ಶರಣ ಸಾಹಿತ್ಯಕ್ಕೆ ಗಜೇಶ ಮಸಣಯ್ಯನವರ ಕೊಡುಗೆ ಅಪಾರ: ಮುಡುಬಿ ಗುಂಡೇರಾವ

ಕಲಬುರಗಿ: ಜ.6: ಶರಣ ಪರಂಪರೆಗೆ ಮತ್ತು ವಚನ ಸಾಹಿತ್ಯಕ್ಕೆ ಮುನ್ನಳ್ಳಿ ಗ್ರಾಮದ ಗಜೇಶ ಮಸಣಯ್ಯನವರ ಕೊಡುಗೆ ಅಪಾರವಾಗಿದೆ ಎಂದು ಸಂಶೋಧಕ ಮುಡುಬಿ ಗುಂಡೇರಾವ ಅಭಿಮತವ್ಯಕ್ತಪಡಿಸಿದರು.
ಅವರು ಜಿಲ್ಲೆಯ ಮುನ್ನಳ್ಳಿ ಗ್ರಾಮದ ಗಜೇಶ ಮಸಣಯ್ಯ ದೇವಾಲಯದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ ಹಮ್ಮಿಕೊಂಡ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ -47 ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಪ್ರಾಚೀನ ಕಾಲದಿಂದಲೂ ಆಳಂದ ತಾಲೂಕಿನ ಹಲವಾರು ಗ್ರಾಮಗಳು ವೈಭವಯುತವಾಗಿ ಮರೆದಿವೆ. ಆಳಂದ ಪಟ್ಟಣವು ಕಲ್ಯಾಣ ಚಾಲುಕ್ಯರ ಕಾಲದ ಸಾವಿರ ಹಳ್ಳಿಗಳಿಗೆ ರಾಜಧಾನಿಯಾಗಿತ್ತು. ಹೊಡಲ, ಬೋಧನ, ನಿಂಬರಗಾ, ನರೋಣಾ, ಲಾಡ ಚಿಂಚೋಳಿ, ಮಾಡ್ಯಾಳ, ತಡಕಲ್, ಬೆಳಂಬಗಿ ಮುಂತಾದ ಗ್ರಾಮಗಳು ಪ್ರಸಿದ್ದಿ ಪಡೆದಿದ್ದವು. 12ನೇ ಶತಮಾನದಲ್ಲಿ ಆಳಂದ ಪುಣ್ಯ ಭೂಮಿಯು ವಚನ ಸಾಹಿತ್ಯಕ್ಕೂ ಬಹುದೊಡ್ಡ ಕೊಡುಗೆ ನೀಡಿದೆ. ಆಳಂದ ಪಟ್ಟಣದ ಏಕಾಂತ ರಾಮಯ್ಯ, ತಾಲೂಕಿನ ಮುನ್ನಳ್ಳಿಯ ಗಜೇಶ ಮಸಣಯ್ಯನವರು ವಚನ ಚಳುವಳಿಯಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾರೆ. ಭಕ್ತಿ ಬಂಢಾರಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಅನುಭವ ಮಂಟಪದಲ್ಲಿ ಗಜೇಶ ಮಸಣಯ್ಯನವರು ಪಾಲ್ಗೊಂಡು ಅನೇಕ ವಚನಗಳನ್ನು ರಚಿಸುವ ಸಾಮಾಜಿಕ ಕ್ರಾಂತಿಯುಂಟು ಮಾಡಿದ್ದಾರೆ.
ಬಳಗದ ಅಧ್ಯಕ್ಷ ಎಚ್. ಬಿ ಪಾಟೀಲ ಮಾತನಾಡಿ ನಮ್ಮ ಬಳಗದವತಿಯಿಂದ ಕಳೆದ ಒಂದುವರೆ ವರ್ಷದಿಂದ ಐತಿಹಾಸಿಕ ಜಾಗೃತಿ ಅಭಿಯಾನ ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದೇವೆ. ಇಂದಿನ ಪೀಳಿಗೆಗೆ ಐತಿಹಾಸಿಕ ಸ್ಮಾರಕಗಳು, ಶರಣರ ಪರಂಪರೆ ಮತ್ತು ವಚನ ಚಳುವಳಿ ತಿಳಿಸಿಕೊಡುವ ಕೊಡುವ ಮೂಲಕ ಸಮಾಜದಲ್ಲಿ ವೈಚಾರಿಕ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ ಮಾತನಾಡಿ ನಮ್ಮ ಜಿಲ್ಲೆಯ ಐತಿಹಾಸಿಕ ತಾಣಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ನಮ್ಮ ಮುನ್ನಳ್ಳಿ ಮತ್ತು ತಾಲೂಕಿನ ಇತಿಹಾಸವನ್ನು ಹೆಚ್ಚಿನ ಪ್ರಮಾಣದಲ್ಲಿ ತಿಳಿಸಿಕೊಡುವ ಅಭಿಯಾನ ನಡೆಯಲಿ ಎಂದರು.

