್ತು ಸಾಧನೆಗೆ ಮೆಚ್ಚುಗೆಯಾಗಿದೆ. ನಿಮ್ಮ ಸ್ವಸಾಮಥ್ರ್ಯ, ಕ್ರೀಡಾಸಕ್ತಿ ಮತ್ತು ಪ್ರತಿಭೆಗಳಿಗೆ ಉತ್ತಮ ಅವಕಾಶಗಳಿವೆ. ನಮ್ಮ ಬಾಗದ ಮಕ್ಕಳು ಕೂಡ ಕ್ರಿಕೆಟ್ ಕ್ಲಬ್ ಸೇರ್ಪಡೆಯಾಗಿ ಕ್ರೀಡೆಯಲ್ಲಿ ಸಾಧನೆ ಮಾಡಲಿ.
ಡಾ. ಸುರೇಶ್ ಜಂಗೆ
ವಿಶ್ವವಿದ್ಯಾಲಯ ಗ್ರಂಥಪಾಲಕರು ಹಾಗೂ ಸಂಯೋಜನಾಧಿಕಾರಿಗಳು
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ























