ಆಳಂದ: ಸೆ.13:ಮಹಾರಾಷ್ಟ್ರದ ಗೋಗಾಂವಡಿ ಕೆರೆಯ ವೆಷ್ಟವೇರ ಹಾಗೂ ಅತಿವೃಷ್ಟಿಯಿಂದ ಆಳಂದ ತಾಲೂಕಿನ ಹಳ್ಳಿಗಳಲ್ಲಿ ಭಯಾನಕ ಪ್ರವಾಹ ಸುರಿದಿದ್ದು, ಸಾವಿರಾರು ಎಕರೆ ಬೆಳೆ ನಾಶ, ಎಂಟು ಸೇತುವೆಗಳು ಕಿತ್ತುಹೋಗುವಂತೆ ಹಾನಿಯಾಗಿದೆ. ರಸ್ತೆಗಳು ಕೊಚ್ಚಿಹೋಗಿ ಸಂಪರ್ಕ ಕಡಿತಗೊಂಡಿದ್ದು, ವಿದ್ಯುತ್ ಕಂಬಗಳು ಉರಳಿ ಬಿದ್ದಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ (ಜಿಪಂ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಭಂವಾರಸಿಂಗ್ ಮೀನಾ ಅವರು ಶುಕ್ರವಾರ ತಾಲೂಕಿನ ಜಿರೋಳ್ಳಿ, ಶಖಾಪೂರ, ಖಾನಾಪೂರ ಸೇರಿದಂತೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಹಾನಿಯ ನಿಖರ ವರದಿ ಸಿದ್ಧಪಡಿಸಿ ತಕ್ಷಣ ಕ್ರಿಯಾ ಯೋಜನೆ ರೂಪಿಸಲು ಸೂಚನೆ ನೀಡಿದ್ದಾರೆ. ಅನುಮೋದನೆಗೆ ತಕ್ಕಮೇಲೆ ಕಾಮಗಾರಿ ಆರಂಭಿಸಿ, ರಸ್ತೆ-ಸೇತುವೆಗಳ ಸಂಪರ್ಕ ಮತ್ತು ವಿದ್ಯುತ್ ಸರಬರಾಜು ತಿರಿಗಿ ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಮೊನ್ನೆ ಬುಧವಾರ ಮತ್ತು ಗುರುವಾರ ಸುರಿದ ಧಾರಾಧಾರ ಮಳೆಯಿಂದ ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದ ನೀರು ಉಕ್ಕಿ ಬಂದು, ತಾಲೂಕಿನ ತಡೋಳಾ, ನಿರಗುಡಿ, ಖಾನಾಪೂರ, ಶಖಾಪೂರ ಸೇರಿದಂತೆ ರಾಜ್ಯ ಹೆದ್ದಾರಿ ವಾಗ್ದರಿ ರಿಬ್ಬನಪಚಿಟಟi ಮಾರ್ಗದವರೆಗಿನ ಹಳ್ಳದ ಭಾಗಗಳಲ್ಲಿ ಭೀತಿ ಮೂಡಿಸಿತು. ಸುಮಾರು ನೂರು ಅಡಿ ಅಗಲ ಹೊಂದಿರುವ ಹಳ್ಳದ ನೀರು ??ಕ್ಕಿ ಬಂದು, ಕಬ್ಬು, ತೊಗರಿ ಸೇರಿದಂತೆ ಸಾವಿರಾರು ಎಕರೆ ಬೆಳೆಗಳನ್ನು ನಾಶಪಡಿಸಿತು. ಖಾನಾಪೂರ-ಜಿರೋಳ್ಳಿ ಮಧ್ಯದ ಸೇತುವೆ ಸಂಪೂರ್ಣ ಕಿತ್ತುಹೋಗಿದ್ದರೆ, ಜಿರೋಳ್ಳಿ-ಶಖಾಪೂರ ಮಧ್ಯದ ಸೇತುವೆಯಲ್ಲಿ ಒಂದು ಲೇನ್ ಹಾನಿಯಾಗಿದೆ. ಇದರಿಂದ ಈ ಭಾಗದ ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ರೈತರು ತಮ್ಮ ಹೊಲಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ.
