Home ಜಿಲ್ಲೆ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದಲ್ಲಿ ೩೫೫ನೇ ಆರಾಧನಾ ಪಂಚರಾತ್ರೋತ್ಸವಕ್ಕೆ ಭರದ ಸಿದ್ಧತೆ

ನಂಜನಗೂಡು ರಾಘವೇಂದ್ರ ಸ್ವಾಮಿ ಮಠದಲ್ಲಿ ೩೫೫ನೇ ಆರಾಧನಾ ಪಂಚರಾತ್ರೋತ್ಸವಕ್ಕೆ ಭರದ ಸಿದ್ಧತೆ

ಸಂಜೆವಾಣಿ ವಾರ್ತೆ,
ವಿಜಯಪುರ, ಆ. ೨೭: ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎಂದೇ ಖ್ಯಾತರಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ೩೫೫ನೇ ಆರಾಧನಾ ಪ್ರಯುಕ್ತ ನಂಜನಗೂಡಿನ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಆ. ೨೮ರಿಂದ ಸೆ. ೧ರವರೆಗೆ ಪಂಚರಾತ್ರೋತ್ಸವವನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸಲು ಸಿದ್ಧತೆ ಕೈಗೊಳ್ಳಲಾಗಿದೆ.
ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥರ ಆಜ್ಞಾನುಸಾರ ನಡೆಯಲಿರುವ ಉತ್ಸವದಲ್ಲಿ ಮೂರು ದಿನಗಳ ಕಾಲ ಗುರುಸಾರ್ವಭೌಮರ ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾರಾಧನೆ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಪ್ರತಿದಿನ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ವೇದ ಪಾರಾಯಣ, ಪಂಚಾಮೃತಾಭಿಷೇಕ, ಕನಕಾಭಿಷೇಕ, ಪಾದಪೂಜೆ, ಅರ್ಚನೆ, ನೈವೇದ್ಯ, ಅಲಂಕಾರ, ಮಹಾಮಂಗಳಾರತಿ, ಬ್ರಾಹ್ಮಣ ಅನ್ನಸಂತರ್ಪಣೆ, ತೀರ್ಥಪ್ರಸಾದ, ಸಂಜೆ ಭಜನೆ, ದಾಸವಾಣಿ ದೀಪಾಲಂಕಾರ ಹಾಗೂ ಮಂಗಳಾರತಿ ಸೇರಿದಂತೆ ವಿವಿಧ ಸೇವೆಗಳು ನಡೆಯಲಿವೆ.
ಆ. ೨೮ರಂದು ಬೆಳಗ್ಗೆ ೧೦ ಗಂಟೆಗೆ ಹುಣ್ಣಿಮೆ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದ್ದು, ಸಂಜೆ ೬ ಗಂಟೆಗೆ ಧ್ವಜಾರೋಹಣ, ಧಾನ್ಯಪೂಜೆ, ಶ್ರೀಯಃ ಪ್ರಾರ್ಥನೆ ಹಾಗೂ ಮಹಾಮಂಗಳಾರತಿ ಜರುಗಲಿದೆ.
ಉತ್ತರಾರಾಧನೆ ಅಂಗವಾಗಿ ಆ. ೩೧ರಂದು ಬೆಳಗ್ಗೆ ೧೦ ಗಂಟೆಗೆ ರಾಜಬೀದಿಯಲ್ಲಿ ಗುರುಸಾರ್ವಭೌಮರ ಭಾವಚಿತ್ರದ ರಥೋತ್ಸವ ನಡೆಯಲಿದೆ. ಉತ್ಸವದ ಅಂಗವಾಗಿ ಪ್ರತಿದಿನ ಸಂಜೆ ದಾಸವಾಣಿ ಹಾಗೂ ಭಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಂಗೀತ ಸೇವೆಯ ಅಂಗವಾಗಿ ಆ. ೨೮ರಂದು ಪೂರ್ವಾರಾಧನೆಯಂದು ವಿಜಯಪುರದ ಯುವಗಾಯಕ ವಿಶಾಲ ಕಟ್ಟಿ, ಆ. ೨೯ರಂದು ಮಧ್ಯಾರಾಧನೆಯಂದು ವಿಜಯಪುರದ ವೀರೇಶ ವಾಲಿ ಕಲಾವಿದರ ತಂಡ ಹಾಗೂ ಆ. ೩೧ರಂದು ಉತ್ತರಾರಾಧನೆಯಂದು ಖ್ಯಾತ ಸಂಗೀತಗಾರ್ತಿ ಶ್ರೀಮತಿ ಗೀತಾ ಕುಲಕರ್ಣಿ ಸಂಗಡಿಗರಿAದ ಸಂಗೀತ ಸೇವೆ ನಡೆಯಲಿದೆ.
ಸೆ. ೧ರಂದು ಮಂಗಳವಾರ ಶ್ರೀ ಸುಜ್ಞಾನೇಂದ್ರತೀರ್ಥರ ಆರಾಧನೆ ಅಂಗವಾಗಿ ಅಷ್ಟೋತ್ತರ ಸಹಿತ ಫಲ ಪಂಚಾಮೃತ ಅಭಿಷೇಕ ನಡೆಯಲಿದೆ.
ಈ ಧಾರ್ಮಿಕ ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು-ಮನ-ಧನದಿಂದ ಸೇವೆ ಸಲ್ಲಿಸುವಂತೆ ಮಠದ ವಿಚಾರಣಾಕರ್ತೃ ಗೋಪಾಲ ನಾಯಕ ಹಾಗೂ ವ್ಯವಸ್ಥಾಪಕ ರವಿ ಆಚಾರ್ಯ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮಠದ ಮೊಬೈಲ್ ಸಂಖ್ಯೆ ೭೭೬೦೩೦೮೪೯೫ ಸಂಪರ್ಕಿಸಬಹುದು.