Home ಜಿಲ್ಲೆ ಡಿಸೆಂಬರ್ ಅಂತ್ಯಕ್ಕೆ ವಿಜಯಪುರದಲ್ಲಿ ವಿಮಾನ ಹಾರಾಟ೨ ಹಂತಗಳಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನ: ಡಾ....

ಡಿಸೆಂಬರ್ ಅಂತ್ಯಕ್ಕೆ ವಿಜಯಪುರದಲ್ಲಿ ವಿಮಾನ ಹಾರಾಟ೨ ಹಂತಗಳಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನ: ಡಾ. ಎಂ.ಬಿ. ಪಾಟೀಲ

ಸಂಜೆವಾಣಿ ವಾರ್ತೆ,
ವಿಜಯಪುರ, ನ. ೨: ವಿಜಯಪುರ ವಿಮಾನ ನಿಲ್ದಾಣದಲ್ಲಿ ಡಿಸೆಂಬರ್ ಅಂತ್ಯದೊಳಗೆ ವಿಮಾನಗಳ ಹಾರಾಟ ಆರಂಭಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ೨೦೨೪ರ ಅಂತ್ಯದ ವೇಳೆಗೆ ಭೌತಿಕವಾಗಿ ಪೂರ್ಣಗೊಂಡಿದೆ. ಸರ್ವೋಚ್ಚ ನ್ಯಾಯಾಲಯದ ತಡೆಯಾಜ್ಞೆಯೂ ತೆರವಾಗಿದ್ದು, ಅಕ್ಟೋಬರ್ ೭ರಂದು ಪರಿಸರ ಇಲಾಖೆಯ ಎನ್‌ಒಸಿ ಹಾಗೂ ಡಿಜಿಸಿಎ ಲೈಸೆನ್ಸ್ ಪಡೆಯಲು ಪ್ರಗತಿ ಪೋರ್ಟಲ್‌ನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ವಿಮಾನ ಸಂಚಾರ ಆರಂಭಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
೨ ಹಂತಗಳಲ್ಲಿ ಶಾಶ್ವತ ಕುಡಿಯುವ ನೀರು
ಜಿಲ್ಲೆಯ ಎಲ್ಲ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸಮಗ್ರ ಯೋಜನೆಯನ್ನು ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯ ೧೩ ತಾಲೂಕುಗಳ ೨೧೧ ಗ್ರಾಮ ಪಂಚಾಯಿತಿಗಳು ಹಾಗೂ ೧೧ ನಗರ ಪ್ರದೇಶಗಳಿಗೆ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ಹಿನ್ನೀರನ್ನು ಶುದ್ಧೀಕರಿಸಿ ಪೂರೈಸಲು ಒಟ್ಟು ೩,೦೫೯ ಕೋಟಿ ಮೀಸಲಿಡಲಾಗಿದೆ. ಈಗಾಗಲೇ ೨,೦೯೫ ಕೋಟಿ ವೆಚ್ಚ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
೬೭೧೩ ಕೈಗಾರಿಕೆಗಳಿಗೆ ಉದ್ಯಮ ನೋಂದಣಿ
ರಾಜ್ಯದ ಆರ್ಥಿಕ ಅಭಿವೃದ್ಧಿ, ಉದ್ಯಮ ಸ್ಥಾಪನೆ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಮುಖ ಪಾತ್ರ ವಹಿಸುತ್ತಿದೆ. ನವೆಂಬರ್ ೨೦೨೫ರಿಂದ ಈವರೆಗೆ ಜಿಲ್ಲೆಯಲ್ಲಿ ೬,೭೧೩ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಆನ್‌ಲೈನ್ ಮೂಲಕ ಉದ್ಯಮ ನೋಂದಣಿ ಪ್ರಮಾಣಪತ್ರ ಪಡೆದಿವೆ. ಈ ಕೈಗಾರಿಕೆಗಳಲ್ಲಿ ೩೨.೪೩ ಕೋಟಿ ಬಂಡವಾಳ ಹೂಡಿಕೆಯಾಗಿದ್ದು, ಸುಮಾರು ೮೧ ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ ಎಂದು ಡಾ. ಎಂ.ಬಿ. ಪಾಟೀಲ ಹೇಳಿದರು.
ಮುಳವಾಡದಲ್ಲಿ ರಿಲಾಯನ್ಸ್ ಘಟಕಕ್ಕೆ ಶಂಕುಸ್ಥಾಪನೆ
ಕೆಐಎಡಿಬಿ ಕೈಗಾರಿಕಾ ಪ್ರದೇಶದ ಮುಳವಾಡ ಹಂತ-೨ರಲ್ಲಿ ರಿಲಾಯನ್ಸ್ ಕಂಜ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್, ಬೆಂಗಳೂರು ಸಂಸ್ಥೆಯಿAದ ೧,೬೨೨ ಕೋಟಿ ಯೋಜನಾ ವೆಚ್ಚದಲ್ಲಿ ಪ್ಯಾಕೇಜ್ಡ್ ಕಾರ್ಬೋನೇಟೆಡ್ ಸಾಫ್ಟ್ ಡ್ರಿಂಕ್ಸ್ ಹಾಗೂ ಪ್ಯಾಕೇಜ್ಡ್ ಡ್ರಿಂಕಿAಗ್ ವಾಟರ್ ಘಟಕ ಸ್ಥಾಪಿಸಲು ಅನುಮೋದನೆ ದೊರೆತಿದೆ. ನವೆಂಬರ್ ೧೬ರಂದು ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಇದರಿಂದ ಸುಮಾರು ೧,೨೦೦ ಮಂದಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ಸಚಿವರು ಹೇಳಿದರು.
ಡಿ.೧೩ರಂದು ಗ್ರೀನ್ ಮ್ಯಾರಥಾನ್
೨೦೨೬-೨೭ನೇ ಸಾಲಿನ ವೃಕ್ಷೋತ್ಥಾನ ಮ್ಯಾರಥಾನ್‌ನ್ನು ಡಿಸೆಂಬರ್ ೧೩ರಂದು ಆಯೋಜಿಸಲಾಗುತ್ತಿದೆ. ದೇಶದಲ್ಲಿಯೇ ಪ್ರಮುಖ ಗ್ರೀನ್ ಮ್ಯಾರಥಾನ್ ಆಗಿ ಗುರುತಿಸಿಕೊಂಡಿರುವ ಈ ಕಾರ್ಯಕ್ರಮದಲ್ಲಿ ೨೦ ಸಾವಿರಕ್ಕೂ ಹೆಚ್ಚು ಪರಿಸರ ಪ್ರೇಮಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.