
ವಿಜಯಪುರ, ಅ.೫- ವಿಶ್ವಸಂಸ್ಥೆಯು ಗಾಂಧೀಜಿಯವರ ಅಹಿಂಸಾ ತತ್ವವನ್ನು ಗೌರವಿಸಿ, ಅವರ ಜನ್ಮದಿನವನ್ನು ಅಂತರಾಷ್ಟ್ರೀಯ ಅಹಿಂಸಾ ದಿನವೆಂದು ಘೋಷಿಸಿದೆ ಎಂದು ರೋಟರಿ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಕೆ.ಬಿ.ಎಸ್. ಬಸವರಾಜು ತಿಳಿಸಿದರು.
ಇವರು ಪಟ್ಟಣದ ರೋಟರಿ ಪ್ರಸಾದ ಭವನದ ಆವರಣದಲ್ಲಿ ಭಾರತ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೇರಾ ಯುವ ಭಾರತ್, ರೋಟರಿ ಆಂಗ್ಲ ಪ್ರೌಢಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸೇವಾ ಪಖ್ವಾಡಾ ಅಭಿಯಾನ ಹಾಗೂ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗಾಂಧೀಜಿಯವರು ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ನಾಯಕರಾಗಿದ್ದು, ಸತ್ಯ ಮತ್ತು ಅಹಿಂಸೆಯ ಹಾದಿಯಲ್ಲಿ ನಡೆದು ಭಾರತ ದೇಶದ ಸ್ವಾತಂತ್ರ್ಯ ಸಂಗ್ರಾಮದ ರೂವಾರಿ ಯಾಗಿದ್ದರು ಎಂದು ತಿಳಿಸಿದರು.
ರೋಟರಿ ಆಂಗ್ಲ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಎ.ಎಂ. ಮಂಜುಳಾ ಮಾತನಾಡಿ, ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳವಳಿಗಳಂತಹ ಮಹತ್ವದ ಆಂದೋಲನಗಳ ನೇತೃತ್ವ ಒಡ್ಡಿ ಬ್ರಿಟಿಷರ ವಿರುದ್ಧ ಅಹಿಂಸೆಯ ಮಾರ್ಗದಲ್ಲೇ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಮಹಾತ್ಮ ಗಾಂಧೀಜಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಸರ್ವಧರ್ಮ ಪ್ರಾರ್ಥನೆ, ರಾಮನಾಮ ಭಜನೆ, ಉಪನ್ಯಾಸ, ವಿದ್ಯಾರ್ಥಿಗಳಿಂದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬಗ್ಗೆ ಪರಿಚಯ, ಶಾಲಾ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ರೋಟರಿ ಶಾಲೆಯ ಸಹ ಶಿಕ್ಷಕರಾದ ಕಲಾವತಿ ಬಿ. ರಿತ್ತಿ, ಅರುಣ ಕುಮಾರಿ, ಎಂ.ವಿ. ವೆಂಕಟೇಶ್, ನರಸಿಂಹ ಕುಮಾರ್, ಆರ್. ರುಕ್ಮಿಣಿ, ಲಕ್ಷ್ಮಿ, ಆರ್. ಸೋಮಶೇಖರ್, ವಿ. ವಿಜಯ ಹಾಗೂ ಯುವಕ ಸಂಘ, ಯುವತಿ ಮಂಡಳಿಗಳ ಪದಾಧಿಕಾರಿಗಳು, ಶಾಲೆಯ ಬೋಧಕ ಮತ್ತು ಬೋಧಕೇತರ ವರ್ಗದವರು ಹಾಜರಿದ್ದರು.
























