
ಸಂಜೆವಾಣಿ ವಾರ್ತೆ,
ವಿಜಯಪುರ, ಜೂ. ೨೫:ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ಬುಧವಾರ ವಿಜಯಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರೈತ ಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಸಾಮಾಜಿಕ ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳ ಮುಖಂಡರ ಸಭೆ ನಡೆಯಿತು.
ಸಭೆಯಲ್ಲಿ ಕೃಷ್ಣಾ ನದಿ ನೀರಿನ ಹಂಚಿಕೆ, ಆಲಮಟ್ಟಿ ಅಣೆಕಟ್ಟಿನ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಳ ಹಾಗೂ ಬಳಕೆ, ಕೃಷ್ಣಾ ಕಣಿವೆಯ ರೈತರ ನೀರಾವರಿ ಹಕ್ಕುಗಳು ಹಾಗೂ ಉತ್ತರ ಕರ್ನಾಟಕದ ಜನರ ನ್ಯಾಯಯುತ ಬೇಡಿಕೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಹಿರಿಯ ಹೋರಾಟಗಾರ ಎಸ್.ವಿ. ಪಾಟೀಲ ಅವರು, “ಕೃಷ್ಣಾ ಕೊಳ್ಳದ ಜನರ ಹಕ್ಕುಗಳಿಗಾಗಿ ನಿರಂತರ ಹೋರಾಟ ಮತ್ತು ಪ್ರಯತ್ನಗಳನ್ನು ಮುಂದುವರಿಸಬೇಕೆAದು ಕರೆ ನೀಡಿದರು. ಮುಂದಿನ ಒಂದು ತಿಂಗಳೊಳಗೆ ಸಮಗ್ರ ಹೋರಾಟದ ಕರಡು ಸಿದ್ಧಪಡಿಸಿ, ವಿಷಯ ಪರಿಣಿತರು ಮತ್ತು ತಂತ್ರಜ್ಞರನ್ನು ಒಳಗೊಂಡ ಕಾರ್ಯಾಗಾರವನ್ನು ಆಯೋಜಿಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಬೇಕೆಂದು” ಸಲಹೆ ನೀಡಿದರು.
ರವಿ ಪಾಟೀಲ ಅವರು ಮಾತನಾಡಿ, “ನಾವು ಯೋಜನೆಯ ಫಲಾನುಭವಿಗಳಲ್ಲ, ಯೋಜನೆಯಿಂದ ನಿರಾಶ್ರಿತರಾದವರು. ಆದ್ದರಿಂದ ನಮ್ಮ ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯವಾಗಿದೆ. ರಾಜ್ಯದ ಎಲ್ಲಾ ಸಂಬAಧಿತ ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಿ ಸ್ಥಳೀಯ ಹೋರಾಟ ಸಮಿತಿಗಳನ್ನು ರಚಿಸಬೇಕು. ಜನಪ್ರತಿನಿಧಿಗಳ ಬೆಂಬಲ ಪಡೆಯಲು ಅವರನ್ನು ಹೋರಾಟದ ಭಾಗವಾಗಿಸಬೇಕು. ಹೋರಾಟವನ್ನು ಬಲಿಷ್ಠಗೊಳಿಸಲು ವಿವಿಧ ಸಂಘ-ಸAಸ್ಥೆಗಳು ಮತ್ತು ಅಸೋಸಿಯೇಷನ್‌ಗಳಿಂದ ಆರ್ಥಿಕ ಸಹಕಾರವನ್ನು ಪಡೆಯಬೇಕು” ಎಂದು ಅವರು ಅಭಿಪ್ರಾಯಪಟ್ಟರು.
