
ಯಾದಗಿರಿ:ಮೇ.೧೬:ಗಿರಿಜನ ಸಮುದಾಯಗಳ ಸಾಂಸ್ಕೃತಿಕ ವೈಭವ, ಪರಂಪರೆ ಹಾಗೂ ರಾಷ್ಟ್ರೀಯ ಏಕತೆಯ ಸಂದೇಶವನ್ನು ದೇಶದ ಮುಂದೆ ಅನಾವರಣಗೊಳಿಸುವ ಉದ್ದೇಶದಿಂದ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮೇ ೨೪ರಂದು ನಡೆಯಲಿರುವ “ಜನಜಾತಿ ಸಾಂಸ್ಕೃತಿಕ ಸಮಾಗಮ-೨೦೨೬” ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆಗಳು ಆರಂಭಗೊAಡಿವೆ. ಗಿರಿಜನ ಸುರಕ್ಷಾ ವೇದಿಕೆ ಕರ್ನಾಟಕ, ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದ್ದು, ದೇಶದ ಇತಿಹಾಸದಲ್ಲೇ ಅತಿದೊಡ್ಡ ಗಿರಿಜನ ಸಾಂಸ್ಕೃತಿಕ ಸಮಾವೇಶವೆಂದು ಬಣ್ಣಿಸಲಾಗಿದೆ.
ಮಹಾನ್ ಜನನಾಯಕ ಭಗವಾನ್ ಬಿರ್ಸಾ ಮುಂಡಾ ಅವರ ೧೫೦ನೇ ಜಯಂತಿ ವರ್ಷದ ಅಂಗವಾಗಿ ಆಯೋಜನೆಯಾಗುತ್ತಿರುವ ಈ ಮಹಾಸಂಗಮದಲ್ಲಿ ದೇಶದ ವಿವಿಧ ರಾಜ್ಯಗಳ ೫೦೦ಕ್ಕೂ ಹೆಚ್ಚು ಜನಜಾತಿ ಸಮುದಾಯಗಳಿಂದ ಒಂದೂವರೆ ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಗಿರಿಜನ ಸಮುದಾಯಗಳ ಸಾಂಸ್ಕೃತಿಕ ಅಸ್ತಿತ್ವ, ಧಾರ್ಮಿಕ ಪರಂಪರೆ ಹಾಗೂ ಸಾಮಾಜಿಕ ಮೌಲ್ಯಗಳನ್ನು ರಾಷ್ಟ್ರೀಯ ವೇದಿಕೆಯಲ್ಲಿ ಪರಿಚಯಿಸುವ ಅಪರೂಪದ ಅವಕಾಶ ಇದಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಗಾಧರ ನಾಯಕ್ ತಿಂಥಣಿ, ರಾಜ್ಯ ಸಂಯೋಜಕರು, “ಜನಜಾತಿ ಸಮುದಾಯಗಳ ಐಕ್ಯತೆ, ಸಂಸ್ಕೃತಿ ಮತ್ತು ಪರಂಪರೆಯನ್ನು ದೇಶದ ಮುಂದೆ ಪ್ರದರ್ಶಿಸುವ ಅತ್ಯಂತ ಮಹತ್ವದ ವೇದಿಕೆಯಾಗಿ ಈ ಸಮಾಗಮ ರೂಪುಗೊಳ್ಳಲಿದೆ. ವಿಭಿನ್ನ ರಾಜ್ಯಗಳ ಗಿರಿಜನ ಸಮಾಜ ಒಂದೇ ವೇದಿಕೆಯಲ್ಲಿ ಸೇರುವ ಮೂಲಕ ಸಾಮಾಜಿಕ ಸಮರಸತೆ ಮತ್ತು ರಾಷ್ಟ್ರೀಯ ಏಕತೆಯ ಬಲವರ್ಧನೆ ಸಾಧ್ಯವಾಗಲಿದೆ” ಎಂದು ಹೇಳಿದರು.
