
ಚಿತ್ತಾಪುರ;ಏ.4: ಜಂಗಮ ಸಮಾಜದ ವಿದ್ಯಾರ್ಥಿಗಳಿಗೆ ಪೂಜೆ, ಪಾಠ, ಮಂತ್ರ ಸೇರಿ 45 ದಿನಗಳ ವೈದಿಕ ಸಂಸ್ಕಾರ ಶಿಬಿರವನ್ನು ಕ್ಷೇತ್ರದ ಶಾಸಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದಾರೆ ಎಂದು ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಶಂಕರಯ್ಯ ಸ್ವಾಮಿ ಮದ್ರಿ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ತಾಲೂಕು ಜಂಗಮ ಸಮಾಜದ ವತಿಯಿಂದ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಂಗಮ ಸಮಾಜದ ಮಕ್ಕಳಿಗೆ ವೈದಿಕ ಸಂಸ್ಕಾರ ಬಿಂಬಿಸುವಂತ ಕೆಲಸ ಮಾಡಲಾಗುತ್ತಿದೆ. ಮಕ್ಕಳ ವ್ಯಕ್ತಿತ್ವ ವಿಕಾಸನದ ಜತೆಗೆ ಸಂಸ್ಕಾರ ಅಗತ್ಯವಿದೆ ಎಂದರು.
ಏ.10ರಂದು 45 ದಿನಗಳ ಕಾಲ ಬೇಸಿಗೆ ರಜೆಯಲ್ಲಿ ವೈದಿಕ ಸಂಸ್ಕಾರಗಳನ್ನು ಉಚಿತವಾಗಿ ಬೋದಿಸಲಾಗುತ್ತದೆ. ಶಿಬಿರದಲ್ಲಿ ಆಚಾರ ವಿಚಾರ, ನಡೆ ನುಡಿ, ಯೋಗ, ಧ್ಯಾನ, ವೈದಿಕ ಶಿವಪೂಜೆ
ಸೇರಿ ಅನೇಕ ವಿಷಯಗಳ ಭೋದನೆ ಮಾಡಲಾಗುತ್ತದೆ. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮದ ಜಂಗಮರು ಉಚಿತ ಊಟ, ವಸತಿಯೊಂದಿಗೆ ನಡೆಯುವ ಈ ಶಿಬಿರದಲ್ಲಿ ಭಾಗವಹಿಸುವಂತೆ ಹೇಳಿದ್ದಾರೆ. ಕಾರ್ಯಕ್ರಮವನ್ನು ಏ.10ರಂದು
ಅಕ್ಕಮಹಾದೇವಿ ಮಂದಿರದಲ್ಲಿ ಬೆಳ್ಳಿಗೆ 11ಕ್ಕೆ ಕ್ಷೇತ್ರದ ಶಾಸಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದಾರೆ. ಶಾಸಕರಾದ ಅಲ್ಲಂ ಪ್ರಭು ಪಾಟೀಲ್, ಲತಾ ಎಂ.ಪಿ ಪ್ರಕಾಶ ಸೇರಿ ರಾಜಕೀಯ ಗಣ್ಯರು, ವಿವಿಧ ಮಠಾಧೀಶರು ಸೇರಿ ಜಂಗಮ ಮತ್ತು ವೀರಶೈವ ಸಮಾಜದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ಜಂಗಮ ಸಮಾಜದ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಕೋಳಕೂರ ಮಾತನಾಡಿ, ಸಂಸ್ಕಾರ ಶಿಬಿರಗಳು ಮನುಷ್ಯನನ್ನು ಪರಿವರ್ತನೆ ಮಾಡುತ್ತವೆ. ಒಳ್ಳೆಯ ನಡುವಳಿಕೆ ರೂಪಿಸಿಕೊಳ್ಳಲು ಸಹಕಾರಿಯಾಗುತ್ತವೆ. ಶಿಬಿರದಲ್ಲಿ ಪ್ರತಿ ಭಾನುವಾರ ವಿಷೇಶ ಉಪನ್ಯಾಸವಿರುತ್ತದೆ ಎಂದರು.
ಸಮಾಜದ ಒಗ್ಗಟ್ಟು ಹಾಗೂ ಶ್ರೇಯೋಭಿವೃದ್ಧಿಗಾಗಿ ತಾಲೂಕು ಜಂಗಮ ಸಮಾಜ ರಚನೆಯಾಗಿದೆ. ಏ. 10ರಂದು ತಾಲೂಕು ಜಂಗಮ ಸಮಾಜದ ಅಧ್ಯಕ್ಷ ಶಂಕರಯ್ಯಸ್ವಾಮಿ ಮದ್ರಿ ಅವರ ನೇತೃತ್ವದಲ್ಲಿ ವಿವಿಧ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರೆವೆರಲಿದೆ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಶಿಬಿರದ ಆಯೋಜಕ ಮಂಜುನಾಥ ಶಾಸ್ತ್ರೀ, ಮುಖಂಡರಾದ ಆನಂದ ಪಾಟೀಲ್ ನರಬೋಳಿ, ಮಲ್ಲಿಕಾರ್ಜುನರೆಡ್ಡಿ ಇಜಾರ, ಬಸಯ್ಯ ಸ್ವಾಮಿ ಸಾತನೂರ, ಮಲ್ಲಯ್ಯ ಸ್ವಾಮಿ ವಾಡಿ, ಅನೀಲಕುಮಾರ ವಡ್ಡಡಗಿ, ಶಾಂತಕುಮಾರ ಹತ್ತಿ, ದೊಡ್ಡಯ್ಯ ಸ್ವಾಮಿ ಪತ್ರಿ ಕರದಾಳ, ಬಸಯ್ಯ ಸ್ವಾಮಿ ರಾವೂರ ಇದ್ದರು.




















