ಅಪಘಾತ ಮೃತರ ಕುಟುಂಬಕ್ಕೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಸಾಂತ್ವನ

ಕರಜಗಿ:ಡಿ.14:ಬಸ್ ಹಾಗೂ ಜೀಪ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಅಫಜಲಪೂರ ತಾಲೂಕಿನ ತೆಲ್ಲೂಣಗಿ ಗ್ರಾಮದ ಹಿರಿಯರಾದ ದಿ. ಶ್ರೀ ಚಂದ್ರಕಾಂತ ಶಿವರಾಯ ಚಿತ್ಪುರ ಹಾಗೂ ದಿ. ಶ್ರೀಮತಿ ಸುಲೋಚನಾ ಚಂದ್ರಕಾಂತ ಚಿತ್ಪುರ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಈ ದುರ್ಘಟನೆಯಿಂದ ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ.

ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಅವರು ತೆಲ್ಲೂಣಗಿ ಗ್ರಾಮಕ್ಕೆ ಭೇಟಿ ನೀಡಿ ಮೃತರ ನಿವಾಸಗಳಿಗೆ ತೆರಳಿ ದುಃಖತಪ್ತ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿ ಮಾತನಾಡಿದ ಅವರು, “ಈ ದುಃಖದ ಸಂದರ್ಭದಲ್ಲಿ ನೀವು ಒಬ್ಬರಲ್ಲ, ನಿಮ್ಮ ಜೊತೆ ನಾವೆಲ್ಲ ಇದ್ದೇವೆ. ಧೃತಿಗೆಡಬೇಡಿ ಎಂದು ಭರವಸೆ ನೀಡಿದರು.

ಅಪಘಾತದಲ್ಲಿ ಮೃತಪಟ್ಟ ಜೀಪ್ ಚಾಲಕರಾದ ದಿ. ಶ್ರೀ ಮಿಟ್ಟುಸಾಬ್ ಪಟೇಲ್ ಅವರ ಮನೆಗೂ ಭೇಟಿ ನೀಡಿದ ಮಾಜಿ ಸಚಿವರು, ಅವರ ಕುಟುಂಬಸ್ಥರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು. ಈ ಘಟನೆ ಅತ್ಯಂತ ನೋವುಂಟುಮಾಡಿದ ಘಟನೆ ಆಗಿದ್ದು, ಮೃತರ ಕುಟುಂಬಗಳಿಗೆ ಸರ್ಕಾರದಿಂದ ದೊರಕಬೇಕಾದ ಧನಸಹಾಯ ಹಾಗೂ ಪರಿಹಾರವನ್ನು ಶೀಘ್ರವಾಗಿ ಒದಗಿಸುವಂತೆ ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು.

ಅಪಘಾತದಲ್ಲಿ ಮೃತಪಟ್ಟ ಎಲ್ಲರ ಆತ್ಮಗಳಿಗೆ ಶಾಂತಿ ಸಿಗಲಿ, ಕುಟುಂಬಸ್ಥರು ಈ ಅಘಾತದ ದುಃಖವನ್ನು ತಾಳುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಜಮೀಲ್ ಗೌಂಡಿ, ಪ್ರಶಾಂತ ಮ್ಯಾಕೇರಿ ಸೇರಿದಂತೆ ಅನೇಕ ಗಣ್ಯರು, ಗ್ರಾಮಸ್ಥರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.