
ವಿಜಯಪುರ, ಅ. 12:ಜಾನಪದ ಸಾಹಿತ್ಯ ನಮ್ಮ ಸಂಸ್ಕೃತಿಯ ಜೀವನಾಡಿಯಾಗಿದ್ದು, ಗ್ರಾಮೀಣ ಜನರ ಸುಖ-ದುಃಖ, ನಂಬಿಕೆ, ಆಚರಣೆ ಹಾಗೂ ಜೀವನಪ್ರೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ರಾಜ್ಯ ವಾರ್ತಾ ಮತ್ತು ಸಂಪರ್ಕ ಇಲಾಖೆಯ ನಿವೃತ್ತ ನಿರ್ದೇಶಕ ಮಲ್ಲಿಕಾರ್ಜುನ ಕೆಳಗಡೆ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಶನಿವಾರ ಜಿಲ್ಲಾ, ತಾಲೂಕು ಹಾಗೂ ನಗರ ಘಟಕಗಳ ಸಹಯೋಗದಲ್ಲಿ ನಡೆದ ವಿವಿಧ ದತ್ತಿ ಉಪನ್ಯಾಸ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾನಪದ ಹಾಡು, ಕಥೆ, ಗಾದೆಗಳು ಇಡೀ ಸಮುದಾಯದ ಆಸ್ತಿಯಾಗಿವೆ. ತಂತ್ರಜ್ಞಾನದ ಅತಿಯಾದ ಬಳಕೆ ಮತ್ತು ನಗರೀಕರಣದ ಪ್ರಭಾವದಿಂದ ಇಂದಿನ ಯುವಪೀಳಿಗೆ ಜಾನಪದ ಸಂಸ್ಕೃತಿಯಿಂದ ದೂರವಾಗುತ್ತಿದೆ. ಈ ಅಮೂಲ್ಯ ಪರಂಪರೆಯನ್ನು ಉಳಿಸಲು ಶಾಲಾ-ಕಾಲೇಜುಗಳ ಪಠ್ಯಕ್ರಮದಲ್ಲಿ ಜಾನಪದ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಡಚಣದ ಸಂಗಮೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ.ಎಸ್. ಮಾಂಗಣಗೇರಿ ಮಾತನಾಡಿ, ಜಾನಪದ ಸಾಹಿತ್ಯದ ಸಂರಕ್ಷಣೆ ಮತ್ತು ಪ್ರಸಾರಕ್ಕೆ ಆದ್ಯತೆ ನೀಡುವ ಅಗತ್ಯವಿದೆ ಎಂದರು.
‘ಜಾನಪದ ಸಾಹಿತ್ಯದ ಮಹತ್ವ’ ಕುರಿತು ಉಪನ್ಯಾಸ ನೀಡಿದ ಶಿಕ್ಷಕಿ ಹಾಗೂ ಸಾಹಿತಿ ರುದ್ರಮ್ಮ ಗಿಡ್ಡಪ್ಪಗೋಳ, ಜಾನಪದ ಸಾಹಿತ್ಯ ಜನರಿಂದ, ಜನರಿಗಾಗಿ, ಜನರಲ್ಲಿಯೇ ಹುಟ್ಟಿಕೊಂಡ ಮೌಖಿಕ ಪರಂಪರೆಯ ಜೀವಂತ ಸಾಹಿತ್ಯವಾಗಿದೆ. ಇದು ತಲೆಮಾರಿನಿಂದ ತಲೆಮಾರಿಗೆ ಹರಿದುಬಂದಿದೆ ಎಂದು ವಿವರಿಸಿದರು. ಬಿ.ಎಂ. ಶ್ರೀಕಂಠಯ್ಯ ಅವರ ‘ಜನವಾಣಿ ಬೇರು, ಕವಿವಾಣಿ ಹೂವು’ ಎಂಬ ಮಾತಿನ ಹಿನ್ನೆಲೆಯಲ್ಲಿ ಜಾನಪದ ಸಾಹಿತ್ಯದ ಮಹತ್ವವನ್ನು ಉದಾಹರಣೆಗಳೊಂದಿಗೆ ವಿವರಿಸಿದರು.
ಸಾಹಿತಿ ಜಯಶ್ರೀ ತೆಗ್ಗಿನಮಠ, ಶೆಟ್ಟವ್ವ ಹರಿಜನ, ಮಹಾನಂದ ಕಾಂಬಳೆ ಮತ್ತು ಮಲ್ಲಮ್ಮ ಹರಿಜನ ಜಾನಪದ ಗೀತೆಗಳನ್ನು ಹಾಡಿದರು. ಮಹೆತಾಬ್ ಕಾಗವಾಡ ಜಾನಪದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ದಿ. ಪೆÇ್ರ. ತಿಪ್ಪಣ್ಣ ಕರೇಪಗೋಳ ಅವರ ಆಶಯದಂತೆ ಜಾನಪದ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿರುವ ಗ್ರಾಮೀಣ ಮಹಿಳೆಗೆ ನೀಡುವ ದತ್ತಿ ಪುರಸ್ಕಾರವನ್ನು ಸಿಂದಗಿ ತಾಲೂಕಿನ ಸಲಾದಹಳ್ಳಿ ಗ್ರಾಮದ ಜಾನಪದ ಚಿಂತಕಿ ಲಕ್ಷ್ಮೀ (ಗುರುಮ) ಹಿರೇಮಠ ಅವರಿಗೆ ನೀಡಿ ಗೌರವಿಸಲಾಯಿತು.
ಶಾಂತಾ ವಿಭೂತಿ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ಸ್ವಾಗತಿಸಿದರು. ಡಾ. ಮಾಧವ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಮತಾ ಮುಳಸಾವಳಗಿ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ, ಅಲ್ಲಮಪ್ರಭು ದೇವಮಲ್ಲಿಕಾರ್ಜುನಮಠ, ಬಿ.ಎಂ. ಅಜೂರ, ಕೆ.ಎಸ್. ಹಣಮಾಣಿ, ಶ್ರೀಕಾಂತ ನಾಡಗೌಡ, ರವಿ ಕಿತ್ತೂರು, ಜಿ.ಎಸ್. ಬಳ್ಳೂರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ವಿಶ್ರಾಂತ ಮುಖ್ಯ ಅಧ್ಯಾಪಕ ಬಿ.ಕೆ. ಗೋಟ್ಯಾಳ ಪ್ರಸಾದ ಸೇವೆ ನೆರವೇರಿಸಿದರು.




















