
ಸಂಜೆವಾಣಿ ವಾರ್ತೆ
ಬೀದರ್: ಡಿ.೯:ಬಾಬು ಜಗಜೀವನರಾಮ ಭವನಕ್ಕೆ ಮೀಸಲಿಟ್ಟ ರೂ ೫೦ ಲಕ್ಷ ಹಣ ಲಪಟಾಯಿಸಿದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರನ್ನು ಜೈಲಿಗೆ ಕಳುಹಿಸಬೇಕು ಹಾಗೆ ಈ ಭವನ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಘೋಷಿಸಿದಂತೆ ಒಂದು ವಾರದೊಳಗೆ ಜಾರಿ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದೆಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಕಾರ್ಯಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ೨೦೧೨-೧೩ನೇ ಸಾಲಿನಲ್ಲಿ ಬೀದರ ನಗರದಲ್ಲಿ ಡಾ. ಬಾಬು ಜಗಜೀವನ ರಾಮ ಭವನ ನಿರ್ಮಾಣಕ್ಕೆ ಅಂದಿನ ಸಮಾಜ ಕಲ್ಯಾಣ ಸಚಿವ ಎ. ನಾರಾಯಣಸ್ವಾಮಿ ಅವರು ರೂ.೧.೦೦ ಕೋಟಿ ರೂಪಾಯಿ ಅನುದಾನವನ್ನು ಭವನ ನಿರ್ಮಾಣಕ್ಕೆ ಮಂಜೂರು ಮಾಡಿರುತ್ತಾರೆ. ಅಂದಿನ ಜಿಲ್ಲಾಧಿಕಾರಿಗಳು, ಬೀದರ ನೌಬಾದ ನಗರದ ಡಯಟ್ ಕಾಲೇಜ್ ಹಿಂದುಗಡೆ ೨-೦೦ ಎಕರೆ ಜಮೀನನ್ನು ಭವನ ನಿಮಾರ್ಣಕ್ಕೆ ಗುರುತಿಸಿ ಗುದ್ದಲಿ ಪೂಜೆ ಕೂಡ ನೇರವೆರಿಸಲಾಗಿರುತ್ತದೆ. ಕಾಮಗಾರಿ ಪ್ರಾರಂಭ ಮಾಡುವ ವೇಳೆಯಲ್ಲಿ ಈ ಜಮೀನಿನ ಕೆಳಗಡೆ ಕರೇಜ್ ಇರುವುದರಿಂದ ಕಾಮಗಾರಿ ಸ್ಥಗೀತಗೊಳಿಸಿ ತದನಂತರ ಸುಮಾರು ೫-೬ ವರ್ಷಗಳ ಕಾಲ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಡ್ಡಾಡಿದ ನಂತರ ಆಗಿನ ಜಿಲ್ಲಾಧಿಕಾರಿಗಳು ಬೀದರ ನಗರದ ಚಿಕ್ಕಪೇಟನಲ್ಲಿ ೧ ಎಕರೆ ಜಮೀನನ್ನು ಭವನ ನಿರ್ಮಾಣಕ್ಕೆ ಮಂಜೂರು ಮಾಡಿರುತ್ತಾರೆ. ದಿನಾಂಕ: ೦೫-೦೪-೨೦೨೫ ರಂದು ಚಿಕ್ಕಪೇಟ್‌ನ ಭವನಕ್ಕೆ ಮೀಸಲಿಟ್ಟ ಜಮೀನಿನಲ್ಲಿ ಹಾಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ, ಪೌರಾಡಳಿತ ಸಚಿವರಾದ ರಹಿಂ ಖಾನ, ಹಾಗೂ ಪ್ರಸ್ತುತ್ ಜಿಲ್ಲಾಧಿಕಾರಿ ಶೀಲ್ಪಾ ಶರ್ಮಾ, ಸಮಾಜ ಕಲ್ಯಾಣ ಉಪನಿರ್ದೇಶಕರು ಸೇರಿ ಕಾಮಗಾರಿ ಪ್ರಾರಂಭಿಸಲು ಗುದ್ದಲಿ ಪೂಜೆ ನೇರವೆರಿಸಿರುತ್ತಾರೆ. ಗುದ್ದಲಿ ಪೂಜೆ ನೇರವೆರಿಸಿದ ನಂತರ ಈಶ್ವರ ಖಂಡ್ರೆ, ರವರು ಭವನ ನಿರ್ಮಾಣಕ್ಕೆ ರೂ.೫.