
ಕಲಬುರಗಿ, ಜು.3: ವಿದ್ಯುತ್ ಕಾಯ್ದೆ-2003ರ 14 ಮತ್ತು 15 ಕಲಂ ಅಡಿಯಲ್ಲಿ ಟಾಟಾ ಪವರ್ ಕಂಪನಿಯು ಜೆಸ್ಕಾಂ ವ್ಯಾಪ್ತಿಯ ಬಳ್ಳಾರಿ, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ಮೂರು ಮಹಾನಗರ ಪಾಲಿಕೆಗಳು ಹಾಗೂ ಆರು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣಾ ಪರವಾನಗಿ (Distribution Licence)ನೀಡುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‍ಸಿ) ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಈ ಪ್ರಸ್ತಾವನೆಯು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಜೆಸ್ಕಾಂ ತನ್ನ ಆಕ್ಷೇಪಣೆಯನ್ನು ಕೆಇಆರ್‍ಸಿ ಮುಂದೆ ಸಲ್ಲಿಸಿದೆ.
ಪ್ರಸ್ತುತ ಜೆಸ್ಕಾಂ ಸಂಸ್ಥೆಯು ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ಸಮಗ್ರವಾಗಿ ವಿದ್ಯುತ್ ವಿತರಣಾ ಸೇವೆ ಒದಗಿಸುತ್ತಿದೆ.
ಆಕ್ಷೇಪಣೆಗಳು: ಪ್ರಸ್ತಾವಿತ ಪ್ರದೇಶದಲ್ಲಿ ಸ್ವತಂತ್ರ ವಿದ್ಯುತ್ ವಿತರಣಾ ಜಾಲವನ್ನು ನಿರ್ಮಿಸುವ ಕುರಿತು ಟಾಟಾ ಪವರ್ ಸ್ಪಷ್ಟ ಯೋಜನೆ ಸಲ್ಲಿಸಿಲ್ಲ. ಬದಲಾಗಿ, ಜೆಸ್ಕಾಂನ ಈಗಿರುವ ಮೂಲ ಸೌಕರ್ಯವನ್ನು ಅವಲಂಬಿಸಿ ವಿದ್ಯುತ್ ಸರಬರಾಜು ಮಾಡಲು ಉದ್ದೇಶಿಸಿರುವುದಾಗಿ ಹೇಳಿದೆ. ವಿದ್ಯುತ್ ಖರೀದಿ ಯೋಜನೆಯ ಕುರಿತಾಗಿಯೂ ಜೆಸ್ಕಾಂ ಆಕ್ಷೇಪ ಸಲ್ಲಿಸಿದ್ದು, ಅಲ್ಪಾವಧಿ ವಿದ್ಯುತ್ ಖರೀದಿ ಅವಲಂಬನೆಯು ಗ್ರಾಹಕರಿಗೆ ಹೆಚ್ಚುವರಿ ವೆಚ್ಚದ ಭಾರ ಉಂಟುಮಾಡುವ ಸಾಧ್ಯತೆಯಿದೆ.
ಕೈಗಾರಿಕಾ ಹಾಗೂ ವಾಣಿಜ್ಯ ವಲಯದ ಹೆಚ್ಚಿನ ಆದಾಯ ತರುವ ಗ್ರಾಹಕರನ್ನೇ ಗುರಿಯಾಗಿಸಿ ಕೊಂಡು ಟಾಟಾ ಸಂಸ್ಥೆ ಸೇವೆ ನೀಡುವ ಸಾಧ್ಯತೆ ಇರುವುದರಿಂದ, ಸಬ್ಸಿಡಿ ಪಡೆಯುವ ಸಾಮಾನ್ಯ ಗ್ರಾಹಕರಿಗೆ ತೊಂದರೆಯಾಗಬಹುದು. ಅಲ್ಲದೇ ಜೆಸ್ಕಾಂನ ಆರ್ಥಿಕ ಸ್ಥಿರತೆಗೆ ಧಕ್ಕೆ ಉಂಟಾಗಬಹುದು. ಗೃಹ, ಕೃಷಿ ಹಾಗೂ ಇತರ ಸಬ್ಸಿಡಿ ಆಧರಿತ ಗ್ರಾಹಕರಿಗೆ ನೀಡಲಾಗುತ್ತಿರುವ ಕ್ರಾಸ್ ಸಬ್ಸಿಡಿ ವ್ಯವಸ್ಥೆ ದುರ್ಬಲಗೊಳ್ಳುವ ಸಾಧ್ಯತೆ ಇದೆ.
ಜೆಸ್ಕಾಂ ಸಂಸ್ಥೆಯು ತನ್ನ ವ್ಯಾಪ್ತಿಯಲ್ಲಿನ ಪ್ರಸ್ತುತ ಹಾಗೂ ಭವಿಷ್ಯದ ವಿದ್ಯುತ್ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ ವಿವಿಧ ವಿದ್ಯುತ್ ಉತ್ಪಾದನಾ ಸಂಸ್ಥೆಗಳೊಂದಿಗೆ ದೀರ್ಘಾವಧಿಯ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಂಡಿದ್ದು, ವಿದ್ಯುತ್ ವಿತರಣಾ ಜಾಲದ ವಿಸ್ತರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ಗಣನೀಯ ಪ್ರಮಾಣದ ಸಾಲವನ್ನು ಸಹ ಪಡೆದಿದೆ.
ಇಂತಹ ಸಂದರ್ಭದಲ್ಲಿ ಲಾಭದಾಯಕ ನಗರ ಪ್ರದೇಶಗಳಲ್ಲಿ ಖಾಸಗಿ ಕಂಪನಿಗಳಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡಿದಲ್ಲಿ, ಜೆಸ್ಕಾಂನ ಆದಾಯದಲ್ಲಿ ಕುಸಿತ ಉಂಟಾಗಿ ಸಂಸ್ಥೆಯ ಆರ್ಥಿಕ ಸ್ಥಿರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸವಿಸ್ತಾರ ಆಕ್ಷೇಪಣೆಗಳು ಮತ್ತು ಅಭಿಪ್ರಾಯಗಳನ್ನು ನಿಯಮಾನುಸಾರ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‍ಸಿ) ಮುಂದೆ ಸಲ್ಲಿಸಿದ್ದು, ಸಂಸ್ಥೆಯ ಗ್ರಾಹಕರು, ರೈತರು ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ಗ್ರಾಹಕರ ಮುಂಬರುವ ಎಲ್ಲಾ ವಿದ್ಯುತ್ ಬೇಡಿಕೆಗಳ ಜೊತೆಗೆ ಹೊಸ ವಿದ್ಯುತ್ ಸಂಪರ್ಕ ಒದಗಿಸುವ ಸಾಮಥ್ರ್ಯವೂ ಜೆಸ್ಕಾಂಗೆ ಇದೆ.































