ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೮:ಜಾನಪದ ಸಾಹಿತ್ಯವು ಸಂಸ್ಕೃತಿಯ ಮೂಲ ಬೇರು. ತಲೆ ತಲಾಂತರದಿAದ ಬಂದಿರುವ ಜೀವನದ ಪಾಠಗಳನ್ನು, ಮೌಲ್ಯಗಳನ್ನು ನಮಗೆ ನೀಡಿದ ಶ್ರೇಷ್ಠ ಸಾಹಿತ್ಯವಾಗಿ ಹೊರಹೊಮ್ಮಿರುವ ಸಾಹಿತ್ಯವೆಂದರೆ ಅದು ಜನಪದ ಸಾಹಿತ್ಯ. ಈ ಸಾಹಿತ್ಯ ನಮ್ಮ ಸಂಸ್ಕೃತಿಯ ಸೂಕ್ಷ್ಮತೆಗಳನ್ನು ಎಚ್ಚರಿಸುವುದು ಮತ್ತು ಮೌಖಿಕ ಪರಂಪರೆಯನ್ನು ಮುಂದಿನ ತಲೆಮಾರಿಗೆ ಒಯ್ಯುವ ಮೂಲಕ ಜಾನಪದ ಸಾಹಿತ್ಯದ ಅಗತ್ಯತೆ ಇಂದಿಗೂ ಕೂಡಾ ಪ್ರಸ್ತುತವಾಗಿದೆ. ಹಾಗಾಗಿಯೇ ಅದು ಎಂದಿಗೂ ಬತ್ತದ ಸಾಹಿತ್ಯವಾಗಿ ಹೊರಹೊಮ್ಮಿದೆ ಎಂದು ಹಿರಿಯ ಸಾಹಿತಿ ಡಾ. ಸಂಗಮೇಶ ಮೇತ್ರಿ ಅಭಿಪ್ರಾಯಪಟ್ಟರು.
ರವಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಸಾ. ಮ. ಹುಂಡೇಕಾರ ಹಾಗೂ ಮ. ಮ. ಹುಂಡೇಕಾರ ಅವರ ಸ್ಮರಣೆಯಲ್ಲಿ ಜರುಗಿದ ಜಾನಪದ ಸಾಹಿತ್ಯದ ವಿಶೇಷ ಚಿಂತನಾಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಪ್ರಪಂಚದಲ್ಲಿ ಕಣ್ಮರೆಯಾಗುತ್ತಿರುವ ಈ ಜಾನಪದ ಸಾಹಿತ್ಯವನ್ನು ಸಂರಕ್ಷಿಸಲು ಮತ್ತು ಸಂಸ್ಕೃತಿಯನ್ನು ಮರುಸ್ಥಾಪಿಸಲು ಅದರ ಆಳವಾದ ಅಧ್ಯಯನ ಇಂದು ಅತ್ಯಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಸವನ ಬಾಗೇವಾಡಿ ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಮಾತನಾಡಿದರು.
ಜಾನಪದ ಸಾಹಿತ್ಯದ ಪ್ರಸ್ತುತ ಅಗತ್ಯತೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ವಿಜಯಪುರ ನಗರ ಘಟಕದ ಕಸಾಪ ಅಧ್ಯಕ್ಷ ಜಗದೀಶ ಬೋಳಸೂರ ಮಾತನಾಡಿ, ಜಾನಪದ ಸಾಹಿತ್ಯ ಇಂದು ನಮ್ಮೆಲ್ಲರ ನರನಾಡಿಗಳಲ್ಲಿ ರಕ್ತಗತವಾಗಿ ನಿಂತಿದೆ. ವೈಚಾರಿಕತೆ ಹಾಗೂ ವೈಜ್ಞಾನಿಕತೆಗಳ ಮೂಲಕ ಜಾನಪದ ಸಾಹಿತ್ಯ ಗಾದೆ, ಒಗಟುಗಳ ಮೂಲಕ, ನಾಣ್ಣುಡಿಗಳ ಮೂಲಕ ಶ್ರೀಮಂತವಾದ ಹಿತವಚನಗಳನ್ನು ತನ್ನೊಡಲೊಳಗೆ ಹಿಡಿದಿಟ್ಟುಕೊಂಡ ಈ ಸಾಹಿತ್ಯಕ್ಕೆ ಎಂದಿಗೂ ಸಹ ಸಾವಿಲ್ಲ ಎಂದರು.