ದೇವಾಲಯ ಸಮಿತಿ ಅಧ್ಯಕ್ಷ ಶಿವಪೂಜಪ್ಪ ಪಾಟೀಲ ಮಾತನಾಡಿ ಧಾರ್ಮಿಕ ಮತ್ತು ಆಧ್ಯಾತ್ಮ ಕ್ಷೇತ್ರಗಳ ಪರಿಚಯ ಮಾಡಿಕೊಡುವ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸುವುದಾಗಿ ತಿಳಿಸಿದರು. ಶಂಭುಲಿಂಗಯ್ಯ ಸ್ವಾಮಿ ಹಿರೇಮಠ, ಪತ್ರಕರ್ತ ಡಿಎಂ ಪಾಟೀಲ ಮುಂತಾದವರು ಮಾತನಾಡಿದರು. ಅರ್ಚಕ ಸಿದ್ರಾಮಪ್ಪ ಶೇಗಜಿ, ರಾಚಣ್ಣ ಪಟ್ನೆ, ಸಿದ್ದು ದೇವಶೇಟ್ಟಿ, ಶಿವಶರಣಪ್ಪ ವಾಲಿ, ಮಲ್ಲೇಶಪ್ಪ ಕೋಡ್ಲಿ, ಗುರಣ್ಣ ಜಾನೆ, ಗುಂಡೇರಾವ ಇಂಗಳೆ, ಖಂಡಪ್ಪ ಪೂಜಾರಿ, ಎಂ ಎಸ್ ಪಾಟೀಲ, ನಾಗನಾಥ ಪಾಟೀಲ, ನಿಂಗಪ್ಪ ಪೂಜಾರಿ ಮುಂತಾದವರಿದ್ದರು.

ಆಳಂದ ತಾಲೂಕಿನ ನರೋಣಾ, ಲಾಡ ಚಿಂಚೋಳಿ, ಮಾಡ್ಯಾಳ, ತಡಕಲ್, ಕರಹರಿ, ಬೆಳಂಬಗಿ, ಕಡಗಂಚಿ ಹೊಡಲ, ಬೋಧನ, ನಿಂಬರಗಾ, ಮುಂತಾದ ಗ್ರಾಮಗಳ ಸ್ಮಾರಕಗಳು ಕನ್ನಡ ನಾಡಿನ ಇತಿಹಾಸದ ಪುಟ ತೆರೆಯುತ್ತವೆ. ಆಳಂದ ಸಾಸಿರ ನಾಡಿನ ಗ್ರಾಮಗಳ ಚೆರಿತ್ರೆ ಬಹಳ ರೋಚಕವಾಗಿದೆ. ಮುನ್ನಳ್ಳಿ ಗ್ರಾಮದ ಮಹಾನ ಶರಣ ಗಜೇಶ ಮಸಣಯ್ಯನವರು ಬರೆದ ವಚನಗಳು ವೈಚಾರಿಕ ಪ್ರಜ್ಞೆಯನ್ನು ಹೆಚ್ಚಿಸುತ್ತವೆ. ಗಜೇಶ ಮಸಣಯ್ಯನವರು ಕಲ್ಯಾಣ ಕ್ರಾಂತಿಯ ನಂತರ ಮುನ್ನಳ್ಳಿಯಲ್ಲಿಯೇ ನೆಲೆ ನಿಂತು ಹಲವಾರು ಸಾಮಾಜಿಕ ಕ್ರಾಂತಿಯುಂಟು ಮಾಡಿದ್ದಾರೆ, ಅವರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನಾ ಕಾರ್ಯ ನಡೆಯಬೇಕಾಗಿದೆ’
ಮುಡುಬಿ ಗುಂಡೇರಾವ
ಸಂಶೋಧಕ- ಸಾಹಿತಿಗಳು