
ಮುಳಬಾಗಿಲು ಜೂ.೨೯- ಜಿಲ್ಲಾಧಿಕಾರಿಗಳ ಆದೇಶದಂತೆ ಗಡಿಭಾಗದ ಚುಕ್ಕನಹಳ್ಳಿ ೧೦ ರೈತರ ಮರಗಿಡಗಳ ೨ನೇ ಪರಿಹಾರ ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಿರುವ ಚಿತ್ತೂರು ಪಿ.ಡಿ. ರೈತ ವಿರೋಧಿ ಧೋರಣೆ ಖಂಡಿಸಿ ಜುಲೈ ೩ರ ಗುರುವಾರದಿಂದ ಪರಿಹಾರ ಬಿಡುಗಡೆಯಾಗುವವರೆಗೂ ಭೂಸ್ವಾಧೀನಾ ಜಮೀನಿನಲ್ಲಿ ಕಾಮಗಾರಿ ನಡೆಸದಂತೆ ನಿರಂತರ ಹೋರಾಟ ನಡೆಸಲು ನೊಂದ ರೈತರ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಪರಿಹಾರ ವಂಚಿತ ನೊಂದ ರೈತರಾದ ಚುಕ್ಕನಹಳ್ಳಿ ರಾಜಣ್ಣ, ಮೀಸೆ ವೆಂಕಟರವಣಪ್ಪ ಮಾತನಾಡಿ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಗಡಿಭಾಗದ ಚುಕ್ಕನಹಳ್ಳಿ ನೊಂದ ೧೦ ಜನ ರೈತರು ಕೈಮುಗಿದು ಬೇಡಿಕೊಳ್ಳುತ್ತೇವೆ. ದಯವಿಟ್ಟು ಜುಲೈ ೩ರ ಗುರುವಾರದಿಂದ ಚಿತ್ತೂರು ಪಿ.ಡಿ. ವಿರುದ್ಧ ೨ನೇ ಕಂತಿನ ಪರಿಹಾರದ ಬಿಡುಗಡೆಗಾಗಿ ನಡೆಯುವ ಹೋರಾಟಕ್ಕೆ ಯಾವುದೇ ಪೊಲೀಸ್ ಅನುಮತಿ, ಬಂದೋಬಸ್ತ್ ನೀಡಬೇಡಿ. ನಾವು ಕೇಳುವುದೂ ಇಲ್ಲ. ಏಕೆಂದರೆ ೧೧ ವರ್ಷದಿಂದ ನಿರಂತರವಾಗಿ ನಮ್ಮ ಪರಿಹಾರ ಕೊಡಿ ಎಂದರೂ ನ್ಯಾಯಯುತ ಬೇಡಿಕೆ ಈಡೇರುತ್ತಿಲ್ಲ. ಅನುಮತಿ ಕೇಳುತ್ತೇವೆ. ಹೋರಾಟ ಮಾಡುತ್ತೇವೆ. ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದರು.
ಸಂಬಂಧಪಟ್ಟ ಹಿರಿಯ ಪೊಲೀಸರು ಬರುತ್ತಾರೆ, ಬಲವಂತದಿಂದ ಹೋರಾಟ ಕೈಬಿಡಿ, ನ್ಯಾಯ ಕೊಡಿಸುತ್ತೇವೆಂದು ಹೇಳಿ ನಂತರ ನಮ್ಮ ಸಮಸ್ಯೆ ಕೇಳುವವರಿಲ್ಲ. ಚಿತ್ತೂರು ಪಿ.ಡಿ.ಗೆ ಕಾನೂನಿನ ಭಯವೂ ಇಲ್ಲವೆಂದು ನೊಂದ ರೈತರೇ ಶಾಂತಿಯುತವಾಗಿ ಕಾಮಗಾರಿ ಸ್ಥಗಿತಗೊಳಿಸಿ ನ್ಯಾಯ ಪಡೆದುಕೊಳ್ಳುತ್ತೇವೆಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದರು.
