ಕಲಬುರಗಿ,ನ.27-ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಬಂಗಾರ ನೀಡುವುದಾಗಿ ಹೇಳಿ ನಿವೃತ್ತ ಸರಕಾರಿ ನೌಕರ ಮತ್ತು ರಿಯಲ್ ಎಸ್ಟೇಟ್ ವ್ಯಾಪಾರಿಯೊಬ್ಬರಿಗೆ 31 ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿನ ಆದರ್ಶ ನಗರದ ಮಾರುತಿ ಕಾಳನೂರಕರ್ ಎಂಬುವವರೆ ವಂಚನೆಗೆ ಒಳಗಾಗಿದ್ದು, ಅವರು ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಮಾರುತಿ ಕಾಳನೂರಕರ್ ಅವರು ತಮ್ಮ ಮಕ್ಕಳ ಮದುವೆ ಮಾಡುವ ಉದ್ದೇಶದಿಂದ ಆಗಾಗ ಅಂತರ್ಜಾಲದಲ್ಲಿ ಬಂಗಾರದ ಬೆಲೆ ನೋಡುತ್ತಿದ್ದರು. ಈ ಸಮಯದಲ್ಲಿ ಮುಂಬೈ ಮೂಲದ ಸಾನ್ವಿ ಚವ್ಹಾಣ್ ಎಂಬುವವರ ಇವರ ಮೊಬೈಲ್‍ಗೆ ಕರೆ ಮಾಡಿ ತಾನು ಬಂಗಾರದ ಹೋಲ್‍ಸೇಲ್ ವ್ಯಾಪಾರಿಯಾಗಿದ್ದು, ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಬಂಗಾರ ಮಾರಾಟ ಮಾಡುವುದಾಗಿ ಹೇಳಿ ತನ್ನ ಬಳಿ 40 ತೊಲೆ ಬಂಗಾರವಿದ್ದು, ಅದರ ಬೆಲೆ 40 ಲಕ್ಷ ರೂ.ಆಗುತ್ತದೆ. ಅದನ್ನು 31 ಲಕ್ಷಕ್ಕೆ ನೀಡುವುದಾಗಿ ಹೇಳಿದ್ದಾರೆ. ಅವರ ಮಾತನ್ನು ನಂಬಿ ಮಾರುತಿ ಕಾಳನೂರಕರ್ ಅವರು ಸಾನ್ವಿ ಚವ್ಹಾಣ್ ಅವರ ಬ್ಯಾಂಕ್ ಖಾತೆಗೆ 31 ಲಕ್ಷ ರೂ.ಜಮಾ ಮಾಡಿದ್ದಾರೆ. ಆ ನಂತರ ಸಾನ್ವು ಚವ್ಹಾಣ್ ಅವರು ಬಂಗಾರ ನೀಡದೆ ಮತ್ತು ಹಣವು ಮರಳಿ ಕೊಡದೆ ವಂಚನೆ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.



























