Home ಜಿಲ್ಲೆ ಪ್ರಜಾಸೇವಾ ಆಂದೋಲನದಲ್ಲಿ ಅರ್ಜಿಗಳ ಸುರಿಮಳೆಶಾಸಕರ ನಿರ್ಗಮನಕ್ಕೆ ಅಸಮಾಧಾನ; ಸಿಜೇರಿಯನ್ ಹೆರಿಗೆ ಆರೋಪಗಳ ಬಗ್ಗೆ ತನಿಖೆಗೆ ಆಗ್ರಹ

ಪ್ರಜಾಸೇವಾ ಆಂದೋಲನದಲ್ಲಿ ಅರ್ಜಿಗಳ ಸುರಿಮಳೆಶಾಸಕರ ನಿರ್ಗಮನಕ್ಕೆ ಅಸಮಾಧಾನ; ಸಿಜೇರಿಯನ್ ಹೆರಿಗೆ ಆರೋಪಗಳ ಬಗ್ಗೆ ತನಿಖೆಗೆ ಆಗ್ರಹ

ಸಂಜೆ ವಾಣಿ ವಾರ್ತೆ |
ಸಾವಳಗಿ: ಸಾರ್ವಜನಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ವಿವಿಧ ಸರ್ಕಾರಿ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಿದ್ದ ‘ಪ್ರಜಾಸೇವಾ ಆಂದೋಲನ-ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ೯೦೦ಕ್ಕೂ ಅಧಿಕ ಅರ್ಜಿಗಳು ಸ್ವೀಕರಿಸಲ್ಪಟ್ಟವು.
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಶ್ರೀ ಚನ್ನಪ್ಪಣ್ಣ ನಿಂಗಪ್ಪ ನಿರಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಉದ್ಘಾಟಿಸಿದರು. ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಕಲ್ಪಿಸಬೇಕು ಎಂದು ಅವರು ಕರೆ ನೀಡಿದರು.
ಆದರೆ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಳಿಕ ಶಾಸಕರು ಕೆಲವೇ ನಿಮಿಷಗಳಲ್ಲಿ ವೇದಿಕೆಯಿಂದ ನಿರ್ಗಮಿಸಿದ್ದಕ್ಕೆ ಕೆಲ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಜನಪ್ರತಿನಿಧಿಯಾಗಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಸಂಬAಧಿಸಿದ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಬೇಕಿತ್ತು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬಂತು.
ಅರ್ಜಿ ಸ್ವೀಕಾರ ವ್ಯವಸ್ಥೆ ಬಗ್ಗೆ ಅಸಮಾಧಾನ
ಮೊದಲ ಬಾರಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಲವೆಡೆ ವ್ಯವಸ್ಥೆಯಲ್ಲಿನ ಗೊಂದಲ ಕಂಡುಬAದಿತು. ಅರ್ಜಿ ಸ್ವೀಕರಿಸಲು ಕೆಲವು ಇಲಾಖೆಗಳ ಸಿಬ್ಬಂದಿ ಸ್ಥಳದಲ್ಲಿ ಲಭ್ಯವಿರಲಿಲ್ಲ ಎಂಬ ಆರೋಪ ಕೇಳಿಬಂತು. ಕೆಲ ಇಲಾಖೆಗಳ ಅಧಿಕಾರಿಗಳು ತಮ್ಮ ಸಿಬ್ಬಂದಿಯನ್ನು ಕಳುಹಿಸಿ ಕಾರ್ಯಕ್ರಮದಿಂದ ದೂರ ಉಳಿದಿದ್ದರು ಎಂಬ ಮಾತುಗಳು ಕೇಳಿಬಂದವು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರಲ್ಲಿ ಬಹುತೇಕರು ತಮ್ಮ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಹಲವು ಅರ್ಜಿಗಳು ವೇದಿಕೆಗೆ ತಲುಪದೇ ಉಳಿದವು. ಇದರಿಂದ ಕಾರ್ಯಕ್ರಮವು ಕೇವಲ ಅರ್ಜಿ ಸ್ವೀಕರಿಸುವ ಕಾರ್ಯಕ್ರಮವಾಗಿ ಸೀಮಿತವಾಯಿತೇ ಎಂಬ ಪ್ರಶ್ನೆಯೂ ಸಾರ್ವಜನಿಕರಲ್ಲಿ ಮೂಡಿತು.