ಜಿಪಂ ಸಿಇಒ ಭಂವಾರಸಿಂಗ್ ಮೀನಾ ಅವರು ಶಖಾಪೂರ ಮತ್ತು ಜಿರೋಳ್ಳಿ ಸೇತುವೆಗಳ ಹಾನಿ ಸ್ಥಳಗಳು, ರೈತರ ಜಮೀನುಗಳು ಸೇರಿದಂತೆ ಪ್ರವಾಹ ಹಾನಿಯ ಪ್ರದೇಶಗಳನ್ನು ಪರಿಶೀಲಿಸಿದರು. ಜಿರೋಳ್ಳಿ-ಖಾನಾಪೂರ-ಚಿಂಚೋಳಿ ಬಿ ಮತ್ತು ಚಿಂಚೋಳಿ ಕೆ ಸೇತುವೆಗಳು ಕೊಚ್ಚಿಹೋಗಿ ರಸ್ತೆ ಸಂಪರ್ಕ ಕಡಿತಗೊಂಡಿರುವುದನ್ನು ಗಮನಿಸಿ, “ತುರ್ತಾಗಿ ನಾಳೆಯಿಂದಲೇ ಕಾಮಗಾರಿ ಆರಂಭಿಸಿ, ರಸ್ತೆ ಸಂಪರ್ಕ ಕಲ್ಪಿಸಬೇಕು. ಇದರಿಂದ ಗ್ರಾಮಸ್ಥರ ಜೀವನ ಚಲನೆ ಸುಗಮಗೊಳ್ಳುತ್ತದೆ” ಎಂದು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳಿಗೆ “ಬೆಳೆ ಹಾನಿಯ ನಿಖರ ವರದಿ ಸಲ್ಲಿಸಿ, ರೈತರಿಗೆ ಪರಿಹಾರ ತಲುಪಿಸುವಂತೆ ತಯಾರಿ ಮಾಡಿ” ಎಂದು ತಿಳಿಸಿದರು.
ಮೋಘಾ-ಸಾವಳೇಶ್ವರ ಗ್ರಾಮ ಸಂಪರ್ಕ ರಸ್ತೆ ಹಾಗೂ ಹಿರೋಳಿ-ಭೀಂಪೂರ ರಸ್ತೆ ಕೊಚ್ಚಿಹೋಗಿರುವುದನ್ನು ಸರಿಪಡಿಸುವಂತೂ ಸೂಚಿಸಿದರು. “ಎನ್‍ಡಿಆರ್‍ಎಫ್ ನಿಯಮದಂತೆ, ಒಂದು ಕಾಮಗಾರಿಗೆ 60 ಸಾವಿರ ರೂಪಾಯಿಗಿಂತ ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಮಂಜೂರಾತಿ ಸಿಗುತ್ತದೆ. ಹಾನಿಯ ಕ್ರಿಯಾ ಯೋಜನೆ ತಕ್ಷಣ ಸಿದ್ಧಪಡಿಸಿ, ಅನುಮೋದನೆಗೆ ಸಲ್ಲಿಸಿ” ಎಂದು ಹೇಳಿದರು. ಈಗಾಗಲೇ ಈ ಹಿಂದಿನ ಮಳೆಗೆ 18 ರಸ್ತೆಗಳು ಮತ್ತು 8 ಸೇತುವೆಗಳು ಹಾನಿಯಾಗಿವೆ. ಇತ್ತೀಚಿನ ಪ್ರವಾಹದಿಂದ 8 ಸೇತುವೆಗಳು ಹಾನಿಯಾಗಿದ್ದು, 11 ಕಡೆ ರಸ್ತೆಗಳು ಕೊಚ್ಚಿಹೋಗಿವೆ ಎಂದು ಜಿಪಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಸಂಗಮೇಶ್ ಬಿರಾದಾರ್ ಅವರು ಸಿಇಒ ಅವರಿಗೆ ಮಾಹಿತಿ ನೀಡಿದರು.























