Home ಜಿಲ್ಲೆ ಬೆಂಗಳೂರು ಪೌರಕಾರ್ಮಿಕರ ಜೊತೆ ಜಿಬಿಎ ಮುಖ್ಯ ಆಯುಕ್ತರಿಂದ ಚಾಯ್ ಪೀ ಚರ್ಚೆ ..

ಪೌರಕಾರ್ಮಿಕರ ಜೊತೆ ಜಿಬಿಎ ಮುಖ್ಯ ಆಯುಕ್ತರಿಂದ ಚಾಯ್ ಪೀ ಚರ್ಚೆ ..

ಬೆಂಗಳೂರು.ಮಾ೭:ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ಸುರಿಯುವ ಬ್ಲಾಕ್ ಸ್ಪಾಟ್‌ಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅಗತ್ಯವಿರುವ ಕಡೆ ಸಂಜೆ ವೇಳೆಯಲ್ಲೂ ಆಟೋ ಟಿಪ್ಪರ್‌ಗಳನ್ನು ನಿಯೋಜಿಸಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿ, ರಸ್ತೆ ಬದಿಯಲ್ಲಿ ಕಸ ಬಿಸಾಡುವವರ ಮೇಲೆ ನಿಗಾವಹಿಸಿ ದಂಡ ವಿಧಿಸುವ ಕ್ರಮ ಕೈಗೊಳ್ಳಬೇಕು. ಬ್ಲಾಕ್ ಸ್ಪಾಟ್ ಉಂಟಾಗುವ ಸ್ಥಳಗಳನ್ನು ಗುರುತಿಸಿ ಶಾಶ್ವತವಾಗಿ ನಿರ್ಮೂಲನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


ಛಲವಾದಿ ಪಾಳ್ಯದ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪೌರಕಾರ್ಮಿಕರ ಹಾಜರಾತಿ ವ್ಯವಸ್ಥೆ ಪರಿಶೀಲಿಸಿದ ಅವರು, ಕಾರ್ಮಿಕರು ಸಮಯಕ್ಕೆ ಸರಿಯಾಗಿ ಹಾಜರಾಗಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು. ರಸ್ತೆಗಳನ್ನು ಸ್ವಚ್ಛಗೊಳಿಸುವ ವೇಳೆ ತ್ಯಾಜ್ಯ ಹಾಗೂ ಎಲೆಗಳ ಜೊತೆಗೆ ಧೂಳನ್ನೂ ಸಮರ್ಪಕವಾಗಿ ಗುಡಿಸುವಂತೆ ಸಲಹೆ ನೀಡಿದರು. ಜೊತೆಗೆ ಸಮವಸ್ತ್ರ ಹಾಗೂ ಸುರಕ್ಷತಾ ಉಪಕರಣಗಳನ್ನು ಬಳಸಿಕೊಂಡು ಕೆಲಸ ಮಾಡಲು ಸೂಚಿಸಿದರು.


ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಯುವಕರಲ್ಲಿ ವಾಹನ ಚಾಲನೆ ಮಾಡಲು ಆಸಕ್ತಿ ಇರುವವರ ಪಟ್ಟಿಯನ್ನು ಸಲ್ಲಿಸುವಂತೆ ಸೂಚಿಸಿದ ಅವರು, ಅಂತಹವರಿಗೆ ಬಿಎಂಟಿಸಿ ವತಿಯಿಂದ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಪಾಲಿಕೆ ಖರೀದಿಸುವ ಯಾಂತ್ರಿಕ ಕಸ ಗುಡಿಸುವ ಯಂತ್ರಗಳನ್ನು ಪೌರಕಾರ್ಮಿಕರಿಂದಲೇ ಚಾಲನೆ ಮಾಡಿಸುವ ಯೋಜನೆಯೂ ಇದೆ ಎಂದು ಹೇಳಿದರು.


ಪೌರಕಾರ್ಮಿಕರೊಂದಿಗೆ ಚಹಾ ಸೇವನೆ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದ ಮಹೇಶ್ವರ್ ರಾವ್, ಸ್ವಚ್ಛತಾ ಕಾರ್ಯವನ್ನು ಸ್ಥಳದಲ್ಲೇ ಪರಿಶೀಲಿಸಿದರು.