ವಿಶೇಷವಾಗಿ ಕಂದಾಯ ಇಲಾಖೆಗೆ ಸಂಬAಧಿಸಿದ ಅರ್ಜಿಗಳ ಸಂಖ್ಯೆ ಹೆಚ್ಚಾಗಿತ್ತು. ಸಾವಳಗಿ ಗ್ರಾಮದಲ್ಲಿ ಕಂದಾಯ ಇಲಾಖೆಗೆ ಸೇರಿದ ಜಾಗ ಒತ್ತುವರಿ ಮಾಡಿಕೊಂಡು ಅನಧಿಕೃತ ರಸ್ತೆ ನಿರ್ಮಿಸಿರುವುದು ಹಾಗೂ ಅಡಿಹುಡಿ ಮುಖ್ಯ ರಸ್ತೆಯಲ್ಲಿನ ಹಳ್ಳ ಒತ್ತುವರಿ ಮಾಡಿರುವ ಬಗ್ಗೆ ಹಲವು ಅರ್ಜಿಗಳು ಸಲ್ಲಿಕೆಯಾದವು.
ಈ ಸಮಸ್ಯೆಗಳ ಕುರಿತು ಕಳೆದ ಎರಡು ವರ್ಷಗಳಿಂದ ಜಮಖಂಡಿ ತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರಿಗೆ ಮನವಿ ಸಲ್ಲಿಸಿದ್ದರೂ ಸೂಕ್ತ ಕ್ರಮವಾಗಿಲ್ಲ ಎಂದು ಕೆಲ ಅರ್ಜಿದಾರರು ಅಸಮಾಧಾನ ವ್ಯಕ್ತಪಡಿಸಿದರು.೧೫ ದಿನಗಳಲ್ಲಿ ಅರ್ಜಿ ವಿಲೇವಾರಿಗೆ ಸೂಚನೆ
ನಂತರ ಮಾತನಾಡಿದ ಜಮಖಂಡಿ ತಹಶೀಲ್ದಾರ್ ಅನೀಲ ಬಡಿಗೇರ, ಸಾರ್ವಜನಿಕರಿಂದ ಸ್ವೀಕರಿಸಲಾದ ಪ್ರತಿಯೊಂದು ಅರ್ಜಿಯನ್ನು ಸಂಬAಧಿಸಿದ ಅಧಿಕಾರಿಗಳು ಗಂಭೀರವಾಗಿ ಪರಿಶೀಲಿಸಿ, ಅರ್ಜಿ ಸ್ವೀಕರಿಸಿದ ೧೫ ದಿನಗಳೊಳಗಾಗಿ ಅರ್ಜಿದಾರರಿಗೆ ತೃಪ್ತಿಯಾಗುವ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ೯೦೦ಕ್ಕೂ ಅಧಿಕ ಅರ್ಜಿಗಳು ಸ್ವೀಕರಿಸಲಾಗಿದ್ದು, ಸಾಧ್ಯವಾದಷ್ಟು ಅರ್ಜಿಗಳಿಗೆ ಸ್ಥಳದಲ್ಲಿಯೇ ಅಥವಾ ನಿಗದಿತ ಅವಧಿಯೊಳಗೆ ಪರಿಹಾರ ಕಲ್ಪಿಸಲು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಸಾರ್ವಜನಿಕರು ವಿಶ್ವಾಸದಿಂದ ಅರ್ಜಿ ಸಲ್ಲಿಸಿದ್ದು, ಪ್ರತಿಯೊಂದು ಅರ್ಜಿಯ ಹಿಂದಿರುವ ಸಮಸ್ಯೆಯನ್ನು ಅರಿತು ನ್ಯಾಯ ಒದಗಿಸಬೇಕು ಎಂದು ತಿಳಿಸಿದರು.
