20 ಮಕ್ಕಳಿಗೆ ಉಚಿತ ಪಿಯುಸಿ ಶಿಕ್ಷಣ

ಭಾಲ್ಕಿ:ಜ.29: ಗ್ರಾಮೀಣ ಭಾಗದ ಬಡ ಪ್ರತಿಭಾವಂತ 20 ಮಕ್ಕಳಿಗೆ ಎರಡು ವರ್ಷ ಉಚಿತ ಪಿಯುಸಿ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‍ನ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ಪಟ್ಟಣದ ಸಂಗಮೇಶ್ವರ ಪಿಯುಸಿ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ವಿದ್ಯಾರ್ಥಿಗಳ ಪರೀಕ್ಷಾ ಪ್ಯಾಡ್ ವಿತರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕಳೆದ ಎರಡ್ಮೂರು ವರ್ಷಗಳ ಹಿಂದೆ ಸಂಗಮೇಶ್ವರ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ಶಿಕ್ಷಣ ಆರಂಭಿಸಿದ್ದು, ಪ್ರತಿವರ್ಷ ಉತ್ತಮ ಫಲಿತಾಂಶ ದೊರೆಯುತ್ತಿದೆ. ಇಲ್ಲಿಯು ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಚನ್ನಬಸವೇಶ್ವರ ಗುರುಕುಲ ಮಾದರಿಯಲ್ಲಿ ಗುಣಾತ್ಮಕ ಮತ್ತು ಸಂಸ್ಕಾರಯುತ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ನುರಿತ ಅನುಭವ ಉಪನ್ಯಾಸಕರು ತಂಡವಿದೆ.

ಹಾಗಾಗಿ ಪಾಲಕರು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಕೊಳ್ಳಬೇಕು. 2026-27ನೇ ಸಾಲಿನಲ್ಲಿ ಪ್ರವೇಶ ಕಲ್ಪಿಸಲು ಎರಡು ಹಂತದಲ್ಲಿ ಸ್ಕಾಲರ್‍ಶಿಪ್ ಪ್ರವೇಶ ಏರ್ಪಡಿಸಲಾಗುತ್ತಿದ್ದು, ಮೊದಲ ಹಂತದ ಪರೀಕ್ಷೆ ಫೆ.1 ರಂದು ನಡೆಯಲಿದೆ.

ಮೊದಲ 20 ರ್ಯಾಂಕ್ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತ ಎರಡು ವರ್ಷ ಪಿಯುಸಿ ವಿಜ್ಞಾನ ಶಿಕ್ಷಣ, ಕೋಚಿಂಗ್ ಮತ್ತು ಬಸ್ ಸೌಲಭ್ಯ ಸಿಗಲಿದೆ. ಪ್ರಸ್ತುತ ಎಸ್ಸೆಸ್ಸೆಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸ್ಕಾಲರ್‍ಶಿಪ್ ಪ್ರವೇಶ ಪರೀಕ್ಷೆ ಬರೆಯಬಹುದಾಗಿದೆ ಎಂದು ತಿಳಿಸಿದರು.

ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು.

ಈ ಸಂದರ್ಭದಲ್ಲಿ ಸಂಗಮೇಶ್ವರ ಶಿಕ್ಷಣ ಸಂಸ್ಥೆ ಸ್ಥಾನಿಕ ಕಮಿಟಿ ಅಧ್ಯಕ್ಷ ಧನರಾಜ ಬಂಬುಳಗೆ, ಪ್ರಾಚಾರ್ಯರಾದ ಬಸವರಾಜ ಮೊಳಕೀರೆ
ಪ್ರವೀಣ ಹಿರೇಮಠ, ದೇವರಾಜ್ ಪ್ರೌಢ ಶಾಲೆಯ ಮುಖ್ಯಗುರು ವಿಶ್ವನಾಥ ಪಕ್ಕಾ ಸೇರಿದಂತೆ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಜರಿದ್ದರು.