ಜಾನಪದ ಕಲಾವಿದರ ಸಮ್ಮೇಳನ

ರಬಕವಿ-ಬನಹಟ್ಟಿ,ಡಿ17: ಕಲಾವಿದರ ಗ್ರಾಮವೆಂದೇ ಖ್ಯಾತಿ ಪಡೆದ, ಕಲಾವಿದರ ತವರೂರೆಂದು ಪ್ರಸಿದ್ಧಿ ಹೊಂದಿರುವ ನಾವಲಗಿ ಗ್ರಾಮದಲ್ಲಿ ಡಿಸೆಂಬರ್ ಕೊನೆಯ ವಾರ ಬಾಗಲಕೋಟೆ ಜಿಲ್ಲಾ ಜಾನಪದ ಕಲಾವಿದರ ಪ್ರ-ಪ್ರಥಮ ಸಮ್ಮೇಳನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ರಬಕವಿ-ಬನಹಟ್ಟಿ ಇವರ ಸಂಯುಕ್ತಾಶ್ರಯದಲ್ಲಿ ನಡೆಯುವ ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಸದಸ್ಯರು, ಸಂಗ್ಯಾ-ಬಾಳ್ಯಾ ಬೈಲಾಟದಲ್ಲಿ ಸ್ತ್ರೀ ಪಾತ್ರ ಗಂಗಾ ಪಾತ್ರದಲ್ಲಿ ಮಿಂಚಿ ಪ್ರೇಕ್ಷಕರ ಮೆಚ್ಚುಗೆ, ಪ್ರಶಂಸೆಗೆ ಪಾತ್ರರಾದ ನಾವಲಗಿ ಗ್ರಾಮದ ಹಿರಿಯ ಕಲಾವಿದ ಮಲ್ಲಪ್ಪ ಗಣಿಯವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಸಮ್ಮೇಳನದಲ್ಲಿ ಮುಂಜಾನೆ ಸರ್ವಾಧ್ಯಕ್ಷರ ಮೆರವಣಿಗೆ, ಸಮ್ಮೇಳನ ಉದ್ಘಾಟನೆ, ಗೋಷ್ಠಿ, ಕಲಾ ಪ್ರದರ್ಶನ, ಕಲಾಶ್ರೀ ಪ್ರಶಸ್ತಿ ಪ್ರದಾನ, ಸಮಾರೋಪ ಸಮಾರಂಭ ನಡೆಯಲಿದೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.


ನಾವಲಗಿ ಗ್ರಾಮದ ಗಣಿಯವರ ತೋಟದ ಮನೆಯಲ್ಲಿ ನಡೆದ ಸಭೆಯಲ್ಲಿ ಮಲ್ಲಪ್ಪ ಗಣಿ ಅವರನ್ನು ಸನ್ಮಾನಿಸಿ, ಸಮ್ಮೇಳನಕ್ಕೆ ಆಹ್ವಾನಿಸಲಾಯಿತು. ಜನಪ್ರತಿನಿಧಿಗಳನ್ನು, ಸಾಹಿತಿಗಳನ್ನು, ಜಿಲ್ಲೆಯ ಖ್ಯಾತ ಕಲಾವಿದರನ್ನು, ಸಾಧಕರನ್ನು, ವಿದ್ವಾಂಸರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗುವುದು. ಒಂದು ದಿನದ ಸಮ್ಮೇಳನವನ್ನು ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸೋಣ ಎಂದರು.


ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ, ಗ್ರಾಮ ಪಂಚಾಯತಿ, ಸಮಸ್ತ ಕಲಾವಿದರ, ವಿವಿಧ ಸಂಘ-ಸಂಸ್ಥೆಗಳ ನೆರವು-ಸಹಕಾರದೊಂದಿಗೆ ಸಡಗರ ಸಂಭ್ರಮದಿಂದ ಸಮ್ಮೇಳನವನ್ನು ನಡೆಸಲಾಗುವುದು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಖಾ ಕಾಂತಿ ಹೇಳಿದರು.


ಗ್ರಾಮ ಪಂಚಾಯತಿ ಸದಸ್ಯ ದಾನಪ್ಪ ಆಸಂಗಿ, ಜಾನಪದ ಅಕಾಡೆಮಿ ಮಾಜಿ ಸದಸ್ಯ ಹಣಮಂತ ಬರಗಾಲ, ತಾಲೂಕಾ ಕಸಾಪ ಅಧ್ಯಕ್ಷ ಮ.ಕೃ.ಮೇಗಾಡಿ, ಕಾಶೀರಾಯ ನಾಯಕ ಮಾತನಾಡಿದರು.
ಕಲಾವಿದ ಶ್ರೀಶೈಲ ಪಟ್ಟಣಶೆಟ್ಟಿ, ತೇರದಾಳ ತಾಲೂಕಾ ಕಸಾಪ ಅಧ್ಯಕ್ಷ ಗಂಗಾಧರ ಮೋಪಗಾರ, ಸಂಬಾಳ ವಾದನ ಕಲಾವಿದ ಮಲ್ಲಪ್ಪ ಹೂಗಾರ, ಖಣಿವಾದನ ಕಲಾವಿದ ಸಿದ್ದಪ್ಪ ಕಂಚು, ಬಸವರಾಜ ಗಣಿ, ಶ್ರೀಶೈಲ ಗಣಿ ಈ ಸಂದರ್ಭದಲ್ಲಿದ್ದರು.