
ಕಲಬುರಗಿ,ನ.17-ಮಹಾರಾಷ್ಟ್ರದ ಸೋಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲ್ಲೂಕಿನ ವಳಸಂಗಾ ಗ್ರಾಮದ ನಿವಾಸಿಯಾದ ಶೇಖ್ ಮುಲ್ಕಾ ಅವರು ಮದರ್ ಟ್ರಾನ್ಸ್‍ಪೋರ್ಟ್ ವ್ಯವಹಾರ ನಡೆಸುತ್ತಿದ್ದು, ಇವರು ಕಲಬುರಗಿ ಮಾರ್ಗವಾಗಿ ಬೆಂಗಳೂರು ಮತ್ತು ಚೆನ್ನೈ ನಗರಗಳಿಗೆ ಹೋಗುವ ತಮ್ಮ ಲಾರಿಗಳಿಗೆ ನಗರದ ಹೀರಾಪುರದ ಸಿದ್ದಸಿರಿ ಪೆಟ್ರೋಲ್ ಪಂಪ್‍ನಲ್ಲಿ ಡಿಸೆಲ್ ಹಾಕಿಸಿಕೊಂಡು ಕಳೆದ 3 ತಿಂಗಳಿಂದ ಹಣ ಪಾವತಿಸದೆ 16.56 ಲಕ್ಷ ರೂ.ವಂಚನೆ ಮಾಡಿದ್ದಾರೆ ಎಂದು ನಗರದ ಹೈಕೋರ್ಟ್ ಎದರುಗಡೆಯ ಸಿದ್ದಸಿರಿ ಪೆಟ್ರೋಲ್ ಪಂಪ್‍ಮ ಶಿವಶರಣಪ್ಪ ಮಾಲಿಪಾಟೀಲ ಅವರು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಶೇಖ್ ಮುಲ್ಕಾ ಅವರು ಕಳೆದ 2 ವರ್ಷಗಳಿಂದ ಕಲಬುರಗಿ ಮಾರ್ಗವಾಗಿ ಬೆಂಗಳೂರು ಮತ್ತು ಚೆನ್ನೈಗೆ ಹೋಗುವ ತಮ್ಮ ಲಾರಿಗಳಿಗೆ 1.9.2024 ರಿಂದ 2.7.2025ರವರೆಗೆ ಡಿಸೆಲ್ ಹಾಕಿಸಿಕೊಂಡು ಹೋಗುತ್ತಿದ್ದು, ಹಣ ಪಾವತಿಸುತ್ತ ಬಂದಿದ್ದಾರೆ. ಆದರೆ ಕಳೆದ ಮೂರು ತಿಂಗಳಿಂದ ಅವರ ಲಾರಿಗಳಿಗೆ ಹಾಕಿದ 16,56,602 ರೂ. ಹಣ ಪಾವತಿಸದೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಬಸ್ ಹತ್ತುವಾಗ ಶಿಕ್ಷಕಿಯ ಮಂಗಳಸೂತ್ರ ಕಳವು
ಕಲಬುರಗಿ,ನ.14-ಬಸ್ ಹತ್ತುವಾಗ ಶಿಕ್ಷಕಿಯೊಬ್ಬರ ವ್ಯಾನಿಟಿ ಬ್ಯಾಗ್‍ನಲ್ಲಿದ್ದ ಮೂರುವರೆ ತೊಲೆಯ ಮಂಗಳಸೂತ್ರ ಕಳವಾಗಿರುವ ಘಟನೆ ನಡೆದಿದೆ.
ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ಯಾದಗಿರಿಯ ಕಮಲಾಬಾಯಿ ರವೀಂದ್ರಕುಮಾರ ಎಂಬುವವರೆ ಬಸ್ಸಿನಲ್ಲಿ ಮಂಗಳಸೂತ್ರ ಕಳೆದುಕೊಂಡಿದ್ದು, ಈ ಸಂಬಂಧ ಅವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಕಮಲಾಬಾಯಿ ಅವರು ಯಾದಗಿರಿಯಿಂದ ಕಲಬುರಗಿ ನಗರಕ್ಕೆ ಮದುವೆ ಸಮಾರಂಭಕ್ಕೆಂದು ಆಗಮಿಸಿ ಮದುವೆ ಸಮಾರಂಭ ಮುಗಿದ ಮೇಲೆ ಮರಳಿ ಯಾದಗಿರಿಗೆ ಹೋಗಲು ಶಹಾಬಾದ ಕ್ರಾಸ್ ಹತ್ತಿರ ಬಸ್ಸಿಗಾಗಿ ಕಾಯುತ್ತ ನಿಂತಿದ್ದಾರೆ. ಈ ವೇಳೆ ಅವರು ತಮ್ಮ ಕೊರಳಲ್ಲಿದ್ದ ಮಂಗಳಸೂತ್ರವನ್ನು ವ್ಯಾನಿಟಿ ಬ್ಯಾಗಿನಲ್ಲಿ ತೆಗೆದಿರಿಸಿದ್ದು, ಇದೇ ವೇಳೆ ಕಲಬುರಗಿ ಕಡೆಯಿಂದ ರಾಯಚೂರು ಕಡೆಗೆ ಹೋಗುವ ಕೆಎಸ್‍ಆರ್‍ಟಿಸಿ ಬಸ್ ಬಂದಿದ್ದರಿಂದ ಬಸ್ ಹತ್ತಿದ್ದಾರೆ. ಬಸ್ಸಿನಲ್ಲಿ ಕುಳಿತಾಗ ನಿರ್ವಾಹಕನಿಗೆ ಆಧಾರ್ ಕಾರ್ಡ್ ತೆಗೆದುಕೊಡಲೆಂದು ವ್ಯಾನಿಟಿ ಬ್ಯಾಗ್ ಪರಿಶೀಲಸಿದ್ದಾಗ ವ್ಯಾನಿಟಿ ಬ್ಯಾಗ್‍ನಲ್ಲಿದ್ದ ಮಂಗಳಸೂತ್ರ ಕಳವಾಗಿರುವುದು ಅವರ ಗಮನಕ್ಕೆ ಬಂದಿದೆ. ಈ ಸಂಬಂಧ ಅವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಅವರು ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.
ಜೂಜಾಟ:ಐವರ ಬಂಧನ, 1.08 ಲಕ್ಷ ರೂ. ವಶ
ಕಲಬುರಗಿ,ನ.17-ನಗರದ ಆರ್.ಜಿ.ನಗರ ಕಾಲೋನಿಯಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಎಸಿಪಿ ಜೇಮ್ಸ್ ಮಿನೇಜಸ್, ಸಿಬ್ಬಂದಿಗಳಾದ ಅಶೋಕ, ನಾಗರಾಜ, ಸುನೀಲಕುಮಾರ, ಸದಾಶಿವ ಅವರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ.
ಪ್ರದೀಪ್, ಮೇಘರಾಜ, ಸುನೀಲ, ಶ್ರೀಕಾಂತ ಮತ್ತು ನಿತ್ಯಾನಂದ ಎಂಬುವವರನ್ನು ಬಂಧಿಸಿ 1.08 ಲಕ್ಷ ರೂ.ನಗದು ಹಣವನ್ನು ಜಪ್ತಿ ಮಾಡಿದ್ದಾರೆ. ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























