ಬೀದರ್:ಅ.೨೯: ಕನಿಷ್ಠ ಪಿಂಚಣಿ ಜಾರಿಗೊಳಿಸಬೇಕು ಎನ್ನುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಡೆಸಲು ರಾಷ್ಟ್ರೀಯ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ನಿರ್ಣಯಿಸಿದೆ.
ಇಲ್ಲಿಯ ದೇವಿ ಕಾಲೊನಿಯ ದೇವಿ ಮಂದಿರದಲ್ಲಿ ಮಂಗಳವಾರ ನಡೆದ ಸಮಿತಿಯ ಮಾಸಿಕ ಸಭೆಯಲ್ಲಿ ಈ ಕುರಿತು ಒಕ್ಕೊರಲ ತೀರ್ಮಾನ ಕೈಗೊಳ್ಳಲಾಯಿತು.
೧೯೯೫ ರ ಭವಿಷ್ಯ ನಿಧಿ ಪಿಂಚಣಿ ಯೋಜನೆ ಸದಸ್ಯರಿಗೆ ಮಾಸಿಕ ಕನಿಷ್ಠ ರೂ. ೭,೫೦೦ ಪಿಂಚಣಿ, ತುಟ್ಟಿ ಭತ್ಯೆ, ವೈದ್ಯಕೀಯ ಭತ್ಯೆ ಕೊಡಲು ಒತ್ತಾಯಿಸಿ ಕೇಂದ್ರ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ ಸಮಿತಿಯ ಜಿಲ್ಲಾ ಘಟಕದ ಸಂಪೂರ್ಣ ಬೆಂಬಲ ಇದೆ ಎಂದು ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಶೆಟಕಾರ್ ಹೇಳಿದರು.
ನಮ್ಮ ಬೇಡಿಕೆಗಳು ಈಡೇರುವುದು ಶತ ಸಿದ್ಧ. ಹೀಗಾಗಿ ಸಮಿತಿಯ ಸದಸ್ಯರು ನಿರಾಶರಾಗಬಾರದು ಎಂದು ತಿಳಿಸಿದರು.
೨೦೨೪ ರ ಜುಲೈನಲ್ಲಿ ಸದಸ್ಯತ್ವ ಪಡೆದವರು, ಸದಸ್ಯತ್ವ ನವೀಕರಿಸಬೇಕು. ಅರ್ಹರು ಅಜೀವ ಸದಸ್ಯತ್ವ ಪಡೆಯಬೇಕು ಎಂದು ಮನವಿ ಮಾಡಿದರು.
ಸಮಿತಿಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶ ಬಾಬು, ಬಸಯ್ಯ ಸ್ವಾಮಿ, ಕಾರ್ತಿಕ ಸ್ವಾಮಿ, ಕಮಲಾಕರ್, ಬಾಬು ಸ್ವಾಮಿ ಚೌಕಿಮಠ, ಶಾಂತವೀರ ಸ್ವಾಮಿ, ಇಕ್ಬಾಲ್, ಸೂರ್ಯಕಾಂತ, ವೀರಣ್ಣ, ಮನೋಹರ, ವೀರಣ್ಣ ನೇಳಗಿ, ರವಿಕಾಂತ, ಭಗವಾನ್, ನರಸಿಂಗ್, ಅಬ್ದುಲ್ ಸತ್ತಾರ್, ಸಿದ್ರಾಮಯ್ಯ ಸ್ವಾಮಿ, ಅಬ್ದುಲ್ ರೌಫ್ ಮತ್ತಿತರರು ಹಾಜರಿದ್ದರು.