ಮುಂದಿನ ಹಂತದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಇದೇ ರೀತಿಯ ಕಾರ್ಯಕ್ರಮ ಮುಂದುವರಿಸಲಾಗುವುದು. ಎಲ್ಲ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಅರ್ಜಿಗಳಿಗೆ ಆದ್ಯತೆ ನೀಡಿ, ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು ಎಂದು ಹೇಳಿದರು.
ಸಿಜೇರಿಯನ್ ಹೆರಿಗೆ ಆರೋಪಗಳ ಬಗ್ಗೆ ತನಿಖೆಗೆ ಆಗ್ರಹ
ಇದೇ ವೇಳೆ ಸಾಮಾಜಿಕ ಕಾರ್ಯಕರ್ತರಾದ ಸಿದ್ದು ಬಂಡಿವಡ್ಡರ, ರಾಜು ಮೇಲಿನಕೇರಿ, ಉಮೇಶ ಜಾಧವ ಹಾಗೂ ವಿನೋದ ಸೂರಗೊಂಡ ಅವರು ಆರೋಗ್ಯ ಇಲಾಖೆಗೆ ಸಂಬAಧಿಸಿದ ಹಲವು ಆರೋಪಗಳನ್ನು ಪ್ರಸ್ತಾಪಿಸಿ, ಸಮಗ್ರ ತನಿಖೆಗೆ ಆಗ್ರಹಿಸಿದರು.

ಜಮಖಂಡಿ ತಾಲೂಕಿನಲ್ಲಿ ಮೆಡಿಕಲ್‌ಗಳು ಹಾಗೂ ಖಾಸಗಿ ಕ್ಲಿನಿಕ್‌ಗಳು ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ. ಕೆಲವು ಕಡೆ ಅಧಿಕೃತ ಬಿಲ್ ನೀಡುತ್ತಿಲ್ಲ ಎಂಬ ಆರೋಪಗಳಿದ್ದು, ಸಂಬAಧಿಸಿದ ಇಲಾಖೆಗಳು ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಸರ್ಕಾರಿ ಆಸ್ಪತ್ರೆಗಳಿಗೆ ಆಗಮಿಸುವ ಕೆಲವು ಗರ್ಭಿಣಿಯರಿಗೆ ಆರೋಗ್ಯದ ಬಗ್ಗೆ ಭಯದ ವಾತಾವರಣ ಸೃಷ್ಟಿಸಿ, ಸಿಜೇರಿಯನ್ ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದರು. ಕೆಲವು ಆಶಾ ಕಾರ್ಯಕರ್ತೆಯರು ಖಾಸಗಿ ಹೆರಿಗೆ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದುಕೊಂಡು ಹೋದರೆ ಕಮಿಷನ್ ಪಡೆಯುತ್ತಾರೆ ಎಂಬ ಆರೋಪವಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಇದಲ್ಲದೆ, ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಪ್ರಾಕ್ಟಿಸ್ ಮಾಡುತ್ತಿರುವ ಕೆಲವರು ಅಲೋಪತಿ ಚಿಕಿತ್ಸೆ ನೀಡುತ್ತಿದ್ದಾರೆ ಹಾಗೂ ರೋಗಿಗಳನ್ನು ತಮ್ಮ ಕ್ಲಿನಿಕ್‌ಗಳಲ್ಲಿ ದಾಖಲಿಸಿಕೊಂಡು ಹೆಚ್ಚಿನ ಮೊತ್ತದ ಬಿಲ್ ವಿಧಿಸುತ್ತಿದ್ದರೂ ಅಧಿಕೃತ ಬಿಲ್ ನೀಡುತ್ತಿಲ್ಲ ಎಂಬ ಆರೋಪಗಳನ್ನು ಅವರು ಮುಂದಿಟ್ಟರು.
ಈ ಎಲ್ಲ ಆರೋಪಗಳ ಕುರಿತು ಆರೋಗ್ಯ ಇಲಾಖೆ ಹಾಗೂ ಸಂಬAಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ, ಆರೋಪಗಳು ಸತ್ಯವಾಗಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾದೇವ ಸಂತಿವುರ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.