ಪೌರಕಾರ್ಮಿಕರು ಪ್ರಸ್ತುತ ಪೊರಕೆಗಳಿಂದ ರಸ್ತೆಗಳನ್ನು ಸ್ವಚ್ಛಗೊಳಿಸುತ್ತಿರುವುದರಿಂದ ಸಿಎಸ್‌ಆರ್ ಅಡಿಯಲ್ಲಿ ಯಾಂತ್ರಿಕ ಕಸ ಗುಡಿಸುವ ಎಲೆಕ್ಟ್ರಿಕ್ ಯಂತ್ರಗಳನ್ನು ಖರೀದಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಶಿರಸಿ ರಸ್ತೆಯ ಮೇಲ್ಸೇತುವೆ ಕೆಳಭಾಗದಲ್ಲಿನ ಪಾದಚಾರಿ ಮಾರ್ಗ ಮತ್ತು ಬಸ್ ತಂಗುದಾಣದ ಬಳಿ ತ್ಯಾಜ್ಯ ಹಾಗೂ ಭಗ್ನಾವಶೇಷಗಳು ಕಂಡುಬಂದ ಹಿನ್ನೆಲೆಯಲ್ಲಿ ಕೂಡಲೇ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಸೂಚಿಸಿದರು. ಪ್ರಸ್ತುತ ಸ್ಥಿತಿ ಮತ್ತು ಸ್ವಚ್ಛಗೊಳಿಸಿದ ಬಳಿಕದ ಛಾಯಾಚಿತ್ರಗಳೊಂದಿಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ಬಿನ್ನಿ ಮಿಲ್ ರಸ್ತೆಯ ಚರಂಡಿ ಹೂಳೆತ್ತುವ ಹಾಗೂ ಪಾದಚಾರಿ ಮಾರ್ಗ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಪಾದಚಾರಿ ಮಾರ್ಗದಲ್ಲಿರುವ ಮರಗಳ ಸುತ್ತ ಪಾತಿಗಳನ್ನು ನಿರ್ಮಿಸಲು ಕೂಡ ನಿರ್ದೇಶನ ನೀಡಿದರು.


ಚಾಮರಾಜಪೇಟೆಯ ರಾಯಪುರಂ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ದುರಸ್ತಿಯಾಗಿದ್ದ ನೀರಿನ ಟ್ಯಾಪ್ ತಕ್ಷಣ ಸರಿಪಡಿಸುವಂತೆ ಸೂಚಿಸಿದರು. ಜೊತೆಗೆ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು.


ಬಿನ್ನಿ ಮಿಲ್ ಸಮೀಪದ ದ್ವಿತೀಯ ಹಂತದ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಪರಿಶೀಲಿಸಿ ಘಟಕವನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಚಾಮರಾಜಪೇಟೆಯ ೭ ವಾರ್ಡ್‌ಗಳು ಹಾಗೂ ಗಾಂಧಿನಗರದ ೩ ವಾರ್ಡ್‌ಗಳಿಂದ ಪ್ರತಿದಿನ ಸುಮಾರು ೨೨೦ ಟನ್ ತ್ಯಾಜ್ಯವನ್ನು ೨೪೨ ಆಟೋ ಟಿಪ್ಪರ್‌ಗಳ ಮೂಲಕ ಇಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಘಟಕದಲ್ಲಿಯೇ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.


ಮನೆ-ಮನೆಗೆ ಕಸ ಸಂಗ್ರಹಿಸುವ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಹೇಳಿದ ಅವರು, ಮೊದಲ ಹಂತವಾಗಿ ಚಾಮರಾಜಪೇಟೆಯ ಒಂದು ವಾರ್ಡ್ ಆಯ್ಕೆ ಮಾಡಿ ಲಿಂಕ್ ವರ್ಕರ್‌ಗಳ ಮೂಲಕ ನಾಗರಿಕರಲ್ಲಿ ತ್ಯಾಜ್ಯ ವಿಂಗಡಣೆ ಕುರಿತು ಜಾಗೃತಿ ಮೂಡಿಸಲು ಸೂಚಿಸಿದರು.


ಇದಲ್ಲದೆ ಟ್ಯಾಂಕ್ ಬಂಡ್ ರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ ಅವರು, ಒಟ್ಟು ೪೧೯ ಮೀಟರ್ ರಸ್ತೆಯ ಅಭಿವೃದ್ಧಿ ಕಾರ್ಯವನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.


ಪರಿಶೀಲನೆಯ ವೇಳೆ ಬೆಂ.ಘ.ನಿ.ನಿ. ಸಿಇಒ ಕರೀಗೌಡ, ಸಿಒಒ ರಮಾಮಣಿ, ಕೇಂದ್ರ ನಗರ ಪಾಲಿಕೆಯ ಜಂಟಿ ಆಯುಕ್ತ ಹೇಮಂತ್ ಶರಣ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.