೦೦ ಕೋಟಿ ಹಣದ ಅಶ್ವಾಸನೆ ಕೂಡ ನೀಡಿರುತ್ತಾರೆ. ೨೦೧೨-೧೩ನೇ ಸಾಲಿನಲ್ಲಿ ಭವನ ನಿರ್ಮಾಣಕ್ಕೆ ಮೀಸಲಿಟ್ಟ ರೂ.೧.೦೦ ಕೋಟಿ ರೂಪಾಯಿ ಉಳಿದಿರುತ್ತದೆ. ಆ ನಂತರ ಕಾಮಗಾರಿ ಪ್ರಾರಂಭೀಸಲು ಸಮಾಜ ಕಲ್ಯಾಣ ಉಪನಿರ್ದೇಶಕರು ಹಿಂದೇಟು ಹಾಕುತ್ತಿರುತ್ತಾರೆ. ಹೋಗಿ ವಿಚಾರಿಸಿದ್ದಾಗ ರೂ.೧.೦೦ ಕೋಟಿ ರೂಪಾಯಿಗಳು ನಿರ್ಮಿತಿ ಕೇಂದ್ರಕ್ಕೆ ಹಣ ಬಿಡುಗಡೆ ಮಾಡಿರುತ್ತೇವೆ ಎಂದು ಹೇಳುತ್ತಾರೆ. ಅಲ್ಲಿ ವಿಚಾರಿಸಿದ್ದಾಗ ನಮಗೆ ಭವನ ನಿರ್ಮಾಣಕ್ಕೆ ನಯಾ ಪೈಸೆ ಕೂಡ ಬಂದಿಲ್ಲ ಎಂದು ಹೇಳಿರುತ್ತಾರೆ. ತದನಂತರ ಸಮಾಜ ಕಲ್ಯಾಣ ಉಪನಿರ್ದೇಶಕರು ಇವರಿಗೆ ಹೊಗಿ ವಿಚಾರಿಸಿದ್ದಾಗ ನಿರ್ಮಿತಿ ಕೇಂದ್ರ ಇಲ್ಲ, ಕೆ.ಆರ್.ಐ.ಡಿ.ಎಲ್. ಗೆ ಹಣ ಕಳಿಸಿದ್ದೇವೆ ಎಂದು ಹೇಳುತ್ತಾರೆ. ಅಲ್ಲಿನ ಅಧಿಕಾರಿಗಳಿಗೆ ವಿಚಾರಿಸಿದ್ದಾಗ ನಮಗೆ ಭವನ ನಿರ್ಮಾಣಕ್ಕೆ ನಯಾ ಪೈಸೆ ಕೂಡ ಬಂದಿಲ್ಲ ಎಂದು ಹೇಳಿರುತ್ತಾರೆ. ಮತ್ತೆ ಪುನ:ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ವಿಚಾರಿಸಿದಾಗ ಒಂದು ಕೋಟಿ ರೂಪಾಯಿಯಲ್ಲಿ ರೂ.೫೦.೦೦ ಲಕ್ಷ ಸರ್ಕಾರ ಹಿಂಪಡೆದಿರುತ್ತದೆ ಎಂದು ತಿಳಿಸಿರುತ್ತಾರೆ. ಉಳಿದ ರೂ.೫೦.೦೦ ಲಕ್ಷ ರೂಪಾಯಿ ಅಧಿಕಾರಿಗಳು ನುಂಗಿ ನೀರು ಕುಡಿದಿರುತ್ತಾರೆ. ಇದರ ಬಗ್ಗೆ ತನಿಖೆ ಕೈಗೊಂಡು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರನ್ನು ಜೈಲಿಗೆ ಕಳುಹಿಸಿ, ಆದಷ್ಟು ಬೇಗ ಭವನದ ಕಾಮಗಾರಿ ಪ್ರಾರಂಭ ಮಾಡಬೇಕು. ಒಂದು ವೇಳೆ ವಿಳಂಬ ಮಾಡಿದ್ದೆ ಆದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಅನಿರ್ಧಷ್ಟ ಅವಧಿ ಧರಣಿ ಸತ್ಯಾಗೃಹ ಹಮ್ಮಿಕೊಳ್ಳುತ್ತೇವೆ ಎಂದು ಫರ್ನಾಂಡಿಸ್ ಹಿಪ್ಪಳಗಾಂವ ಎಚ್ಚರಿಸಿದ್ದಾರೆ.
ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್ ಹಿಪ್ಪಳಗಾಂವ, ಜಿಲ್ಲಾ ಉಪಾಧ್ಯಕ್ಷ ಕಮಲಾಕರ ಹೆಗಡೆ, ಸಾಮಾಜಿಕ ಜಾಲತಾಣ ಮುಖ್ಯಸ್ಥ ಹರೀಶ ಗಾಯಕವಾಡ, ಸದಸ್ಯರಾದ ಅಬ್ರಾಹಂ ಸೂರ್ಯವಂಶಿ, ರಾಹುಲ ನಂದಿ, ಮಾರ್ಕ್ ಸಾಗರ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.
























