
ಬೆಂಗಳೂರು, ಮೇ ೧೨ : ಪ್ರಧಾನಿ ನರೇಂದ್ರ ಮೋದಿ ಹೋಗುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಸಿಕ್ಕ ಜಾಗದಲ್ಲಿ ಟೈಮರ್ ಪತ್ತೆ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಹಾಗೆಯೇ ಈ ಪ್ರಕರಣವನ್ನು ಎನ್‌ಐಎಗೆ ತನಿಖೆಗೆ ವಹಿಸಲಿದ್ದೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕರೆ ಮಾಡಿ ಬಾಂಬ್ ಬೆದರಿಕೆ ಹಾಕಿದವನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ತನಿಖೆಯೂ ಆಗುತ್ತಿದೆ. ಹೋಗುವ ದಾರಿಯಲ್ಲಿ ಸಿಕ್ಕ ಜಿಲೆಟಿನ್ ಕಡ್ಡಿ ಸೇರಿದಂತೆ ಏನೆಲ್ಲ ಸಿಕ್ಕಿದೆಯೋ ಅದನ್ನು ತನಿಖೆ ಮಾಡಲಾಗುತ್ತಿದೆ ಎಂದರು.
ಎನ್‌ಐಎ ಕೂಡ ತನಿಖೆ ಮಾಡಲು ಕೋರಿದೆ. ಅವರಿಗೂ ತನಿಖೆ ಮಾಡಲು ಹೇಳಲಿದ್ದೇವೆ. ಪ್ರಧಾನಿ ಬರುವ ಕಾರ್ಯಕ್ರಮಕ್ಕೆ ಉನ್ನತ ಮಟ್ಟದ ಸಭದ್ರತೆ ಇರಲಿದೆ. ನಾವು ಹಾಗೂ ಕೇಂದ್ರ ಭದ್ರತೆ ವಹಿಸುತ್ತೇವೆ. ಕಾರ್ಯಕ್ರಮಕ್ಕೆ ಬರುವ ಎರಡು ಗಂಟೆ ಮುಂಚೆ ಅಂದರೆ ಬೆಳಗ್ಗೆ ೯ ಗಂಟೆಗೆ ಜಿಲೆಟಿನ್ ಕಡ್ಡಿ ಪತ್ತೆ ಹಚ್ಚಿದ್ದಾರೆ.
ಇದು ಒಳ್ಳೆಯ ಕೆಲಸ. ಭಯೋತ್ಪಾದನೆಗೆ ಸಂಪರ್ಕ ಇರುವ ಬಗ್ಗೆ ಈಗಲೇ ಹೇಳೋದಕ್ಕೆ ಆಗುವುದಿಲ್ಲ. ತನಿಖೆ ಆಗಲಿ ನೋಡೋಣ ಎಂದು ಪ್ರತಿಕ್ರಿಯೆ ನೀಡಿದರು.
ಶೃಂಗೇರಿಯಲ್ಲಿ ಮತ್ತೆ ರಾಜೇಗೌಡರಿಗೆ ಗೆಲುವು ವಿಚಾರವಾಗಿ ಮಾತನಾಡಿ, ನ್ಯಾಯಾಲಯ ಏನು ತೀರ್ಪು ಕೊಡುತ್ತೋ ಅದನ್ನು ನೋಡಬೇಕು. ಅಲ್ಲಿ ಮರು ಎಣಿಕೆ ಮಾಡಿದಾಗ ೨೫೦ ಮತ ಹೆಚ್ಚು ಬರುತ್ತೆ ಅಂದರೆ ಏನು ಅರ್ಥ?. ಕೌಂಟಿಂಗ್ ಸರಿಯಾಗಿಲ್ಲ ಎಂದು ಅರ್ಥ ಅಲ್ವಾ?. ಅಧಿಕಾರಿಗಳ ಮೇಲೆ ಕ್ರಮ ಆಗಬೇಕಲ್ವಾ?. ಈ ಹಿಂದೆ ಕೌಂಟ್ ಮಾಡಿದ್ದು ಸರಿ ಎಂದು ಸುಪ್ರೀಂ ಕೋರ್ಟ್ ತಡೆ ನೀಡಿದೆ. ಟ್ಯಾಂಪರಿಂಗ್ ಆಗಿರೋ ದೂರಿನ ಬಗ್ಗೆ ರಾಜ್ಯ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಜುಲೈ ೧ರಿಂದ ವಿಬಿ ಜಿ ರಾಮ್ ಜಿ ಕಾಯ್ದೆ ಅನುಷ್ಠಾನ ವಿಚಾರವಾಗಿ ಮಾತನಾಡಿ ಅವರು, ಕೇಂದ್ರ ಸರ್ಕಾರದ ಮಹತ್ವದ ನರೇಗಾ ಯೋಜನೆಯನ್ನು ಮನಮೋಹನ್ ಸಿಂಗ್ ಜಾರಿಗೆ ತಂದಿದ್ರು. ಗ್ರಾಮೀಣ ಭಾಗದಲ್ಲಿ ಉದ್ಯೋಗ ಇಲ್ಲದವರಿಗೆ ಉದ್ಯೋಗ ಒದಗಿಸುವ ಯೋಜನೆ ಇದು. ಜನರ ಕೆಲಸಕಾರ್ಯ ಮತ್ತು ಅಭಿವೃದ್ಧಿ ಕೆಲಸ ಈ ಯೋಜನೆಯಡಿ ಆಗುತ್ತಿದ್ದವು. ಆ ಯೋಜನೆಯನ್ನು ಬೆಂಬಲಿಸುತ್ತಲೇ ಕೇಂದ್ರ ಸರ್ಕಾರ ಬಂದಿತ್ತು. ಆದರೆ ಈಗ ಬೆಂಬಲಿಸುತ್ತಿಲ್ಲ ಎಂದರು.
ಯಾವ ದುರುದ್ದೇಶ ಇಟ್ಟುಕೊಂಡು ನರೇಗಾ ರದ್ದು ಮಾಡುತ್ತಿದ್ದಾರೋ ಗೊತ್ತಿಲ್ಲ. ರಾಜ್ಯದಲ್ಲಿ ನಾವೇ ಈ ಯೋಜನೆಗೆ ಸಪೋರ್ಟ್ ಮಾಡಬೇಕು ಅಂತ ಚರ್ಚಿಸಿದ್ದೇವೆ. ಅದಕ್ಕೆ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ. ಈ ಯೋಜನೆಯನ್ನು ನಿಲ್ಲಿಸೋಕೆ ಭ್ರಷ್ಟಾಚಾರ ಕಾರಣ ಅಂತ ಹೇಳ್ತಾರೆ. ಇದರ ಜತೆಗೆ ದುರುಪಯೋಗ ಸೇರಿ ಹಲವು ಕಾರಣ ನೀಡಿದ್ದಾರೆ. ಆದರೆ ಇದನ್ನು ಆಡಳಿತಾತ್ಮಕವಾಗಿ ಸರಿಪಡಿಸಲು ಆಗೋದಿಲ್ಲಾ.?. ಭ್ರಷ್ಟಾಚಾರ ಮಾಡಿದ್ರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ವಾ.? ಎಂದು ಪ್ರಶ್ನಿಸಿದ್ದಾರೆ.

























