ಹುಕ್ಕಾ ಬಾರ್ ನಿಷೇಧಿಸಿ ಗೆಜೆಟ್ ಅಧಿಸೂಚನೆ

ಬೆಂಗಳೂರು,ಮೇ.೩೧- ರಾಜ್ಯಾದ್ಯಂತ ಹುಕ್ಕಾ ಬಾರ್ ತೆರೆಯುವುದು ಅಥವಾ ನಡೆಸುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ.


೨೧ ವರ್ಷಗಳಿಗಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್ ಮಾರಾಟ ಹಾಗೂ ಹುಕ್ಕಾ ಬಾರ್ ನಿಷೇಧಿಸುವ ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿರುವ ಬೆನ್ನಲ್ಲೇ ಸಿಗರೇಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮನ) (ಕರ್ನಾಟಕ ತಿದ್ದುಪಡಿ) ಅಧಿನಿಯಮ ೨೦೨೪ ಜಾರಿ ಮಾಡಿ ರಾಜ್ಯ ಸರ್ಕಾರ, ಗೆಜಟ್ ನೋಟಿಫಿಕೇಷನ್ ಹೊರಡಿಸಿದೆ. ಇದರೊಂದಿಗೆ ಸಾರ್ವಜನಿಕವಾಗಿ ಗುಟ್ಕಾ ತಿಂದು ಉಳಿದರೆ ಹಾಗೂ ಸಿಗರೇಟ್ ಸೇದಿದರೆ ದಂಡದ ಪ್ರಮಾನ ನಾಲ್ಕು ಪಟ್ಟು ಹೆಚ್ಚಳವಾಗಿದೆ.


ಸಿಗರೇಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮ) (ಕರ್ನಾಟಕ ತಿದ್ದುಪಡಿ) ಅಧಿನಿಯಮ, ೨೦೨೪ಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.


ಈ ಮಸೂದೆ ಫೆಬ್ರವರಿ ೨೦೨೪ರಂದು ಉಭಯ ಸದನಗಳಲ್ಲಿ ಅಂಗೀಕಾರವಾಗಿತ್ತು. ೨೦೦೩ರ ಕೇಂದ್ರ ಕಾಯ್ದೆಯನ್ನು ಕರ್ನಾಟಕ ರಾಜ್ಯಕ್ಕೆ ಅನ್ವಯಿಸಿ ತಿದ್ದುಪಡಿ ಮಾಡಲಾಗಿದೆ. ಕೇಂದ್ರ ಅಧಿನಿಯಮಕ್ಕೆ ತಿದ್ದುಪಡಿ ತಂದಿರುವುದರಿಂದ ಈ ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಳುಹಿಸಿ ಕೊಡಲಾಗಿತ್ತು.


ರಾಷ್ಟ್ರಪತಿಗಳ ಅಂಕಿತದ ನಂತರ ಇದೀಗ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಇನ್ನು ಮುಂದೆ ರಾಜ್ಯದಲ್ಲಿ ೨೧ ವಯೋಮಿತಿ ಒಳಗಿನ ವ್ಯಕ್ತಿಗಳಿಗೆ ಸಿಗರೇಟು, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ಪ್ರಸ್ತುತ ತಂಬಾಕು ಉತ್ಪನ್ನಗಳನ್ನು ಖರೀದಿಸುವುದಕ್ಕೆ ಕನಿಷ್ಠ ವಯೋಮಾನ ೧೮ ಇದೆ. ಈಗ ಆ ವಯೋಮಾನವನ್ನು ೨೧ ವರ್ಷಕ್ಕೆ ಏರಿಕೆ ಮಾಡಲಾಗಿದೆ. ಯಾವುದೇ ಶಿಕ್ಷಣ ಸಂಸ್ಥೆಯ ೧೦೦ ಮೀಟರ್ ಸುತ್ತಳತೆಯೊಳಗಿನ ಪ್ರದೇಶದೊಳಗೆ, ಬಿಡಿಯಾಗಿ ಅಥವಾ ಒಂಟಿ ಕಡ್ಡಿಯಾಗಿ ಸಿಗರೇಟ್ ಮಾರಾಟವನ್ನು ನಿಷೇಧಿಸಲಾಗಿದೆ.


ಸಿಗರೇಟು ಅಥವಾ ಯಾವುದೇ ಇತರ ತಂಬಾಕು ಉತ್ಪನ್ನದ ಮಾರಾಟ ಮಾಡುವಂತಿಲ್ಲ. ಅಥವಾ ಮಾರಾಟಕ್ಕೆ ಅನುಮತಿ ನೀಡುವಂತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಉತ್ಪನ್ನಗಳ ಬಳಕೆಯನ್ನು ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಉತ್ಪನ್ನವನ್ನು ಬಳಸುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಮತ್ತು ತಂಬಾಕು ಉಗಿಯುವಂತಿಲ್ಲ.


ಹುಕ್ಕಾ ಬಾರ್ ನಿಷೇಧ:


ಈ ತಿದ್ದುಪಡಿ ಕಾಯ್ದೆ ಪ್ರಕಾರ ಹುಕ್ಕಾ ಬಾರ್ ತೆರೆಯುವುದು ಅಥವಾ ನಡೆಸುವುದಕ್ಕೆ ನಿಷೇಧಿಸಲಾಗಿದೆ. ಯಾರೇ ವ್ಯಕ್ತಿಯು ತಾನಾಗಿಯಾಗಲಿ ಅಥವಾ ಯಾರೇ ಇತರ ವ್ಯಕ್ತಿಯ ಪರವಾಗಿಯಾಗಲಿ ಉಪಹಾರ ಗೃಹ ಅಥವಾ ಪಬ್ ಅಥವಾ ಬಾರು ಅಥವಾ ರೆಸ್ಟೋರೆಂಟ್ ಒಳಗೊಂಡಂತೆ ಯಾವುದೇ ಸ್ಥಳದಲ್ಲಿ ಹುಕ್ಕಾ ಬಾರನ್ನು ತೆರೆಯುವಂತಿಲ್ಲ ಹಾಗೂ ನಡೆಸುವಂತಿಲ್ಲ.


೩ ವರ್ಷದವರೆಗೆ ಜೈಲು:


ಸಾರ್ವಜನಿಕ ಸ್ಥಳದಲ್ಲಿ ಗುಟ್ಕಾ ಉಗುಳುವುದು, ಸಿಗರೇಟು ಸೇದಿ ನಿಯಮ ಉಲ್ಲಂಘಿಸಿದವರಿಗೆ ದಂಡದ ಪ್ರಮಾಣವನ್ನು ೨೦೦ ರೂ.ದಿಂದ ೧,೦೦೦ ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು ಹುಕ್ಕಾ ಬಾರ್ ನಡೆಸಿ ನಿಯಮ ಉಲ್ಲಂಘಿಸುವವರಿಗೆ ೧ ವರ್ಷದಿಂದ ೩ ವರ್ಷ ಜೈಲು ಹಾಗೂ ೫೦ ಸಾವಿರ ರೂಗಳಿಂದ ೧ ಲಕ್ಷ ರೂಗಳವರೆಗೆ ದಂಡ ವಿಧಿಸಲಾಗುತ್ತದೆ.