Home ಜಿಲ್ಲೆ ನೀರು ಸರಬರಾಜಿಗೆ ಅಡ್ಡಿ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ:ಸಚಿವ ಈಶ್ವರ ಖಂಡ್ರೆ

ನೀರು ಸರಬರಾಜಿಗೆ ಅಡ್ಡಿ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ:ಸಚಿವ ಈಶ್ವರ ಖಂಡ್ರೆ

ಬೀದರ, ಮೇ.05: ಬೇಸಿಗೆಯ ತಾಪದ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ ಕುಡಿಯುವ ನೀರು ಸರಬರಾಜಿಗೆ ಯಾವುದೇ ರೀತಿಯ ಅಡ್ಡಿಯನ್ನುಂಟು ಮಾಡುವವರ ವಿರುದ್ಧ ಅಧಿಕಾರಿಗಳು ಪ್ರಕರಣ ದಾಖಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯೆ ಕುರಿತು ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತ್ತಾ, ಸರಕಾರದ ಅನುದಾನದಿಂದ ಖಾಸಗಿ ಜಮೀನಿನಲ್ಲಿ ಕೊರೆಯಿಸಿದ ಕೊಳವೆ ಭಾವಿ ಅಥವಾ ತೆರೆದ ಬಾವಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಸಂದರ್ಭದಲ್ಲಿ ಕೆಲವರು ಅಡ್ಡಿಯನ್ನುಂಟು ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಯಾರು ಎಷ್ಟೇ ಪ್ರಭಾವಿಯಾಗಿರಲ್ಲಿ, ಶಕ್ತಿಶಾಲಿಯಾಗಿರಲಿ, ಕುಡಿಯುವ ನೀರು ಸರಬರಾಜು ಮಾಡಲು ಅಡ್ಡಿ ಪಡಿಸಿದವರ ವಿರುದ್ಧ ಅಧಿಕಾರಿಗಳು ನಿರ್ಧಾಕ್ಷಿಣ್ಯವಾಗಿ ಪ್ರಕರಣ ದಾಖಲಿಸುವಂತೆ ಸಚಿವರು ಸೂಚಿಸಿದರು.
ಜಿಲ್ಲೆಯಲ್ಲಿ ಔರಾದ್, ಭಾಲ್ಕಿ, ಬಸವಕಲ್ಯಾಣ, ಕಮಲನಗರ ತಾಲ್ಲೂಕಿನಲ್ಲಿ ಹೆಚ್ಚಿನ ನೀರಿನ ಸಮಸ್ಯೆ ಕಂಡುಬಂದಿದೆ. ಔರಾದ್‍ನ 14 ಗ್ರಾಮಗಳು ಕಮಲನಗರ 11, ಬಸವಕಲ್ಯಾಣ 10, ಭಾಲ್ಕಿಯ 8 ಗ್ರಾಮ ಸೇರಿದಂತೆ 43 ಗ್ರಾಮಗಳಲ್ಲಿ ಸಧ್ಯಕ್ಕೆ ನೀರು ಸಮಸ್ಯೆ ಉಲ್ಭಣಗೊಂಡಿದೆ. ಮೇ ಕೊನೆಯವರೆಗೆ ಸಮಸ್ಯೆ ತೀವೃವಾಗಬಹುದಾಗಿದೆ. ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರು ಸರಬರಾಜು ಮುಂದುವರಿಸುವಂತೆ ಸೂಚಿಸಿದರು. ತೀರ ಅಗತ್ಯವಿದ್ದಲ್ಲಿ ಮಾತ್ರ ಹೊಸ ಕೊಳವೆ ಬಾವಿ ಕೊರೆಯಿಸಿ ಎಂದು ತಿಳಿಸಿದರು.
ಔರಾದ್‍ನ ತಾಂಡಾಗಲ್ಲಿ ಹೆಚ್ಚಿನ ಸಮಸ್ಯೆ ಕಂಡು ಬಂದಿದೆ. ನೀರಿನ ಮಟ್ಟ 700 ರಿಂದ 800 ಅಡಿವರೆಗೆ ಕುಸಿದಿದೆ. ಅಧಿಕಾರಿಗಳು ಕೊಳವೆಬಾವಿ ಪುನಶ್ಚೇತನ ಕಾರ್ಯಕೈಗೊಳ್ಳಬೇಕು. ಪ್ಲಶಿಂಗ್ ಹಾಗೂ ಡೀಪನಿಂಗ್ ಕಾರ್ಯಕೈಗೊಳ್ಳಬೇಕೆಂದು ತಿಳಿಸಿದರು.
ಸಮಸ್ಯಾತ್ಮಕ ಗ್ರಾಮಗಳ ವಾರ್ಡಗಳಲ್ಲಿ ಸ್ಥಳೀಯ ತಹಸೀಲ್ದಾರರು, ತಾಲ್ಲೂಕ ಪಂಚಾಯತ ಇಓ, ಪಿಡಿಓ ಹಾಗೂ ಗ್ರಾಮ ಲೆಕ್ಕಾಧಿಕಾರಿ ಬೆಳಿಗ್ಗೆ ಓಡಾಡಿ ನೀರು ಸರಬರಾಜು ಸ್ಥಿತಿಯನ್ನು ನಿಭಾಯಿಸಿ ನೇರವಾಗಿ ಮೋಟಾರು ಹಚ್ಚಿಕೊಳ್ಳುವವರ ಸರಬರಾಜು ಕಟ್ ಮಾಡುವಂತೆ ಸಚಿವರು ಸೂಚಿಸಿದರು.
ಗ್ರಾಮಗಳ ಅವಶ್ಯಕತೆಗನುಗುಣವಾಗಿ ಕಾರ್ಯನಿರ್ವಹಿಸಿ ಟ್ಯಾಂಕರ್ ಸರಬರಾಜು ಮಾಡುವುದರ ಬಿಲ್‍ಗಳನ್ನು ಸಕಾಲದಲ್ಲಿ ಪಾವತಿಸುವಂತೆ ಸೂಚಿಸದರು.
ಸದ್ಯಕ್ಕೆ ಮೇವಿನ ಕೊರತೆ ಇರುವುದಿಲ್ಲ. ಮುಂದಿನ 24 ವಾರಗಳಿಗೆ ಆಗುವಷ್ಟು ಮೇವು ದಾಸ್ತಾನು ಇದೆ. ಜಾನುವಾರುಗಳಿಗೆ ನೀರು ಸಮಸ್ಯೆ ಆಗದಂತೆ ಕಾರಂಜಾ ಹಾಗೂ ಚುಳಕಿ ಜಲಾಶಯಗಳಿಂದ ನೀರು ಬಿಡಲು ಸೂಚಿಸಿದರು.
ಮುಂಗಾರು ಕೃಷಿ ಬಿತ್ತನೆಗೆ ರೈತರಿಗೆ ಬೀಜ, ರಸಗೊಬ್ಬರಗಳ ಕೊರತೆಯಾಗದಂತೆ ಹಾಗೂ ಎಲ್ಲವನ್ನು ಈಗಲೇ ಸಿದ್ಧಪಡಿಸಿಕೊಳ್ಳುವಂತೆ ಸಚಿವರು ಸೂಚಿಸಿದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಮಹಾನಗರ ಪಾಲಿಕೆಯ ಆಯುಕ್ತ ಮುಕುಲ್ ಜೈನ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.