ಕಲಬುರಗಿ:ಅ.3: ಸತ್ಯ ಮತ್ತು ಅಹಿಂಸೆಯ ಮೂಲಕ ಸ್ವಾತಂತ್ರ್ಯ ಪಡೆದುಕೊಳ್ಳಲು ಸಾಧ್ಯ ಎಂಬುದು ಗಾಂಧೀಜಿಯವರ ಅಹಿಂಸಾ ಚಳುವಳಿಯಿಂದ ಇಡೀ ಪ್ರಪಂಚಕ್ಕೆ ತಿಳಿದಿದೆ. ಆದರಿಂದ ಗಾಂಧಿ ಅವರ ಜೀವನ ತತ್ವಗಳನ್ನು ಅನುಸರಿಸಿದರೆ ದೇಶ ಅಗಾಧ ಪ್ರಗತಿ ಸಾಧ್ಯವಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಶಶಿಕಾಂತ ಎಸ್. ಉಡಿಕೇರಿ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯ ಸೌಧದಲ್ಲಿರುವ ಮಹಾತ್ಮ ಗಾಂಧಿ ಸಭಾಂಗಣದಲ್ಲಿ 156ನೇ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ರ್ತಿ ಅವರ ಭಾವಚಿತ್ರಗಳಿಗೆ ಪುಷ್ಪ ಸಮರ್ಪಿಸಿ ಮಾತನಾಡಿದರು.
ಹಿರಿಯ ಪತ್ರಕರ್ತ ಮನೋಜ್ ಕುಮಾರ್ ಗುದ್ದಿ ಮುಖ್ಯ ಭಾಷಣಕಾರರಾಗಿ ಮಾತನಾಡಿ ಅಹಿಂಸೆ, ಸತ್ಯಾಗ್ರಹ, ಸರಳ ಜೀವನ ಅಂಶಗಳನ್ನು ಅಳವಡಿಸಿಕೊಂಡಿದ್ದರೆ ದೇಶ ಎಂದೋ ಅಭಿವೃದ್ಧಿ ಕಾಣುತಿತ್ತು. ದುರಾದೃಷ್ಟವಶಾತ್ ಅದು ಇಂದಿಗೂ ಸಾಧ್ಯವಾಗುತ್ತಿಲ್ಲ. ಮಹಾತ್ಮ ಗಾಂಧೀಜಿಯವರು ಭಾರತದ ಅಸ್ಮಿತೆಯ ಪ್ರತೀಕ, ಪ್ರಮುಖ ಚಳುವಳಿಗಳ ಮೂಲಕ ಬ್ರಿಟಿಷರ ದುರಾಡಳಿತ, ದಬ್ಬಾಳಿಕೆ ಮತ್ತು ಶೋಷಣೆಯನ್ನು ವಿರೋಧಿಸಿ ಬ್ರಿಟಿಷರನ್ನು ಸಿಂಹಸ್ವಪ್ನದಂತೆ ಕಾಡಿದರು. ಅನಿಷ್ಟ ಪದ್ಧತಿಯಾದ ಜಾತಿ ವ್ಯವಸ್ಥೆ ಯನ್ನು ಗಾಂಧೀಜಿ ಕಠೋರವಾಗಿ ವಿರೋಧಿಸಿದರು ಎಂದರು.
ಕಾರ್ಯಕ್ರಮದಲ್ಲಿ ಕುಲಸಚಿವ ಪೆÇ್ರ. ರಮೇಶ ಲಂಡನಕರ್, ಮೌಲ್ಯಮಾಪನ ಕುಲಸಚಿವ ಡಾ.ಎನ್.ಜಿ ಕಣ್ಣೂರು, ವಿತ್ತಾಧಿಕಾರಿ ಶ್ರೀಮತಿ ಜಯಾಂಬಿಕಾ, ಶಿಕ್ಷಣ ನಿಕಾಯದ ಡೀನ್ ಪ್ರೊ. ಹೂವಿನಬಾವಿ ಬಾಬಣ್ಣ, ಕಲಾ ನಿಕಾಯದ ಡೀನ್ ಪ್ರೊ. ಅಬ್ದುಲ್ ರಬ್ ಉಸ್ತಾದ, ಕಾನೂನು ನಿಕಾಯದ ಡೀನ್ ಪ್ರೊ. ದೇವಿದಾಸ ಮಾಲೆ, ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ ಸದಸ್ಯರು, ವಿವಿಧ ನಿಕಾಯಗಳ ಡೀನರು, ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಸಹಾಯಕ ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಗಾಂಧಿ ಜಯಂತಿ ಅಂಗವಾಗಿ ಆಡಳಿತ ಮತ್ತು ಪರೀಕ್ಷಾ ವಿಭಾಗಗಳ ಆವರಣದಲ್ಲಿ ಶ್ರಮದಾನ ಹಾಗೂ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ದೈಹಿಕ ಶಿಕ್ಷಣ ವಿಭಾಗದ ಡಾ. ಹಣಮಂತ ಜಂಗೆ ಸ್ವಾಗತಿಸಿದರು. ಸಂಗೀತ ವಿಭಾಗದ ಉಪನ್ಯಾಸಕರು ಪ್ರಾರ್ಥನಾ ಗೀತೆ ಹಾಗೂ ಗಾಂಧಿ ಭಜನ ಹಾಡಿದರು. ವಿಶ್ವವಿದ್ಯಾಲಯ ಪ್ರೌಢಶಾಲೆಯ ಮುಖೋಪಾಧ್ಯಾಯ ಸೂರ್ಯಕಾಂತ ಅಮರೆ ವಂದಿಸಿದರು. ಅಣವೀರಗೌಡ ಬಿರಾದಾರ ಕಾರ್ಯಕ್ರಮ ನಿರ್ವಹಿಸಿದರು.























