
ಬೆಂಗಳೂರು, ಡಿ. ೨- ಕ್ಯಾಬ್ ಚಾಲಕರಿಗೆ ಶಿಸ್ತು, ಸಂಯಮ, ಸ್ವಚ್ಛತೆ, ಸಮಯಪಾಲನೆ, ನಿಯಮಪಾಲನೆ, ವೃತ್ತಿಪರತೆಯ ಬಗ್ಗೆ ನಿದರ್ಶನ ಸಹಿತವಾಗಿ ವಿವರಿಸುವ ವಿಸ್ತ್ರತ ಕಾರ್ಯಾಗಾರ ಬೆಂಗಳೂರಿನ ಹಲಸೂರಿನಲ್ಲಿ ನಡೆಯಿತು. ಚರ್ಚೆ, ಚಿಂತನೆ, ಸಂವಾದ ರೂಪದ ಉಚಿತ ತರಬೇತಿ ಕಾರ್ಯಾಗಾರದ ಜೊತೆಗೆ ಉತ್ತಮ ಚಾಲಕರನ್ನು ಪುರಸ್ಕರಿಸಲಾಯಿತು.
ಕಾರ್ಪೋರೇಟ್ ಸಂಸ್ಥೆಗಳಿಗೆ ಕ್ಯಾಬ್ ಸೇವೆ ಒದಗಿಸುತ್ತಿರುವ ಒಮೆಗಾ ಕಂಪನಿ ಆಯೋಜಿಸಿದ್ದ ಈ ತರಬೇತಿ ಕಾರ್ಯಾಗಾರದ ನಂತರ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಕ್ಯಾಬ್ ಚಾಲಕರ ಮಕ್ಕಳಾದ ಲಿಷಿತ ಮುದ್ದುರಾಜ್ (ಎಸ್‌ಎಸ್‌ಎಲ್‌ಸಿ ೯೭%), ಡಿಂಪಲ್ ಸುರೇಶ ಮಾನೆ (ಎಸ್‌ಎಸ್‌ಎಲ್‌ಸಿ ೯೩%), ಉನ್ನತಿ ರವೀಂದ್ರ (ಎಸ್‌ಎಸ್‌ಎಲ್‌ಸಿ ೮೯%), ನಿವೇದಿತಾ ರಾಮಕೃಷ್ಣ (ಎಸ್‌ಎಸ್‌ಎಲ್‌ಸಿ ೮೦%), ಧ್ರುವ ರಮೇಶ್ (ಪಿಯುಸಿ ೮೯%), ಮ್ಯಾಥಿಯೂ (ಪಿಯುಸಿ ೯೨%), ಪೃಥ್ವಿ ರಾಜೇಶ್ (ಪಿಯುಸಿ ೮೨%), ಶ್ವೇತಾ ರಾಘಣ್ಣ (ಬಿ.ಕಾಂ. ೯೧%), ಮಹಿಮಾ ಶ್ಯಾಮ್ (ಬಿ.ಕಾಂ. ೮೯%), ಧಿಯಾ ಸುರೇಶ ಮಾನೆ (ಎಂಬಿಬಿಎಸ್ ೨ನೇ ವರ್ಷ ೭೧%) ವಿದ್ಯಾರ್ಥಿವೇತನ ಪಡೆದರು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಂತರ ಆಯ್ದ ಕ್ಯಾಬ್ ಚಾಲಕರ ಕುಟುಂಬದವರಿಗೆ ಉಚಿತವಾಗಿ ಹೊಲಿಗೆಯಂತ್ರ ವಿತರಿಸಲಾಯಿತು. ಫಲಾನುಭವಿಗಳು ಈ ಸೌಲಭ್ಯದ ಪ್ರಯೋಜನ ಪಡೆದು ಆರ್ಥಿಕವಾಗಿ ಸದೃಢವಾಗುವ ಜೊತೆಗೆ ಕುಟುಂಬ ನಿರ್ವಹಣೆಗೆ ನೆರವಾಗಲಿ ಎಂಬ ಆಶಯ ಈ ಉಚಿತ ಹೊಲಿಗೆಯಂತ್ರ ವಿತರಣಾ ಯೋಜನೆಯದ್ದು. ಮಹಿಳಾ ಸಬಲೀಕರಣಕ್ಕೆ ಅಲ್ಪ ಪ್ರಮಾಣದಲ್ಲಿ ಕೊಡುಗೆ ನೀಡುವ ಸದುದ್ಧೇಶದಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಬಸವಣ್ಣ, ರವೀಶ್, ಮಲ್ಲೇಶ್, ನಿರಂಜನ್, ಸಂತೋಷ್ ಕುಟುಂಬದವರು ಉಚಿತ ಹೊಲಿಗೆಯಂತ್ರ ಪಡೆದರು.
ಕಳೆದ ಕೆಲವು ವರ್ಷಗಳಿಂದ ಆಯ್ದ ಕ್ಯಾಬ್ ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ, ಆಯ್ದ ಕ್ಯಾಬ್ ಚಾಲಕರ ಕುಟುಂಬದವರಿಗೆ ಹೊಲಿಗೆಯಂತ್ರ ನೀಡಿದ್ದ ಒಮೆಗಾ ಸಂಸ್ಥೆ ಸಾಮಾಜಿಕ ಕಳಕಳಿಯ ಬದ್ಧತೆಯನ್ನು ತೋರಿಸುತ್ತಾ ಉದ್ಯಮ ನಡೆಸುತ್ತಿದೆ.
ಕಾರ್ಯಕ್ರಮದಲ್ಲಿ ಅನುಭವಿ ತರಬೇತುದಾರ್ತಿ ಡಾ. ಉಷಾ ಮೋಹನ್, ಹಲಸೂರು ಟ್ರಾಫಿಕ್ ಎ.ಎಸ್.ಐ ಆಗಿರುವ ಶ್ರೀನಾಥ್ ಎನ್., ಮತ್ತು ಟ್ರಾಫಿಕ್ ಪೋಲಿಸ್ ರಮೇಶ್, ಒಮೆಗಾ ಸಂಸ್ಥೆಯ ಸಿಬ್ಬಂದಿಗಳಾದ ಗಣಪತಿ, ನವೀನ, ಚೇತನ್, ಲವೇಶ, ಕಾಸಿಫ್, ರಘುರಾಜ್, ಪ್ರಜ್ವಲ್ ಹಾಜರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸದ್ದ ಎಲ್ಲಾ ಚಾಲಕರಿಗೆ ಮೊಬೈಲ್ ಹೋಲ್ಡರ್ ನೀಡಲಾಯಿತು.


