ಯಾದಗಿರಿ ಜಿಲ್ಲೆಯಿಂದಲೇ ೧೩೦ಕ್ಕೂ ಹೆಚ್ಚು ಗಿರಿಜನ ಸಮುದಾಯದ ಪ್ರತಿನಿಧಿಗಳು ಈ ಐತಿಹಾಸಿಕ ಸಮಾಗಮದಲ್ಲಿ ಭಾಗವಹಿಸಲಿದ್ದು, ಜಿಲ್ಲೆಯ ಜನಜಾತಿ ಸಂಸ್ಕೃತಿ ಮತ್ತು ಪರಂಪರೆಯನ್ನು ರಾಷ್ಟ್ರ ಮಟ್ಟದಲ್ಲಿ ಪರಿಚಯಿಸಲಿದ್ದಾರೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ದೆಹಲಿಯ ಐದು ವಿಭಿನ್ನ ಪ್ರದೇಶಗಳಿಂದ ಭವ್ಯ ಸಾಂಸ್ಕೃತಿಕ ಶೋಭಾಯಾತ್ರೆಗಳು ಆರಂಭವಾಗಲಿದ್ದು, ಜನಜಾತಿ ಸಮುದಾಯಗಳ ವೈವಿಧ್ಯಮಯ ವೇಷಭೂಷಣ, ಕಲಾ ಪರಂಪರೆ, ಜನಪದ ಸಂಸ್ಕೃತಿ ಹಾಗೂ ಜೀವನ ಶೈಲಿಯ ವೈಭವವನ್ನು ದೇಶದ ಮುಂದೆ ತೆರೆದಿಡಲಿವೆ. ಬಳಿಕ ಎಲ್ಲಾ ಶೋಭಾಯಾತ್ರೆಗಳು ಕೆಂಪುಕೋಟೆ ಆವರಣದಲ್ಲಿ ಒಂದಾಗಲಿದ್ದು, ಅಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ.
ಸಭೆಯಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಗಿರಿಜನ ಮುಖಂಡರು, ಚಿಂತಕರು, ಕಲಾವಿದರು ಹಾಗೂ ಸಮಾಜದ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಂmiಣ Shಚಿh ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
“ವನವಾಸಿ, ಗ್ರಾಮವಾಸಿ, ನಗರವಾಸಿ – ನಾವೆಲ್ಲರೂ ಭಾರತವಾಸಿಗಳು; ನಮ್ಮೆಲ್ಲರ ರಕ್ತ ಒಂದೇ” ಎಂಬ ಘೋಷವಾಕ್ಯದಡಿ ನಡೆಯಲಿರುವ ಈ ಸಮಾಗಮವು ರಾಷ್ಟ್ರೀಯ ಏಕತೆ, ಸಾಮಾಜಿಕ ಸಮರಸತೆ ಹಾಗೂ ಗಿರಿಜನರ ಸಾಂಸ್ಕೃತಿಕ ಗುರುತಿನ ಬಲವರ್ಧನೆಗೆ ಪ್ರಮುಖ ವೇದಿಕೆಯಾಗಲಿದೆ.
ಕಾರ್ಯಕ್ರಮದ ಅಂಗವಾಗಿ ಪಾರಂಪರಿಕ ಕಲಾ ಪ್ರದರ್ಶನಗಳು, ಜನಪದ ಆಚರಣೆಗಳು, ಸಾಂಸ್ಕೃತಿಕ ವೈಭವದ ಮೆರವಣಿಗೆಗಳು ಹಾಗೂ ಸಮುದಾಯ ಸಹಭಾಗಿತ್ವದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ದೆಹಲಿಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ವಾತಾವರಣ ನಿರ್ಮಾಣವಾಗಲಿದೆ.
ಲಕ್ಷಾಂತರ ಗಿರಿಜನ ಬಂಧುಗಳ ಆಗಮನದ ಹಿನ್ನೆಲೆಯಲ್ಲಿ ವಸತಿ, ಆಹಾರ, ಕುಡಿಯುವ ನೀರು, ವೈದ್ಯಕೀಯ ನೆರವು, ಸಾರಿಗೆ ಹಾಗೂ ಸ್ವಚ್ಛತಾ ವ್ಯವಸ್ಥೆಗಳ ಸಮರ್ಪಕ ನಿರ್ವಹಣೆಗೆ ೨೦ಕ್ಕೂ ಹೆಚ್ಚು ವಿಭಾಗಗಳು ಹಾಗೂ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಸಂದರ್ಭದಲ್ಲಿ ಯಂಕಪ್ಪ ಮಾಕಸಿ ಹೇಮನೂರು, ರಾಜಾ ಪಿಡ್ಡ ನಾಯಕ್, ಕಾಶಪ್ಪ ದೊರೆ ಅಬ್ಬೆತುಮಕೂರು, ಭೀಮಾಶಂಕರ ಮೇಟಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.






