ನಮ್ಮ ಭೂಮಿ ವಾಪಸ್ ಕೊಡಿ ಇಲ್ಲವೇ ನಮಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಪರಿಹಾರ ಕೊಡಿ ಇಲ್ಲವಾದರೆ ಮಾನ್ಯ ರಾಷ್ಟ್ರಪತಿಗಳೇ ನಮ್ಮ ಜೀವ ಕಳೆದುಕೊಳ್ಳಲು ದಯಾ ಮರಣ ಕೊಟ್ಟು ಪುಣ್ಯ ಕಟ್ಟುಕೊಳ್ಳಿ. ಅದುವರೆಗೂ ೩ ಕಿಮೀ ವ್ಯಾಪ್ತಿಯ ೧೦ ರೈತರ ಜಮೀನಿನಲ್ಲಿ ಯಾವುದೇ ಕಾಮಗಾರಿ ನಡೆಸಬಾರದು, ವಾಹನಗಳು ಚಲಿಸಬಾರದು ಎಂಬ ಎಚ್ಚರಿಕೆಯನ್ನು ಗುತ್ತಿಗೆದಾರರಿಗೆ, ಚಿತ್ತೂರು ಪಿ.ಡಿ. ರವರಿಗೆ ನೀಡಿದರು.
ಜಾನುವಾರುಗಳು, ಕೋಳಿಗಳು, ನಾಯಿಗಳ ಸಮೇತ ಮರಗಿಡಗಳ ಪರಿಹಾರ ನೀಡುವವರೆಗೂ ಶಾಂತಿಯುತವಾಗಿ ನಮ್ಮ ಜಮೀನಿನಲ್ಲಿ ಮೇಯಿಸಿಕೊಂಡು ವಿಭಿನ್ನ ಹೋರಾಟ ಮಾಡುತ್ತೇವೆ. ಆ ಸಮಯದಲ್ಲಿ ಗುತ್ತಿಗೆದಾರರು ಕಾಮಗಾರಿ ಮಾಡಲು ಮುಂದಾಗುವ ಜೊತೆಗೆ ಟಿಪ್ಪರ್ ಮತ್ತಿತರ ವಾಹನಗಳು ಸಂಚರಿಸಿದರೆ ನಮ್ಮ ಜಾನುವಾರುಗಳಿಗೆ ತೊಂದರೆಯಾಗುವುದರಿಂದ ಯಾವುದೇ ಕಾರಣಕ್ಕೂ ವಾಹನಗಳನ್ನು ೩ ಕಿಮೀ ವ್ಯಾಪ್ತಿಯಲ್ಲಿ ಸಂಚರಿಸದಂತೆ ರೈತರೇ ನಿರ್ಬಂಧ ವಿಧಿಸಿ ಹೊಸ ರೈತ ಕಾನೂನು ಜುಲೈ ೩ ರಿಂದಲೇ ಜಾರಿ ಮಾಡುತ್ತಿದ್ದು, ಕಾನೂನು ಉಲ್ಲಂಘನೆ ಮಾಡಿದರೆ ರೈತರೇ ಕಾನೂನು ಕೈಗೆತ್ತಿಕೊಳ್ಳುತ್ತೇವೆಂದು ಎಚ್ಚರಿಕೆ ನೀಡಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ದೇವರು ವರ ಕೊಟ್ಟರೂ…. ಪೂಜಾರಿ ವರ ಕೊಡಲಿಲ್ಲ…ಎಂಬ ಗಾದೆ ಮಾತಿನಂತೆ ಜಿಲ್ಲಾಧಿಕಾರಿಗಳು ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ಭೂಸ್ವಾಧೀನವಾಗಿರುವ ಗಡಿಭಾಗದ ಚುಕ್ಕನಹಳ್ಳಿ ಸರ್ವೇ ನಂ.೩೫ರಲ್ಲಿನ ರೈತರ ೨ನೇ ಕಂತಿನ ಮರಗಿಡಗಳ ೧.೧೭ ಕೋಟಿ ಪರಿಹಾರ ಕೂಡಲೇ ಖಾತೆದಾರರಿಗೆ ಬಿಡುಗಡೆ ಮಾಡುವಂತೆ ಮೇ೧೭ರಂದು ತೆರೆದ ನ್ಯಾಯಾಲಯದಲ್ಲಿ ಆದೇಶ ಮಾಡಿ ೨ ತಿಂಗಳಾದರೂ ಇದುವರೆಗೂ ಹಣ ಬಿಡುಗಡೆ ಮಾಡದೆ ಚಿತ್ತೂರು ಸೈಟ್ ಇಂಜಿನಿಯರ್ ಕಾರ್ತಿಕ್ ಅವರು ಜಿಲ್ಲಾಧಿಕಾರಿಗಳು ಕನ್ನಡದಲ್ಲಿ ಆದೇಶ ಮಾಡಿದ್ದಾರೆ. ನಮಗೆ ಅರ್ಥವಾಗುತ್ತಿಲ್ಲ. ಇಂಗ್ಲೀಷ್ ನಲ್ಲಿ ಆದೇಶ ಬೇಕು ಎಂದು ಯಾವುದೋ ನೆಪ ಹೇಳಿ ಗಡಿಭಾಗದ ರೈತರ ಪರಿಹಾರ ಹಣವನ್ನು ಲಪಟಾಯಿಸಲು ಸಂಚು ನಡೆಸುತ್ತಿದ್ದಾರೆಂದು ಚಿತ್ತೂರು ಪಿ.ಡಿ. ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
