
ನಗರದಲ್ಲಿ ಡ್ರಗ್ಸ್ ಪ್ಯಾಕ್ಟರಿ ಪತ್ತೆ
ಬೆಂಗಳೂರು,ಡಿ.೨೮-ಮಹಾರಾಷ್ಟ್ರದ ಮಾದಕ ನಿಗ್ರಹ ಪಡೆ(ಎಎನ್ ಟಿಎಫ್) ಕೊಂಕಣ ವಿಭಾಗದ ಪೊಲೀಸರು ನಗರದ ಮೂರು ಕಡೆಗಳಲ್ಲಿ ಡ್ರಗ್ಸ್ ಫ್ಯಾಕ್ಟರಿ ಮೇಲೆ ದಾಳಿ ನಡೆಸಿ ೫೫.೮೮ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದ ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಆರ್ ಜೆ ಇವೆಂಟ್ ಹೆಸರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿರುವುದು ಪತ್ತೆಯಾಗಿರುವುದು ನಗರದ ನಾಗರೀಕರನ್ನು ಬೆಚ್ಚಿ ಬೀಳಿಸಿದೆ.
ಮುಂಬೈನಲ್ಲಿ ಇತ್ತೀಚೆಗೆ ೧.೫ ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಮಾಡಲಾಗಿತ್ತು. ಈ ವೇಳೆ ಬಂಧಿತನಾಗಿದ್ದ ಡ್ರಗ್ ಫೆಡ್ಲರ್ ಅಬ್ದುಲ್ಲಾ ಖಾದರ್ ಶೇಕ್ ವಿಚಾರಣೆ ವೇಳೆ ಬಾಯ್ಬಿಟ್ಟ ಮಾಹಿತಿ ಆಧರಿಸಿ ಬೆಳಗಾವಿ ಮೂಲದ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಎಂಬಾತನನ್ನು ಬಂಧಿಲಾಗಿತ್ತು.
ಪಾಟೀಲ್ ಮಾಹಿತಿ ಮೇರೆಗೆ ಬೆಂಗಳೂರಿನ ಮೂರು ಕಡೆ ದಾಳಿ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿದ್ದಾರೆ. ಹೊರಮಾವು, ಯರಪ್ಪನಹಳ್ಳಿ, ಕಣ್ಣೂರು ಬಳಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿರುವುದು ಪತ್ತೆಯಾಗಿದೆ.
ದಾಳಿ ವೇಳೆ ೪.೧ ಕೆಜಿ ಘನ ಎಂಡಿಎಂಎ ಮತ್ತು ೧೭ ಕೆಜಿ ದ್ರವ ಎಂಡಿಎಂಎ ಸೇರಿ ೫೫.೮೮ ಕೋಟಿ ರೂ. ಮೌಲ್ಯದ ಒಟ್ಟು ೨೧.೪ ಕೆಜಿ ಡ್ರಗ್ಸ್‌ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜಸ್ಥಾನ ಮೂಲದ ಸೂರಜ್ ರಮೇಶ್ ಯಾದವ್, ಮಲ್ಖಾನ್ ರಾಮಲಾಲ್ ಬಿಷ್ಣೋಯ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಈ ಫ್ಯಾಕ್ಟರಿಗಳಿಂದ ದೇಶದ ಅನೇಕ ರಾಜ್ಯಗಳಿಗೆ ಡ್ರಗ್ಸ್ ಸರಬರಾಜು ಶಂಕೆ ವ್ಯಕ್ತವಾಗಿದ್ದು, ಮಹಾರಾಷ್ಟ್ರ ಪೊಲೀಸರು ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ರಾಜಸ್ಥಾನ ಮೂಲದ ಕಿಂಗ್‌ಪಿನ್‌ಗಳು ನಗರದಲ್ಲಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿದ್ದು, ಯೋಗಿರಾಜ್ ಕುಮಾರ್ ಮತ್ತು ನಯನ್ ಪವರ್ ಇದರ ಪ್ರಮುಖ ರೂವಾರಿಗಳಾಗಿದ್ದಾರೆ.
ಕರ್ನಾಟಕ ಮಾತ್ರವಲ್ಲದೆ ದೇಶದ ಹಲವೆಡೆ ಇವರು ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಉಳಿದ ಆರೋಪಿಗಳಿಗೂ ಮಹಾರಾಷ್ಟ್ರ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಎಲ್ಲೆಲ್ಲಿ ಡ್ರಗ್ಸ್ ಫ್ಯಾಕ್ಟರಿ
- ಬಾಗಲೂರು ಪೊಲೀಸ್ ಠಾಣೆ ಮಿತಿಯೊಳಗಿನ ಸ್ಪಂದನ ಲೇಔಟ್ ಕಾಲೋನಿ
- ಕೊತ್ತನೂರು ಪೊಲೀಸ್ ಠಾಣೆ ಮಿತಿಯೊಳಗಿನ ಎನ್.ಜಿ. ಗೋಲ್ಲಹಳ್ಳಿ ಪ್ರದೇಶದಲ್ಲಿ ಆರ್.ಜೆ. ಈವೆಂಟ್ ಎಂಬ ಹೆಸರಿನ ಕಾರ್ಖಾನೆ
- ಅವಲಹಳ್ಳಿ ಪೊಲೀಸ್ ಠಾಣೆ ಮಿತಿಯೊಳಗಿನ ಯರಪ್ಪನಹಳ್ಳಿ ಮನೆ




























