
ಶಿಡ್ಲಘಟ್ಟ-ಮೇ,೨೪-ಪ್ರಕೃತಿಯಲ್ಲಿ ನೈಸರ್ಗಿಕವಾಗಿ ನಡೆಯುವ ಹಲವಾರು ಜೀವಚಕ್ರ ಮತ್ತು ಪರಿಸರ ಪ್ರಕ್ರಿಯೆಗಳ ಫಲವಾಗಿ ಇಂದು ಮಾನವ ಜೀವನ ಸಮತೋಲನದಲ್ಲಿದೆ. ಆದರೆ ಅರಣ್ಯ ನಾಶ, ಮಣ್ಣಿನ ಸವಕಳಿ, ಜೀವ ವೈವಿಧ್ಯದ ಕುಸಿತ ಮತ್ತು ಹವಾಮಾನ ಬದಲಾವಣೆಗಳಂತಹ ಸವಾಲುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಎಫ್‌ಇಎಸ್ ಸಂಸ್ಥೆಯ ಉಪ ಯೋಜನಾಧಿಕಾರಿಯಾದ ಎಸ್.ಜಿ. ಗೋಪಿ ತಿಳಿಸಿದರು.
ತಾಲೂಕಿನ ಬಸೆಟ್ಟಹಳ್ಳಿ ಸಮೀಪವಿರುವ ರಾಮಲಿಂಗೇಶ್ವರ ಬೆಟ್ಟದ ಸುತ್ತಮುತ್ತ ಪ್ರದೇಶದಲ್ಲಿ ಸ್ಥಳೀಯ ಅರಣ್ಯ ಬೀಜಗಳ ಸಂಗ್ರಹಣೆ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ, ಜೀವ ವೈವಿಧ್ಯ ಉಳಿವು ಹಾಗೂ ಸ್ಥಳೀಯ ಅರಣ್ಯ ಪುನರುಜ್ಜೀವನವನ್ನು ಉತ್ತೇಜಿಸುವ ಉದ್ದೇಶದಿಂದ ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆಯ ವತಿಯಿಂದ ಯಶಸ್ವಿಯಾಗಿ ಆಯೋಜಿಸಲಾಯಿತು.
ಎಫ್‌ಇಎಸ್ ಸಂಸ್ಥೆ ಪ್ರತಿ ವರ್ಷದಂತೆ ಈ ವರ್ಷವೂ ಸ್ಥಳೀಯ ಅರಣ್ಯ ಬೀಜಗಳ ಸಂಗ್ರಹಣೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಂಗ್ರಹಿಸಲಾದ ಬೀಜಗಳನ್ನು ಒನ್ ಪ್ಲಸ್ ತ್ರೀ ಮಾದರಿಯಡಿ ಸಸಿ ನೆಡುವ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತದೆ ಎಂದು ಹೇಳಿದರು. ಈ ಮಾದರಿಯಲ್ಲಿ ಒಂದು ಸಸಿಯೊಂದಿಗೆ ಅದರ ಸುತ್ತಮುತ್ತ ಸ್ಥಳೀಯ ಬೀಜಗಳನ್ನು ಬಿತ್ತನೆ ಮಾಡುವುದರಿಂದ, ಯಾವುದಾದರೂ ಕಾರಣಗಳಿಂದ ನೆಟ್ಟ ಸಸಿ ನಾಶವಾದರೂ ಬೀಜಗಳಿಂದ ಹೊಸ ಮೊಳಕೆಗಳು ಬೆಳೆಯುವ ಸಾಧ್ಯತೆ ಹೆಚ್ಚುತ್ತದೆ. ಇದರಿಂದ ನೈಸರ್ಗಿಕವಾಗಿ ಗಿಡಮರಗಳ ಪುನರುತ್ಥಾನ ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ಎಫ್‌ಇಎಸ್ ಸಂಸ್ಥೆಯ ಎನ್. ರಮೇಶ್ ಮಾತನಾಡಿವಿವಿಧ ಕಾಲಮಾನಗಳಲ್ಲಿ ಲಭ್ಯವಾಗುವ ಅರಣ್ಯ ಬೀಜಗಳ ಕುರಿತು ಸಮುದಾಯದೊಂದಿಗೆ ಚರ್ಚಿಸಿ ಬೀಜ ಕ್ಯಾಲೆಂಡರ್ ಸಿದ್ಧಪಡಿಸುವ ಯೋಜನೆಯಲ್ಲಿ ಹಾಗೂ ಪ್ರತಿ ಋತುವಿನಲ್ಲಿ ದೊರೆಯುವ ಬೀಜಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ಸಂಗ್ರಹಿಸಿ, ಸಂರಕ್ಷಿಸಿ ಪರಿಸರ ಪುನರ್ಜೀವನ ಕಾರ್ಯಗಳಲ್ಲಿ ಬಳಸುವ ಉದ್ದೇಶವನ್ನು ಸಂಸ್ಥೆ ಹೊಂದಲಾಗಿದೆ.
ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ರ ಪ್ರಕರಣ ೬೧ರ ಅಡಿಯಲ್ಲಿ ಎಫ್‌ಇಎಸ್ ಸಂಸ್ಥೆಯ ಸಹಕಾರದೊಂದಿಗೆ ರಚಿಸಲಾದ ಗ್ರಾಮ ಪರಿಸರ ಅಭಿವೃದ್ಧಿ ಸಮಿತಿಗಳು ಸಾಮೂಹಿಕ ಆಸ್ತಿಗಳ ರಕ್ಷಣೆ, ನಿರ್ವಹಣೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯಲ್ಲಿ ಸಮುದಾಯದ ಸಹಭಾಗಿತ್ವದೊಂದಿಗೆ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತಿವೆ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಪರಿಸರ ಸಂರಕ್ಷಣೆ, ಅಭಿವೃದ್ಧಿ ಮತ್ತು ಸುಸ್ಥಿರ ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಕರೆ ನೀಡಲಾಯಿತು.
ಎಫ್‌ಇಎಸ್ ಸಂಸ್ಥೆಯ ಶ್ರೀಮತಿ ಲೀಲಾವತಿ, ವೈ. ನರಸಿಂಹಪ್ಪ, ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಮುದಾಯದ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



























