Home ಜಿಲ್ಲೆ ಕಲಬುರಗಿ ಪಂಚ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಹೆಚ್ಚಿನ ಅನುಕೂಲ: ರಾಘವೇಂದ್ರ ಗುತ್ತೇದಾರ

ಪಂಚ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಹೆಚ್ಚಿನ ಅನುಕೂಲ: ರಾಘವೇಂದ್ರ ಗುತ್ತೇದಾರ

ಕಾಳಗಿ: ಫೆ.13:ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ ಹೇಳಿದರು.

ಪಟ್ಟಣದ ತಾಲೂಕು ಪಂಚಾಯತ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹ ಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳು ಜನಸಾಮಾನ್ಯರಿಗೆ ಆರ್ಥಿಕ ಭದ್ರತೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ತಿಳಿಸಿದರು. ವಿಶೇಷವಾಗಿ ಮಹಿಳೆಯರ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಈ ಯೋಜನೆಗಳು ಪರಿಣಾಮಕಾರಿ ಆಗಿವೆ ಎಂದು ಹೇಳಿದರು.

ಈ ಯೋಜನೆಗಳಿಂದ ಯಾರಾದರೂ ವಂಚಿತರಾಗಿದ್ದರೆ ಸಂಬಂಧಿತ ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ಸಮಸ್ಯೆಯನ್ನು ತಿಳಿಸಿದರೆ ತಕ್ಷಣ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.

ತಾ.ಪಂ ಇಒ ಬಸಲಿಂಗಪ್ಪ ಡಿಗ್ಗಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಗ್ರಾಮಮಟ್ಟದಲ್ಲೂ ಅರಿವು ಶಿಬಿರಗಳನ್ನು ಆಯೋಜಿಸಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವನಿಧಿ ಹಾಗೂ ಶಕ್ತಿ ಯೋಜನೆಗಳ ಸದುಪಯೋಗ ಪಡೆಯಲು ಜನರಿಗೆ ನೆರವು ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಚಿತ್ತಾಪುರ ಸಿಡಿಪಿಓ ಆರತಿ ತುಪ್ಪದ, ಚಿಂಚೋಳಿ ಸಿಡಿಪಿಓ ಸವಿತಾ, ಜೆಸ್ಕಾಂ ಎಇಇ ಮಹಮ್ಮದ ಇಲಿಯಾಸ್, ಆಹಾರ ಇಲಾಖೆ ಅಧಿಕಾರಿ ರೇವಣಸಿದ್ಧಯ್ಯ ಮಠಪತಿ, ಗ್ಯಾರೆಂಟಿ ಸಮಿತಿ ಸದಸ್ಯರಾದ ದಿನೇಶ ಮೋಘಾ, ಕಲ್ಯಾಣರಾವ ಡೊಣ್ಣೂರ, ಮೊಹಮ್ಮದ ಗುಡುಸಾಬ, ಜಗನ್ನಾಥ ಪೂಜಾರಿ, ಯಲ್ಲಾಲಿಂಗ ಬೆಂಕಿ, ಗೀತಾ ಸಿಂಗಶೆಟ್ಟಿ, ಗೋದಾವರಿ ದೊಡ್ಡಮನಿ ಇದ್ದರು.