
ಚನ್ನಮ್ಮನ ಕಿತ್ತೂರು,ನ7: ರಾಷ್ಟ್ರೀಯ ಹೆದ್ದಾರಿ 4ರ ಚನ್ನಮ್ಮನ ವೃತ್ತದಲ್ಲಿ ನಡೆಯುತ್ತಿರುವ ರೈತರ ಹೋರಾಟ ಮುಂದುವರಿದಿದ್ದು, ಈ ಹೋರಾಟಕ್ಕೆ ವಿವಿಧ ಜನಪ್ರತಿನಿದಿಗಳು, ರೈತ ಮುಖಂಡರು, ಮಠಾಧೀಶರು, ಬೆಂಬಲ ನೀಡಿದ್ದಾರೆ.
ಬೈಲೂರ ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮಿಜೀ ಮಾತನಾಡಿ, ಇಂದು ನಾವು ಹೋರಾಟ ಮಾಡುವುದು ನಾವು ಬೆಳೆದ ಕಬ್ಬಿಗೆ ಬೆಲೆ ನಿಗದಿಯಾಗಬೇಕು. ಒಬ್ಬ ಡಾಕ್ಟರ್, ಮಠಾಧೀಶರು, ರಾಜಕಾರಣಿ ಇಲ್ಲದಿದ್ದರೂ ದೇಶ ನಡೆಯುತ್ತದೆ ಆದರೆ ರೈತ ಇಲ್ಲದಿದ್ದರೆ ದೇಶವೇ ಮುಳುಗುತ್ತದೆ. ಮಂತ್ರಿಗಳು, ಸರ್ಕಾರ ರೈತರ ಕಷ್ಟ ಹಾಗೂ ಹೋರಾಟಗಳನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡು ಕಬ್ಬಿನ ದರ ನಿಗದಿ ಮಾಡಬೇಕು ಇಲ್ಲದ್ದಿದ್ದರೆ ನಾವು ಸಹ ಈ ಹೋರಾಟಕ್ಕೆ ಸಿದ್ದರಿದ್ದೇವೆ ಎಂದರು.
ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮಿಜೀ ಕಬ್ಬಿನ ದರ ನಿಗದಿಯಾಗದಿದ್ದರೆ ರೈತರೊಂದಿಗೆ ರಾತ್ರಿ-ಹಗಲು ಇಲ್ಲೇ ಇದ್ದುಕೊಂಡು ಅವರಿಗೆ ಸಂಪೂರ್ಣವಾಗಿ ಬೆಂಬಲವಾಗಿ ನಿಲ್ಲುತ್ತೇವೆಂದರು.
ಸಭೆಯಲ್ಲಿ ನಿಚ್ಚಣಕಿ ಪಂಚಾಕ್ಷರಿ ಸ್ವಾಮಿಜೀ ಹಾಗೂ ಮಾಜಿ ತೋಟಗಾರಿಕೆ ಇಲಾಖೆ ಸಚಿವ ಶಶಿಕಾಂತ ನಾಯಕ, ಎಂ.ಎಫ್. ಜಕಾತಿ, ಭೀಷ್ಠಪ್ಪ ಶಿಂಧೆ, ಅಪ್ಪೇಶ ದಳವಾಯಿ, ಬಸವರಾಜ ಪರವಣ್ಣವರ, ಹಬೀಬ ಶಿಲ್ಲೇದಾರ, ಮಡಿವಾಳಪ್ಪ ದೇವರಮನಿ, ಮೌಲಾನಾ ಹಜರತ್ ತನ್ವೀರ ಖಾಜಿ, ಮಂಜುನಾಥ ದೊಡಮನಿ, ಸರದಾರ ಸೇರಿದಂತೆ ರೈತ ಮುಖಂಡರು ಮಾತನಾಡಿದರು. ಸಭೆಯಲ್ಲಿ ಸಾವಿರಾರು ರೈತರು, ವಿವಿಧ ಮಠಾಧೀಶರು, ಇದ್ದರು.
























