ವರದಕ್ಷಿಣೆ ಕಿರುಕುಳ ನಿರ್ದೇಶಕ ಎಸ್.ನಾರಾಯಣ್ ಪತ್ನಿ, ಪುತ್ರನ ವಿರುದ್ಧ ಎಫ್‌ಐಆರ್

ಬೆಂಗಳೂರು,ಸೆ.೧೧-ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಖ್ಯಾತ ಚಿತ್ರ ನಿರ್ದೇಶಕ ಎಸ್.ನಾರಾಯಣ್, ಪತ್ನಿ, ಪುತ್ರನ ವಿರುದ್ಧ ಜ್ಞಾನಭಾರತಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ನಿರ್ದೇಶಕ ಎಸ್.ನಾರಾಯಣ್ ಅವರ ಎರಡನೇ ಮಗನ ಪತ್ನಿ ಪವಿತ್ರಾ ನೀಡಿರುವ. ದೂರಿನನ್ವಯ ಎಸ್.ನಾರಾಯಣ್, ಪತ್ನಿ ಭಾಗ್ಯಲಕ್ಷ್ಮಿ, ಪತಿ ಪವನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮದುವೆಯಲ್ಲಿ ವರದಕ್ಷಿಣೆ ಕೊಟ್ಟಿದ್ದರೂ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಹಲ್ಲೆ ನಡೆಸಿ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ದೂರಿನ ವಿವರ:
ನಾನು ಹಾಗೂ ಎಸ್.ನಾರಾಯಣ್ ಪುತ್ರ ಪವನ್ ೨೦೨೧ರಲ್ಲಿ ಮದುವೆಯಾಗಿದ್ದು, ಪವನ್ ಕೆಲಸ ಇಲ್ಲದೆ ಮನೆಯಲ್ಲಿಯೇ ಇರುತ್ತಿದ್ದರಿಂದ ನಾನೇ ಕೆಲಸಕ್ಕೆ ಹೋಗಿ ಮನೆ ಸಾಗಿಸುತ್ತಿದ್ದೆ. ನಂತರ ಪವನ್ ಕಲಾ ಸಾಮ್ರಾಟ್ ಟೀಂ ಅಕಾಡೆಮಿ ಎಂಬ ಫಿಲ್ಮ್ ಇನ್ಸ್ಟಿಟ್ಯೂಟ್ ಪ್ರಾರಂಭಿಸಬೇಕೆಂದು ಯೋಚಿಸಿದ್ದರು.

ಇದಕ್ಕಾಗಿ ನನ್ನ ಬಳಿ ದುಡ್ಡು ಕೇಳಿದ್ದರು. ಆಗ ನನ್ನ ತಾಯಿಯ ಒಡವೆ ಕೊಟ್ಟಿದ್ದೆ. ಆದ್ರೆ ಬಳಿಕ ಲಾಸ್ ಆಗಿ ಇನ್ಸ್ಟಿಟ್ಯೂಟ್ ಮುಚ್ಚಬೇಕಾದ ಪರಿಸ್ಥಿತಿ ಬಂತು.

ಮದುವೆಯಲ್ಲಿ ೧ ಲಕ್ಷ ರೂ. ಮೌಲ್ಯದ ಉಂಗುರ ಹಾಗೂ ಮದುವೆ ಖರ್ಚು ನೋಡಿಕೊಂಡಿದ್ದೆವು. ವರದಕ್ಷಿಣೆ ಕೊಟ್ಟರೂ ಹಲ್ಲೆ ನಡೆಸಿ ಹೆಚ್ಚಿನ ಹಣಕ್ಕೆ ಒತ್ತಾಯಿಸಿದ್ದಾರೆ. ಹೀಗಾಗಿ ಜಗಳ ಆಗಿ ನನ್ನನ್ನು ಮನೆಯಿಂದ ಹೊರ ಹಾಕಿದ್ದರು. ಇದರಿಂದ ನನಗೆ ಹಾಗೂ ನನ್ನ ಮಗನಿಗೆ ತೊಂದರೆಯಾಗಲಿದೆ, ಒಂದು ವೇಳೆ ಏನಾದರೂ ಆದರೆ ಇವರುಗಳೇ ಕಾರಣ ಎಂದು ಆರೋಪಿಸಿ, ಕ್ರಮಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.