ಅದೃಶ್ಯಪ್ಪ ದೇಸಾಯಿ (ಗಲಗಲಿ) ಅವರು ಮಾತನಾಡಿ, “ಬಚಾವತ್ ಆಯೋಗದ ಶಿಫಾರಸುಗಳ ಪ್ರಕಾರ ಕರ್ನಾಟಕಕ್ಕೆ ನ್ಯಾಯಯುತ ನೀರಿನ ಹಂಚಿಕೆ ದೊರೆತಿದ್ದರೂ, ರಾಜ್ಯ ಸರ್ಕಾರಗಳು ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿವೆ. ಬ್ರಿಜೇಶ್ ಕುಮಾರ್ ನ್ಯಾಯಮಂಡಳಿಯ ವರದಿಯ ನಂತರವೂ ವಿಜಯಪುರ ಸೇರಿದಂತೆ ಕೃಷ್ಣಾ ಕೊಳ್ಳದ ಜನರು ತಮ್ಮ ಹಕ್ಕಿನ ಸುಮಾರು ೮೦ ಟಿಎಂಸಿ ನೀರಿನ ಸಂಪೂರ್ಣ ಪ್ರಯೋಜನವನ್ನು ಪಡೆಯುತ್ತಿಲ್ಲ. ತಮ್ಮ ಹಕ್ಕಿನ ನೀರಿನ ಬದಲಾಗಿ ಉಳಿದ ನೀರನ್ನು ಮಾತ್ರ ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.
ಸಭೆಯಲ್ಲಿ ಮುಂದಿನ ಹಂತದ ಹೋರಾಟದ ಕುರಿತು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ರಾಜ್ಯದ ೭ ಜಿಲ್ಲೆಗಳಲ್ಲಿ ಜನಜಾಗೃತಿ ಸಭೆಗಳನ್ನು ನಡೆಸಿ ನೈಜ ಹೋರಾಟಗಾರರನ್ನು ಗುರುತಿಸುವ ಕಾರ್ಯ ಆರಂಭಿಸಲಾಗುವುದು. ಸಂಸದರು ಹಾಗೂ ಶಾಸಕರನ್ನು ಭೇಟಿ ಮಾಡಿ ಬೆಂಬಲ ಕೋರಲಾಗುವುದು. ಅಗತ್ಯವಿದ್ದಲ್ಲಿ ರಾಷ್ಟ್ರೀಯ ಮಟ್ಟದ ನಾಯಕರಾದ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಕೃಷ್ಣಾ ಕೊಳ್ಳದ ಜನರ ಬೇಡಿಕೆಗಳನ್ನು ಮಂಡಿಸಲು ಚರ್ಚಿಸಲಾಯಿತು.
ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗುವ ಮೊದಲೇ ಹೋರಾಟವನ್ನು ತೀವ್ರಗೊಳಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಈ ನಿಟ್ಟಿನಲ್ಲಿ ಪಾದಯಾತ್ರೆ ಆಯೋಜಿಸಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವುದು, ಜನಪ್ರತಿನಿಧಿಗಳ ಮನೆಗಳ ಎದುರು ಹಂತ ಹಂತವಾಗಿ ಧರಣಿ ನಡೆಸುವುದು ಹಾಗೂ ಜನಾಂದೋಲನ ರೂಪಿಸುವ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಮಿತಿ ಹೇಳಿತು.
ಹೋರಾಟವನ್ನು ದೀರ್ಘಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಲು ಪ್ರತಿಯೊಬ್ಬ ಹೋರಾಟಗಾರರು ಹಾಗೂ ಸಂಘಟನೆಗಳು ತಮ್ಮ ವಾರ್ಷಿಕ ಆದಾಯದ ಒಂದು ಭಾಗವನ್ನು ಹೋರಾಟದ ನಿಧಿಗೆ ನೀಡುವ ಕುರಿತು ಸಹ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಕೃಷ್ಣಾ ಕೊಳ್ಳದ ನೀರು, ನೆಲ ಮತ್ತು ರೈತರ ಹಕ್ಕುಗಳಿಗಾಗಿ ಯಾವುದೇ ರಾಜಿ ಇಲ್ಲ. ಈ ಭಾಗದ ಜನರಿಗೆ ನ್ಯಾಯ ದೊರೆಯುವವರೆಗೂ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿ ನಿರಂತರವಾಗಿ ಮುಂದುವರಿಸಲಾಗುವುದು ಎಂದು ಸಭೆಯಲ್ಲಿ ಏಕಮತದಿಂದ ಘೋಷಿಸಲಾಯಿತು.
ಸಭೆಯಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರು, ಪ್ರಗತಿಪರ ಚಿಂತಕರು, ಸಾಮಾಜಿಕ ಹೋರಾಟಗಾರರು ಹಾಗೂ ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.