೨೦೧೬ರಲ್ಲಿ ಭೂಸ್ವಾಧೀನವಾದಾಗ ವಿಶೇಷ ಭೂಸ್ವಾಧೀನಾಧಿಕಾರಿಗಳು ಕಂದಾಯ, ಸರ್ವೇ, ತೋಟಗಾರಿಕೆ, ಕೃಷಿ, ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆಗೆ ಚಿತ್ತೂರು ಪಿ.ಡಿ. ರವರ ಸಮ್ಮುಖದಲ್ಲಿ ಭೂಮಿ ಕಳೆದುಕೊಂಡ ಚುಕ್ಕನಹಳ್ಳಿ ಸರ್ವೇ ನಂ.೩೫ ರಲ್ಲಿ ಮರಗಿಡಗಳ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳೇ ನಡೆಸಿ ವರದಿ ತಯಾರು ಮಾಡಿ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ನೀಡಿ ಮೊದಲನೇ ಕಂತು ಬಿಡುಗಡೆಯಾಗಿದೆ. ಆದರೆ, ಉಳಿಕೆಯಲ್ಲಿನ ೨ನೇ ಕಂತಿನ ಪರಿಹಾರದಲ್ಲಿ ಲೋಪದೋಷವಿದೆ ಎಂದು ಚಿತ್ತೂರು ಪಿ.ಡಿ. ಹಾಗೂ ಸೈಟ್ ಇಂಜಿನಿಯರ್ ಅವರು ನಿರಂತರವಾಗಿ ಆರೋಪ ಮಾಡಿಕೊಂಡು ರೈತರನ್ನು ಶೋಷಣೆ ಮಾಡುತ್ತಿದ್ದಾರೆಂದು ಕಿಡಿಕಾರಿದರು.
೩ ದಿನದೊಳಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಗಡಿಭಾಗದ ರೈತರ ೨ನೇ ಕಂತಿನ ಮರಗಿಡಗಳ ಪರಿಹಾರವನ್ನು ಚಿತ್ತೂರು ಪಿ.ಡಿ. ಖಾತೆಯಿಂದ ಖಾತೆದಾರರಿಗೆ ಬಿಡುಗಡೆಯಾಗಬೇಕು. ಇಲ್ಲವಾದರೆ ಮೇಲ್ಕಂಡ ದಿನಾಂಕದಿಂದ ೩ ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ವಾಹನಗಳು ಚಲಿಸದಂತೆ ನಿರ್ಬಂಧದ ಶಾಂತಿಯುತ ಹೋರಾಟವನ್ನು ಕೈಗೆತ್ತಿಕೊಳ್ಳುವ ಎಚ್ಚರಿಕೆಯನ್ನು ಚಿತ್ತೂರು ಪಿ.ಡಿ.ಗೆ ನೀಡುತ್ತಿದ್ದೇವೆ.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ವಿಶ್ವ, ಜನಾರ್ಧನ್, ಸುಬ್ರಮಣಿ, ನಾರಾಯಣಸ್ವಾಮಿ, ರಾಜಣ್ಣ, ಮಾರಪ್ಪ, ನಟರಾಜ್, ಪುತ್ತೇರಿ ರಾಜು, ಗಿರೀಶ್, ಕುಮಾರ್, ಮಂಗಸಂದ್ರ ತಿಮ್ಮಣ್ಣ, ಯಲುವಳ್ಳಿ ಪ್ರಭಾಕರ್, ಹೆಬ್ಬಣಿ ಆನಂದರೆಡ್ಡಿ ಮುಂತಾದವರಿದ್ದರು.