ಜಾನಪದ ಸಾಹಿತ್ಯದಲ್ಲಿ ಗರತಿಯ ಜೀವನ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಸಾಹಿತಿ ಕವಿತಾ ಕಲ್ಯಾಣಪ್ಪಗೋಳ ಮಾತನಾಡಿ, ಜನವಾಣಿ ಬೇರು, ಕವಿವಾಣಿ ಹೂವು ಎಂಬುದನ್ನು ಮೆಲುಕು ಹಾಕುತ್ತ, ಆಸರಿಕೆ, ಬೇಸರಿಕೆಗಳನ್ನು ಮರೆಯಲು ಪ್ರೇರಕವಾದ ಸಾಹಿತ್ಯವಾಗಿ ಹೊರಹೊಮ್ಮಿದೆ ಎಂದರು. ಹೆಣ್ಣು ಮಗಳಾಗಿ, ತಾಯಿಯಾಗಿ, ಸೊಸೆಯಾಗಿ, ಅತ್ತೆಯಾಗಿ ಗರತಿಯ ಮಹತ್ವವನ್ನು ಅತ್ಯಂತ ಮಾರ್ಮಿಕವಾಗಿ ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ವಿಜಯ ಹುಂಡೇಕಾರ, ಸುನೀಲ ಒಣರೊಟ್ಟಿ, ಮಲೀಕ ಮಮದಾಪೂರ, ವಿಜಯಲಕ್ಷ್ಮಿ ಹಳಕಟ್ಟಿ ಅವರು ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಯಶ್ರೀ ಹಿರೇಮಠ ಸ್ವಾಗತಿಸಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಪರವೀನ ಶೇಖ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಡಾ. ಆನಂದ ಕುಲಕರ್ಣಿ, ಮಹ್ಮದಗೌಸ ಹವಾಲ್ದಾರ, ಅಭಿಷೇಕ ಚಕ್ರವರ್ತಿ, ಬಿ. ಎಂ. ಅಜೂರ, ಅರ್ಜುನ ಶಿರೂರ, ಜಿ. ಎಸ್ ಬಳ್ಳೂರ, ಶ್ರೀಕಾಂತ ನಾಡಗೌಡ, ಸಿದ್ರಾಮಪ್ಪ ಜಂಗಮಶೆಟ್ಟಿ, ಸಿದ್ದು ಮಾನೆ, ಎ.ಎಂ ಹಳ್ಳೂರ, ಎಂ.ಬಿ. ಮಾಶೆಟ್ಟಿ, ಸಿದ್ದನಗೌಡ ಪಾಟೀಲ, ಎ.ವಿ ಜಹಾಗೀರದಾರ, ಎಸ್. ಆರ್. ಬೀಳಗಿ, ಶಿವಾಜಿ ಮೋರೆ, ಮಲ್ಲಿಕಾರ್ಜುನ ಕೆಳಗಡೆ, ಲತಾ ಗುಂಡಿ, ಗಂಗಮ್ಮ ರಡ್ಡಿ, ಸುಖದೇವಿ ಅಲಬಾಳಮಠ, ರೇವತಿ ಬೂದಿಹಾಳ, ಶಾಂತಾ ವಿಭೂತಿ, ತೇಜಸ್ವಿನಿ ವಾಂಗಿ, ಶೋಭಾ ಹರಿಜನ ಮುಂತಾದವರು ಉಪಸ್ಥಿತರಿದ್ದರು.

























