ಗ್ಯಾಂಗ್ ರೇಪ್ ರೋಡ್ ಶೋ ನಡೆಸಿದ ಆರೋಪಿಗಳು ಮತ್ತೆ ಜೈಲಿಗೆ

ಹಾವೇರಿ,ಮೇ.೨೫-ಜಾಮೀನು ದೊರೆಯುತ್ತಿದ್ದಂತೆ ಜೈಲಿನಿಂದ ಹೊರಬಂದು ರೋಡ್ ಶೋ ನಡೆಸಿದ ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳು ಮತ್ತೆ ಜೈಲುಪಾಲಾಗಿದ್ದಾರೆ.


ರೋಡ್ ಶೋ ನಡೆಸಿದ್ದ ೭ ಮಂದಿ ಅತ್ಯಾಚಾರ ಆರೋಪಿಗಳಿಗೆ ಜೂನ್ ೨ ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.


ಆರೋಪಿಗಳಿಗೆ ತಾಲೂಕು ಮ್ಯಾಜಿಸ್ಟ್ರೇಟ್ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನ ಮತ್ತೆ ಹಾವೇರಿ ಸಬ್ ಜೈಲಿಗೆ ಹಾಕಲಾಗಿದೆ. ಈ ಆರೋಪಿಗಳು ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ೧೭ ತಿಂಗಳು ಜೈಲಿನಲ್ಲಿದ್ದರು. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಜಾಮೀನು ಪಡೆದು ಹೊರ ಬಂದಿದ್ದರು.


ಜಾಮೀನು ಸಿಕ್ಕಿದ್ದೇ ತಡ ಆರೋಪಿಗಳು ೩೦ ಕಿ.ಮೀ ರೋಡ್ ಶೋ ನಡೆಸಿದ್ದರು. ರೋಡ್ ಶೋ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.


ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮತ್ತೆ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅಲ್ಲದೆ ಆರೋಪಿಗಳ ಜಾಮೀನು ರದ್ದು ಪಡಿಸುವಂತೆ ತನಿಖಾಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ.
ಆರೋಪಿಗಳನ್ನು ರೌಡಿಪಟ್ಟಿಗೆ ಸೇರಿಸಿ ಹೊಸ ಕೇಸ್ ಸಹ ಪೊಲೀಸರು ದಾಖಲಿಸಿದ್ದಾರೆ. ಜೂನ್ ೨ ರವರೆಗೆ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿರಲಿದ್ದು, ನಂತರ ನ್ಯಾಯಾಲಯದ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.