
ಕಲಬುರಗಿ: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಂಜಾರಾ ಸಮುದಾಯದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯವಾಗಿದ್ದು, ಇಂತಹ ಸಾಧಕರಿಂದ ಯುವಜನತೆ ಪ್ರೇರಣೆ ಪಡೆಯಬೇಕು ಎಂದು ಗಣ್ಯರು ಅಭಿಪ್ರಾಯಪಟ್ಟರು.
ನಗರದ ಬಂಜಾರಾ ಭವನದಲ್ಲಿ ಬಂಜಾರಾ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ, ಪ್ರದೇಶ ಬಂಜಾರ ಸೇವಾ ಸಂಘ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.
ಅಮೆರಿಕನ್ ವಿಸ್ಡಂ ಪೀಸ್ ಯೂನಿವರ್ಸಿಟಿ ಅಸೋಸಿಯೇಷನ್ ಆಫ್ ಇಂಟರ್ನ್ಯಾಷನಲ್ ಕಾಲೇಜ್ ಇನ್ ಟೆಕ್ನಿಕಲ್ ಎಜುಕೇಶನ್, ಯುಎಸ್ಎ ವತಿಯಿಂದ ಗೌರವ ಡಾಕ್ಟರೇಟ್ ಪಡೆದ ಶ್ರೀ ಅನಿಲ್ ಸಾಹೇಬ್ ಮಹಾರಾಜ (ತರಿತಾಂಡ) ಅವರನ್ನು ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದ ಸಾಧನೆಗಾಗಿ, ಶ್ರೀ ಬಿ.ಬಿ. ನಾಯಕ್ ಅವರನ್ನು ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ, ಆಲ್ ಇಂಡಿಯಾ ಬಂಜಾರಾ ಸಂದೇಶ್ ಟಿವಿ ಸಂಸ್ಥಾಪಕ ಶ್ರೀ ಸುಭಾಷ್ ಚವಾಣ್ ಅವರನ್ನು ಮಾಧ್ಯಮ ಮತ್ತು ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸಲಹೆಗಾರರಾಗಿ ಆಯ್ಕೆಯಾದ ಶ್ರೀ ಪ್ರೇಮ್ ಸಿಂಗ್ ಚೌಹಾಣ್ ಹಾಗೂ ವೃತ್ತಿಯಿಂದ ನಿವೃತ್ತರಾದ ಶ್ರೀ ಗುರುನಾಥ್ ರಾಥೋಡ್ ಅವರನ್ನು ಸಹ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಕೆಸರಟಗಿ ಸುಕ್ಷೇತ್ರದ ಪರಮಪೂಜ್ಯ ಮಾತೋಶ್ರೀ ಲತಾದೇವಿ ಹಾಗೂ ನವಶಕ್ತಿ ಪೀಠದ ಶ್ರೀ ಮುರಹರಿ ಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಬಂಜಾರಾ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬು ಎಂ. ಜಾಧವ ಪ್ರಾಸ್ತಾವಿಕವಾಗಿ ಮಾತನಾಡಿ, ಬಂಜಾರ ನೌಕರರ ಸಂಘವು ಸುಮಾರು 45 ವರ್ಷಗಳಿಂದ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಸಮಾಜದ ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಎಲೆಮರೆಯ ಕಾಯಿಯಂತೆ ಸಮಾಜ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವುದು ಸಂಘದ ಪ್ರಮುಖ ಉದ್ದೇಶವಾಗಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಹರಿಶ್ಚಂದ್ರ ಎಸ್. ರಾಥೋಡ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಂಜಾರ ನೌಕರರ ಸಂಘವು ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮೌಲ್ಯಾಧಾರಿತ ಸಮಾಜ ನಿರ್ಮಾಣ ಹಾಗೂ ಸಮಾಜದ ಜಾಗೃತಿಗಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ತಾರಾನಾಥ್ ಚವ್ಹಾಣ, ಎಸ್.ಎಂ. ರಾಠೋಡ್, ಕೆ.ಎಸ್. ನಾಯಕ್ ರಾಥೋಡ್, ಸತೀಶ್ ಚವ್ಹಾಣ, ಸೋಮು ರಾಥೋಡ್, ಸಂತೋಷ್ ಚವ್ಹಾಣ, ರಾಜೇಂದ್ರ ರಾಥೋಡ್, ದೇವಿದಾಸ್ ಚವ್ಹಾಣ, ಗೋಪಾಲ್ ರಾಥೋಡ್, ಅನಿಲ್ ಚವ್ಹಾಣ, ರಾಕೇಶ್ ಚವ್ಹಾಣ, ಖೇಮಸಿಂಗ್ ಪವರ್ ಸೇರಿದಂತೆ ಸಮಾಜದ ಗಣ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ನೌಕರ ಬಂಧುಗಳು ಉಪಸ್ಥಿತರಿದ್ದರು.























